UP Horror: ಚಾಕೊಲೇಟ್ ಬಾಕ್ಸ್ ಕದ್ದಿದ್ದಕ್ಕೆ ಹೆತ್ತ ಮಗಳನ್ನೇ ಹೊಡೆದು ಕೊಂದ ಪಾಪಿ ತಂದೆ!

UP Horror
UP Horror
Published on
ಬುಲಂದ್‌ಶಹರ್ (ಉತ್ತರ ಪ್ರದೇಶ): ಅಂಗಡಿಯಿಂದ ಚಾಕೊಲೇಟ್ ಬಾಕ್ಸ್ ಕದ್ದಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ 12 ವರ್ಷದ ಬಾಲಕಿಯನ್ನು ಆಕೆಯ ತಂದೆಯೇ ಬಲವಾಗಿ ಹೊಡೆದು ಸಾಯಿಸಿದ ಘಟನೆ ಉತ್ತರ ಪ್ರದೇಶದ(UP Horror) ಬುಲಂದ್‌ಶಹರ್ ಜಿಲ್ಲೆಯಲ್ಲಿ ವರದಿಯಾಗಿದೆ.

ನಡೆದಿದ್ದೇನು?

ಮೃತ ಬಾಲಕಿಯನ್ನು 6ನೇ ತರಗತಿ ವಿದ್ಯಾರ್ಥಿನಿ ಪೂಜಾ ರಾಣಿ ಎಂದು ಗುರುತಿಸಲಾಗಿದೆ. ಗುರುವಾರ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಮಧ್ಯಾಹ್ನದ ಔತಣಕೂಟ ಮುಗಿಸಿ ಪೂಜಾ ಸಿಹಿತಿಂಡಿ ಖರೀದಿಸಲು ಹತ್ತಿರದ ದಿನಸಿ ಅಂಗಡಿಗೆ ಹೋಗಿದ್ದಳು. ಈ ವೇಳೆ ಅವಳು ಹಣ ನೀಡದೆ ಚಾಕೊಲೇಟ್ ಬಾಕ್ಸ್ ಒಂದನ್ನು ತಂದಿದ್ದಾಳೆ ಎಂದು ಆರೋಪಿಸಲಾಗಿದೆ. ಈ ವಿಷಯ ತಂದೆ ಪುಷ್ಪೇಂದ್ರ ಕುಮಾರ್‌ಗೆ ತಿಳಿಯುತ್ತಿದ್ದಂತೆ ಆತ ಕೋಪದಿಂದ ಕೆರಳಿದ್ದಾನೆ.

ಮಗಳ ಮೇಲೆ ಲಾಠಿ ಪ್ರಹಾರ

ಮಗಳ ವರ್ತನೆಯಿಂದ ಆಕ್ರೋಶಗೊಂಡ ಪುಷ್ಪೇಂದ್ರ, ಬಾಲಕಿಯನ್ನು ಹಿಗ್ಗಾಮುಗ್ಗಾ ಹೊಡೆಯಲು ಪ್ರಾರಂಭಿಸಿದ್ದಾನೆ. ದೊಣ್ಣೆ ಹಾಗೂ ಲಾಠಿಗಳಿಂದ ಮಗಳ ಮೇಲೆ ಸತತವಾಗಿ ಪ್ರಹಾರ ನಡೆಸಿದ್ದಾನೆ. ಹಲ್ಲೆಯನ್ನು ತಡೆಯಲು ಬಂದ ಪತ್ನಿಯ ಮೇಲೂ ಈ ಪಾಪಿ ತಂದೆ ಹಲ್ಲೆ ನಡೆಸಿದ್ದು, ಆಕೆಗೂ ಗಾಯಗಳಾಗಿವೆ. ತಂದೆಯ ಭೀಕರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಪೂಜಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಮನೆಯಲ್ಲೇ ಪತ್ನಿ-ಮಕ್ಕಳ ಬಂಧನ

ಮಗಳು ಮೃತಪಟ್ಟಿದ್ದನ್ನು ಕಂಡು ಗಾಬರಿಗೊಂಡ ಪುಷ್ಪೇಂದ್ರ, ವಿಷಯ ಹೊರಹೋಗಬಾರದೆಂದು ಪತ್ನಿ ಮತ್ತು ಇತರ ಮಕ್ಕಳನ್ನು ಮನೆಯೊಳಗೆ ಹಾಕಿ ಬೀಗ ಹಾಕಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಸಂಜೆ ವೇಳೆಗೆ ಮನೆಯ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾನೆ.

ಪೊಲೀಸ್ ದೂರು

ಶುಕ್ರವಾರ ಬೆಳಿಗ್ಗೆ ಹೇಗೋ ಮಾಡಿ ಹೊರಬಂದ ಬಾಲಕಿಯ ತಾಯಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ತಂದೆ ಪುಷ್ಪೇಂದ್ರ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯು ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಗಳ ಸಾವಿನಿಂದ ಇಡೀ ಗ್ರಾಮವೇ ಮೌನಕ್ಕೆ ಶರಣಾಗಿದ್ದು, ಹೆತ್ತ ಮಗಳನ್ನೇ ಕೊಂದ ತಂದೆಯ ಕ್ರೌರ್ಯಕ್ಕೆ ಜನರು ಕಿಡಿಖಾರುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net