ಸಾವಿನ ಕೊನೆಯ 15 ನಿಮಿಷ... ಬದುಕಲ್ಲ ಎನ್ನುತ್ತಿದ್ದ ಮಗನ ಉಳಿಸಲು ಹೋಗಿ ಬೆಟ್ಟದಿಂದ ಬಿದ್ದು ಪಾಲಕರೂ ದುರಂತ ಸಾವು

ದುರಂತ ಅಂತ್ಯ ಕಂಡ ಯುವಕ
ದುರಂತ ಅಂತ್ಯ ಕಂಡ ಯುವಕ
Published on

ಪ್ರಮುಖ ಮುಖ್ಯಾಂಶಗಳು

  • ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ
  • ತಂದೆ-ತಾಯಿ ಬೇಡಿಕೊಂಡರೂ ಮಾತು ಕೇಳದ ಪುತ್ರ
  • ಸಾವಿನ 15 ನಿಮಿಷಗಳಲ್ಲಿ, ಮೂವರು ಬೆಟ್ಟದಿಂದ ಕೆಳಗೆ ಬಿದ್ದು ದುರಂತ ಸಾವು
  • ಐಫೋನ್​ ಕಂತು ಕಟ್ಟಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಜಗಳ
ಮಹಾರಾಷ್ಟ್ರ: ಬೆಟ್ಟದ ಅಂಚಿಗೆ ತಲುಪಿ ನಾನು ಬದುಕುವುದಿಲ್ಲ! ನನಗೆ ಜೀವಂತವಾಗಿರಲು ಇಷ್ಟವಿಲ್ಲ ಎನ್ನುತ್ತಿದ್ದ ಯುವಕನೊಬ್ಬ, ಸತತ ಮೂರು ಗಂಟೆಗೂ ಹೆಚ್ಚು ಕಾಲ ಪಾಲಕರು ಮತ್ತು ಇಡೀ ಗ್ರಾಮಸ್ಥರನ್ನು ಗಾಬರಿಗೊಳಿಸಿದ್ದಲ್ಲದೇ, ತನ್ನ ಜತೆಯೇ ತಂದೆ-ತಾಯಿಯನ್ನೂ ಬಲಿ ಪಡೆದ ದಾರುಣ ಘಟನೆ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖಾವ್ಡಾ ಬೆಟ್ಟದಲ್ಲಿ ಸಂಭವಿಸಿದೆ.
ಬೆಟ್ಟದ ತುದಿಯನ್ನು ತಲುಪಿ, ನೀವ್ಯಾರು ನನ್ನ ಹತ್ತಿರ ಬರಬೇಡಿ ಎಂದ ಕುನಾಲ್​ (18), ತಂದೆ-ತಾಯಿ ಎಷ್ಟೇ ಬೇಡಿಕೊಂಡರೂ ಕೆಳಗಿಳಿಯಲು ಒಪ್ಪಲಿಲ್ಲ. ಸತತ ಮೂರು ಗಂಟೆಗಳ ಕಾಲ ಗ್ರಾಮಸ್ಥರು ಮತ್ತು ಯುವಕನ ಪಾಲಕರು, ದುಡುಕಿ ಇಂತಹ ನಿರ್ಧಾರ ಕೈಗೊಳ್ಳಬೇಡ ಎಂದು ಕೈಮುಗಿದು ಕೇಳಿಕೊಂಡರೂ ಯಾವುದೇ ಕಾರಣಕ್ಕೂ ಸಾಯಲು ಇಟ್ಟಿರುವ ಹೆಜ್ಜೆಯನ್ನು ಹಿಂದಿಡುವುದಿಲ್ಲ ಎಂದು ಬೆದರಿಸಿದ್ದಾನೆ. ಸಾವಿನ ಕೊನೆಯ 15 ನಿಮಿಷಗಳಲ್ಲಿ ನಡೆದ ಹೈಡ್ರಾಮಾ ಮೂವರ ದುರಂತ ಅಂತ್ಯಕ್ಕೆ ಕಾರಣವಾಗಿದೆ.

ಯುವಕನ ಆತ್ಮಹತ್ಯೆಗೆ ಕಾರಣ ಐಫೋನ್​ ಇಎಂಐ!

ಬೆಳಗ್ಗೆ 10 ಗಂಟೆಯ ಸುಮಾರಿಗೆ ಬೆಟ್ಟ ಹತ್ತಿ, ಸಾಯುವುದಾಗಿ ಎಲ್ಲರ ಮುಂದೆ ಕೂಗಾಡಿದ ಯುವಕ, ಗ್ರಾಮಸ್ಥರು ಮತ್ತು ತಂದೆ-ತಾಯಿ ಭವಿಷ್ಯ ಹಾಳು ಮಾಡಿಕೊಳ್ಳಬೇಡ, ನಮ್ಮ ಬಗ್ಗೆಯೂ ಯೋಚಿಸು ಎಂದು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸಾಯುವ ನಿರ್ಧಾರದಿಂದ ಹಿಂದೇಟು ಹಾಕಲಿಲ್ಲ. ಸಾವಿನ ಕೊನೆಯ 15 ನಿಮಿಷದಲ್ಲಿ, ಎಲ್ಲಿ ನಮ್ಮ ಮಗ ಸತ್ತು ಹೋಗಿಬಿಡುತ್ತಾನೆ ಎಂಬ ಭಯದಿಂದ ಪಾಲಕರಿಬ್ಬರೂ ಬೆಟ್ಟವನ್ನು ಹತ್ತಿದ್ದಾರೆ. ಈ ವೇಳೆ, ಮಗನನ್ನು ಕಾಪಾಡಲು ತುತ್ತ ತುದಿಗೆ ಹೋದ ತಂದೆ, ಆತನ ಕೈಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇ ಆದರೂ ಯುವಕನ ಕಾಲು ಜಾರಿದ ಪರಿಣಾಮ ಇಬ್ಬರೂ ಕೆಳಗೆ ಬಿದ್ದು ಸಾವನ್ನಪ್ಪಿದರು.
ಗಂಡ ಮತ್ತು ಮಗ ಇಬ್ಬರೂ ಕೆಳಗೆ ಬಿದ್ದದ್ದನ್ನು ಕಂಡು ಗಾಬರಿಯಿಂದ ಚೀರಾಡಿದ ತಾಯಿಯೂ ಬೆಟ್ಟದ ಕೆಳಗೆ ಜಿಗಿದು ಸಾವಿಗೀಡಾದ ದುರಂತ ಒಂದು ನಿಮಿಷ ಸ್ಥಳೀಯರನ್ನು ಮೌನಕ್ಕೆ ಶರಣಾಗಿಸಿತು. ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು, ಮೂವರ ಮೃತದೇಹಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net