ಲೈಂಗಿಕ ಕಿರುಕುಳ ಆರೋಪ; ಸಿನಿಮಾ ನಿರ್ದೇಶಕ ಮತ್ತು ಮಾಜಿ ಶಾಸಕ ಪಿ ಟಿ ಕುಂಜು ಮುಹಮ್ಮದ್ ಬಂಧನ | P T Kunja Muhammad

ಮಾಜಿ ಶಾಸಕ ಪಿ ಟಿ ಕುಂಜು ಮುಹಮ್ಮದ್
ಮಾಜಿ ಶಾಸಕ ಪಿ ಟಿ ಕುಂಜು ಮುಹಮ್ಮದ್
Published on
ತಿರುವನಂತಪುರಂ: ಮಹಿಳೆಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಮಲಯಾಳಂ ಸಿನಿಮಾ ನಿರ್ದೇಶಕ ಮತ್ತು ಮಾಜಿ ಶಾಸಕ ಪಿ ಟಿ ಕುಂಜು ಮುಹಮ್ಮದ್(P T Kunja Muhammad) ಅವರನ್ನು ಬುಧವಾರ(ಡಿ. 24) ಕೇರಳ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFK) ಮಲಯಾಳಂ ಚಲನಚಿತ್ರಗಳನ್ನು ಆಯ್ಕೆ ಮಾಡಲು ರಚಿಸಿದ್ದ ಸಮಿತಿಯ ಅಧ್ಯಕ್ಷರಗಿದ್ದ ಪಿ ಟಿ ಕುಂಜು ಮುಹಮ್ಮದ್, ಅದೇ ಸಮಿತಿಯ ಸದಸ್ಯರಾಗಿದ್ದ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಮಹಿಳೆ ನೀಡಿದ ದೂರಿನನ್ವಯ ಮಂಗಳವಾರ ಕಂಟೋನ್ಮೆಂಟ್ ಪೊಲೀಸ್ ಠಾಣಾಧಿಕಾರಿಗಳು ಕುಂಜು ಮುಹಮ್ಮದ್ ಅವರನ್ನು ವಿಚಾರಣೆ ನಡೆಸಿದ ಬಳಿಕ ಔಪಚಾರಿಕವಾಗಿ ಬಂಧಿಸಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ತಿರುವನಂತಪುರಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮುಹಮ್ಮದ್ ಅವರಿಗೆ ಏಳು ದಿನಗಳ ಒಳಗೆ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು. ಮತ್ತು ತನಿಖೆಯ ಸಮಯದಲ್ಲಿ ಬಂಧಿಸಿದರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.
1978ರಲ್ಲಿ 'ಅಶ್ವಥಾಮ' ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ ಮುಹಮ್ಮದ್, 'ಉಪ್ಪು' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಬಳಿಕ 'ಪುರುಷಾರ್ಥಂ' ಮತ್ತು 'ಸ್ವರೂಪಂ' ಎಂಬ ಎರಡು ಚಿತ್ರಗಳನ್ನು ನಿರ್ಮಿಸಿದರು, ಇವೆರಡೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ ಗಳಿಸಿದವು. 'ಮ್ಯಾಗ್ರಿಬ್' ಮತ್ತು 'ಗಾರ್ಶೋಮ್' ನಂತಹ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿವೆ.
ಕುಂಜು ಮುಹಮ್ಮದ್ ಎರಡು ಬಾರಿ ಶಾಸಕರಾಗಿದ್ದು, ಸಿಪಿಐ(ಎಂ) ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಮೊದಲು 1994ರ ಉಪಚುನಾವಣೆಯಲ್ಲಿ ಗುರುವಾಯೂರ್ ಕ್ಷೇತ್ರದಿಂದ ಗೆಲ್ಲುವ ಮೂಲಕ ಶಾಸಕರಾಗಿದ್ದು, ಬಳಿಕ 1996ರ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಗೆದ್ದು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರು. ಸದ್ಯ ಅವರು ಮಲಯಾಳಂ ಸುದ್ದಿ ಚಾನಲ್ ಕೈರಾಲಿಯ ಸ್ಥಾಪಕ ನಿರ್ದೇಶಕರಾಗಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net