ಫಾರೂಕ್ ಅಬ್ದುಲ್ಲಾ ಹತ್ಯೆಗೆ ಸಂಚು: ಕೂದಲೆಳೆ ಅಂತರದಲ್ಲಿ ಪಾರಾದ ಮಾಜಿ ಮುಖ್ಯಮಂತ್ರಿ! | Farooq Abdullah

Farooq Abdullah
Farooq Abdullah
Published on
ಜಮ್ಮು:ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದ 'ರಾಯಲ್ ಪಾರ್ಕ್' ಕಲ್ಯಾಣ ಮಂಟಪದಲ್ಲಿ ಬುಧವಾರ ರಾತ್ರಿ ನಡೆದ ಅದ್ಧೂರಿ ವಿವಾಹ ಸಮಾರಂಭವೊಂದು ರಕ್ತಸಿಕ್ತವಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ. ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕ ಫಾರೂಕ್ ಅಬ್ದುಲ್ಲಾ(Farooq Abdullah) ಅವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಯೊಬ್ಬ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್, ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಫಾರೂಕ್ ಅಬ್ದುಲ್ಲಾ ಅವರು ಅಪಾಯದಿಂದ ಪಾರಾಗಿದ್ದಾರೆ.
ಪಕ್ಷದ ನಾಯಕ ಬಿ.ಎಸ್. ಚೌಹಾಣ್ ಅವರ ಪುತ್ರಿಯ ವಿವಾಹ ಸಮಾರಂಭಕ್ಕೆ ಫಾರೂಕ್ ಅಬ್ದುಲ್ಲಾ ಅವರು ಉಪ ಮುಖ್ಯಮಂತ್ರಿ ಸುರಿಂದರ್ ಚೌಧರಿ ಮತ್ತು ಸಲಹೆಗಾರ ನಾಸಿರ್ ಅಸ್ಲಂ ವಾನಿ ಅವರೊಂದಿಗೆ ಆಗಮಿಸಿದ್ದರು. ರಾತ್ರಿ ಸುಮಾರು 10:45 ರ ಸುಮಾರಿಗೆ ಅಬ್ದುಲ್ಲಾ ಅವರು ಕಾರ್ಯಕ್ರಮ ಮುಗಿಸಿ ಹೊರಬರುತ್ತಿದ್ದಾಗ, ಜನರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ವೇಗವಾಗಿ ಬಂದು ಅವರ ಬೆನ್ನಿನ ಹಿಂಭಾಗದಿಂದ ಪಿಸ್ತೂಲ್ ಗುರಿ ಇಟ್ಟು ಗುಂಡು ಹಾರಿಸಿದನು.
ಆದರೆ, ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದ ಎನ್‌ಎಸ್‌ಜಿ (NSG) ಕಮಾಂಡೋಗಳು ಮತ್ತು ವೈಯಕ್ತಿಕ ಭದ್ರತಾ ಸಿಬ್ಬಂದಿ ಗುಂಡಿನ ದಿಕ್ಕನ್ನು ಬದಲಿಸುವಲ್ಲಿ ಯಶಸ್ವಿಯಾದರು. ಗುಂಡು ಗುರಿ ತಪ್ಪಿ ಹೊರಹೋಗುತ್ತಿದ್ದಂತೆ, ಅಲ್ಲಿದ್ದ ಜನರು ಮತ್ತು ಭದ್ರತಾ ಪಡೆಗಳು ಆರೋಪಿಯನ್ನು ಹಿಡಿದು ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.'

20 ವರ್ಷಗಳಿಂದ ಕಾಯುತ್ತಿದ್ದೆ ಆರೋಪಿಯ ಆಘಾತಕಾರಿ ಹೇಳಿಕೆ:

ಬಂಧಿತ ಆರೋಪಿಯನ್ನು ಜಮ್ಮುವಿನ ಹಳೆಯ ನಗರದ ನಿವಾಸಿ ಕಮಲ್ ಸಿಂಗ್ ಜಮ್ವಾಲ್ (65) ಎಂದು ಗುರುತಿಸಲಾಗಿದೆ. ಪೊಲೀಸರ ವಿಚಾರಣೆಯಲ್ಲಿ ಈತ ಯಾವುದೇ ಪಶ್ಚಾತ್ತಾಪವಿಲ್ಲದೆ ಮಾತನಾಡಿದ್ದಾನೆ. "ನಾನು ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದೆ. ಇಂದು ನನಗೆ ಅವಕಾಶ ಸಿಕ್ಕಿತು, ಆದರೆ ಅವರು ಬದುಕುಳಿದರು," ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಈತ ಮಾದಕ ದ್ರವ್ಯ ಸೇವಿಸಿದ್ದ ಎನ್ನಲಾಗಿದ್ದು, ಕೃತ್ಯಕ್ಕೆ ಬಳಸಿದ್ದು ತನ್ನದೇ ಆದ ಪರವಾನಗಿ ಹೊಂದಿದ ಪಿಸ್ತೂಲ್ ಎಂದು ತಿಳಿದುಬಂದಿದೆ.
ಭದ್ರತಾ ಲೋಪದ ಬಗ್ಗೆ ಓಮರ್ ಅಬ್ದುಲ್ಲಾ ಆಕ್ರೋಶ
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣ 'X' ನಲ್ಲಿ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, "ಅಲ್ಲಾಹನ ಕೃಪೆಯಿಂದ ನನ್ನ ತಂದೆ ಅಪಾಯದಿಂದ ಪಾರಾಗಿದ್ದಾರೆ. Z+ ಭದ್ರತೆ ಹೊಂದಿರುವ ಮಾಜಿ ಮುಖ್ಯಮಂತ್ರಿಯ ಇಷ್ಟು ಹತ್ತಿರಕ್ಕೆ ಪಿಸ್ತೂಲ್ ಹಿಡಿದ ವ್ಯಕ್ತಿ ಹೇಗೆ ಬರಲು ಸಾಧ್ಯವಾಯಿತು? ಇದು ಗಂಭೀರ ಭದ್ರತಾ ಲೋಪ," ಎಂದು ಕಿಡಿಕಾರಿದ್ದಾರೆ.
ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಗ್ಯಾಂಗ್ಯಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರ ಪ್ರಕಾರ, ಈ ಘಟನೆಯ ಹಿಂದೆ ಯಾವುದೇ ಭಯೋತ್ಪಾದಕ ಸಂಘಟನೆಗಳ ಕೈವಾಡವಿರುವಂತೆ ಕಾಣುತ್ತಿಲ್ಲ, ಬದಲಾಗಿ ಇದು ಆರೋಪಿಯ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net