ಮುಂಬೈ ಲೋಕಲ್‌ನಲ್ಲಿ 'ಜುಟ್ಟು' ಜಗಳ: ಚಲಿಸುವ ರೈಲಿನಿಂದ ಮಹಿಳೆಯನ್ನು ಕೆಳಕ್ಕೆ ಎಳೆದ ಪ್ರಯಾಣಿಕರು; ವಿಡಿಯೋ ವೈರಲ್​ | Viral Video

ಕುಸ್ತಿ ಅಖಾಡವಾದ ಮುಂಬೈ ಲೋಕಲ್​ ರೈಲು
ಕುಸ್ತಿ ಅಖಾಡವಾದ ಮುಂಬೈ ಲೋಕಲ್​ ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಕುಸ್ತಿ ಅಖಾಡವಾದ ಮುಂಬೈ ಲೋಕಲ್​ ರೈಲು
  • ಕಲ್ಯಾಣ್​ ಸ್ಟೇಷನ್​ನಲ್ಲಿ ಮಹಿಳೆಯ ಕೂದನ್ನು ಎಳೆದು ತಳ್ಳಿದ ಘಟನೆ ವರದಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್​
ಮುಂಬೈ: ಮುಂಬೈನ ಲೋಕಲ್​ ರೈಲುಗಳೆಂದರೆ ಅದು ಕೇವಲ ಪ್ರಯಾಣವಲ್ಲ, ಅದೊಂದು ನಿತ್ಯದ ಹೋರಾಟ. ಆದರೆ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಅಕ್ಷರಶಃ ಬೆಚ್ಚಿಬೀಳಿಸುವಂತಿದೆ. ಮಹಿಳಾ ಬೋಗಿಗೆ ಹತ್ತಲು ಪ್ರಯತ್ನಿಸುತ್ತಿದ್ದ ಮಹಿಳೆಯೊಬ್ಬಳನ್ನು ಜುಟ್ಟು ಹಿಡಿದು ರೈಲಿನಿಂದ ಕೆಳಕ್ಕೆ ಎಳೆದ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಫುಲ್​ ವೈರಲ್ (Video Viral)​ ಆಗುತ್ತಿದೆ.

ಅಸಲಿಗೆ ಕಲ್ಯಾಣ್ ನಿಲ್ದಾಣದಲ್ಲಿ ನಡೆದಿದ್ದೇನು?

ವೈರಲ್ ಆಗಿರುವ ವಿಡಿಯೋದಲ್ಲಿ ಕಲ್ಯಾಣ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಜನಜಂಗುಳಿಯಿಂದ ತುಂಬಿರುವುದು ಕಾಣಿಸುತ್ತದೆ. ಲೋಕಲ್ ರೈಲು ಬರುತ್ತಿದ್ದಂತೆ ಮಹಿಳೆಯರು ಬೋಗಿಗೆ ನುಗ್ಗಲು ಮುಗಿಬೀಳುತ್ತಾರೆ. ಈ ನಡುವೆ ಕಪ್ಪು ಬಣ್ಣದ ಟಾಪ್ ಧರಿಸಿದ್ದ ಮಹಿಳೆಯೊಬ್ಬಳು ಹೇಗಾದರೂ ಮಾಡಿ ಒಳಹೋಗಲು ಪ್ರಯತ್ನಿಸುತ್ತಾಳೆ. ಆದರೆ, ಆಕೆಯನ್ನು ಒಳಗೆ ಬಿಡದ ಇನ್ನೊಬ್ಬ ಮಹಿಳೆ, ಆಕೆಯ ಕೂದಲನ್ನು ಹಿಡಿದು ಬಲವಂತವಾಗಿ ಕೆಳಕ್ಕೆ ಎಳೆಯುತ್ತಾಳೆ.
ಅಷ್ಟಕ್ಕೇ ನಿಲ್ಲದ ಈ ಹೈಡ್ರಾಮಾ, ರೈಲು ಚಲಿಸಲು ಆರಂಭಿಸಿದಾಗ ಮತ್ತೊಂದು ತಿರುವು ಪಡೆಯುತ್ತದೆ. ಮಹಿಳೆ ಮತ್ತೆ ಚಲಿಸುವ ರೈಲನ್ನು ಹತ್ತಲು ಹೋಗುತ್ತಾಳೆ. ಆಗ ಬೋಗಿಯ ಒಳಗಿದ್ದ ಒಂದಿಬ್ಬರು ಮಹಿಳೆಯರು ಮತ್ತೆ ಆಕೆಯ ಕೂದಲನ್ನು ಹಿಡಿದು ಚಲಿಸುವ ರೈಲಿನಿಂದ ಪ್ಲಾಟ್‌ಫಾರ್ಮ್‌ಗೆ ತಳ್ಳುತ್ತಾರೆ. ರೈಲು ಹೋದ ನಂತರ ಪ್ಲಾಟ್‌ಫಾರ್ಮ್‌ನಲ್ಲಿ ಇವರ ನಡುವೆ ದೊಡ್ಡ ಮಟ್ಟದ ವಾಕ್ಸಮರವೇ ನಡೆಯುತ್ತದೆ.

ರಕ್ಷಣೆನಾ ಅಥವಾ ರಾಕ್ಷಸತನವಾ? ನೆಟ್ಟಿಗರ ನಡುವೆ ಜಿದ್ದಾಜಿದ್ದಿ!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಇದು ಕ್ರೌರ್ಯದ ಪರಮಾವಧಿ ಎಂದು ಕಿಡಿಕಾರಿದ್ದಾರೆ. ಆಕೆಯ ಕೂದಲನ್ನು ಹಿಡಿದು ಎಳೆದ ಮಹಿಳೆಯನ್ನು ತಕ್ಷಣ ಬಂಧಿಸಬೇಕು, ಎಂದು ಒಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಆಕೆ ಚಲಿಸುವ ರೈಲನ್ನು ಹತ್ತಲು ಹೋಗುತ್ತಿದ್ದಳು, ಕೂದಲನ್ನು ಹಿಡಿದು ಎಳೆಯದಿದ್ದರೆ ಆಕೆ ಹಳಿಗಳ ನಡುವೆ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಳು. ಕೂದಲನ್ನು ಹಿಡಿದು ಎಳೆದವರು ಆಕೆಯನ್ನು ಕಾಪಾಡಿದ್ದಾರೆ, ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ. ನನ್ನ ಕೂದಲನ್ನು ಹಿಡಿದು ಎಳೆದಿದ್ದಾರೆ ಎಂದು ದೂರು ನೀಡುವುದಕ್ಕಿಂತ, ನಾನು ಜೀವಂತವಾಗಿದ್ದೇನೆ ಎಂದು ಆಕೆ ಸಂಭ್ರಮಿಸಬೇಕು, ಎಂಬ ಕಮೆಂಟ್‌ಗಳು ಸದ್ದು ಮಾಡುತ್ತಿವೆ.

ರೈಲ್ವೆ ಪೊಲೀಸರು ಹೇಳುವುದೇನು?

ಸದ್ಯಕ್ಕೆ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕರಣ ದಾಖಲಾಗಿಲ್ಲ. ಆದರೆ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈನ ಉಪನಗರ ರೈಲುಗಳಲ್ಲಿ ಪೀಕ್ ಅವರ್‌ಗಳಲ್ಲಿ ಇಂತಹ ನೂಕುನುಗ್ಗಲು ಸಾಮಾನ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
ಈ ಘಟನೆಯು ಮುಂಬೈ ಲೋಕಲ್ ರೈಲುಗಳ ಸುರಕ್ಷತೆ ಮತ್ತು ಪ್ರಯಾಣಿಕರ ಅಮಾನವೀಯ ಪರಿಸ್ಥಿತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಇದು ಆಕಸ್ಮಿಕವಾಗಿ ನಡೆದ ರಕ್ಷಣೆಯೋ ಅಥವಾ ಅತಿಯಾದ ಗಡಿಬಿಡಿಯಲ್ಲಿ ನಡೆದ ಹಲ್ಲೆಯೋ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net