ಇದೇ ನೋಡಿ ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ: ಇದರ ಬೆಲೆ ಕೇಳಿದ್ರೆ ನೀವು ಬೆರಗಾಗ್ತೀರಾ? Fancy Number

ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ
ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ
Published on

ಪ್ರಮುಖ ಮುಖ್ಯಾಂಶಗಳು

  • ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಫ್ಯಾನ್ಸಿ ನಂಬರ್ ಪ್ಲೇಟ್ ಹರಾಜು
  • ಫ್ಯಾನ್ಸಿ ನಂಬರ್​ ಪಡೆಯಲು ಬರೋಬ್ಬರಿ 1.17 ಕೋಟಿ ರೂ. ಖರ್ಚು ಮಾಡಿದ ವ್ಯಕ್ತಿ
  • ಭಾರತ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆಯಾದ HR88B8888
ನವದೆಹಲಿ: ಈ ವರ್ಷದ ಆರಂಭದಲ್ಲಿ ಕೇರಳದ ಬಿಲಿಯನೇರ್ ಉದ್ಯಮಿ ವೇಣು ಗೋಪಾಲಕೃಷ್ಣನ್ ತಮ್ಮ ಐಷಾರಾಮಿ ಲ್ಯಾಂಬೋರ್ಘಿನಿ ಪರ್ಫಾರ್ಮೆಂಟ್‌ ಕಾರಿಗೆ ಫ್ಯಾನ್ಸಿ ನಂಬರ್ ( Fancy Number ) ಪ್ಲೇಟ್ ಖರೀದಿಸುವ ಮೂಲಕ ಭಾರಿ ಸುದ್ದಿಯಾಗಿದ್ದರು. ವೇಣು ಅವರು 'KL 07 DG 0007' ನಂಬರ್ ಪ್ಲೇಟ್ ಅನ್ನು ಹರಾಜಿನಲ್ಲಿ 45.99 ಲಕ್ಷ ರೂ.ಗಳಿಗೆ ಖರೀದಿಸಿ ಎಲ್ಲರ ಹುಬ್ಬೇರಿಸಿದರು.
ವೇಣು ಖರೀದಿ ಮಾಡಿದ ನಂಬರ್ ಪ್ಲೇಟ್ ಜೇಮ್ಸ್ ಬಾಂಡ್ ಅವರ 007 ಕೋಡ್‌ಗೆ ಹೋಲುತ್ತದೆ. ಅದಕ್ಕಾಗಿಯೇ ಈ ಸಂಖ್ಯೆಯ ಬೆಲೆಯನ್ನು ಹೆಚ್ಚಿಸಲಾಗಿತ್ತು. ಆದರೆ, ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಫ್ಯಾನ್ಸಿ ನಂಬರ್ ಪ್ಲೇಟ್ ಹರಾಜಿನಲ್ಲಿ ಈ ದಾಖಲೆಯನ್ನು ಮುರಿಯಲಾಗಿದೆ. ತಮಗೆ ಬೇಕಾದ ಫ್ಯಾನ್ಸಿ ನಂಬರ್​ ಪಡೆಯಲು ಶ್ರೀಮಂತ ವ್ಯಕ್ತಿ ಒಬ್ಬರು ಬರೋಬ್ಬರಿ 1.17 ಕೋಟಿ ರೂ. ಕೊಟ್ಟಿದ್ದಾರೆ.
ಕಳೆದ ಬುಧವಾರ ನಡೆದ ಹರಾಜಿನಲ್ಲಿ 'HR88B8888' ನೋಂದಣಿ ಸಂಖ್ಯೆಯು ಭಾರತದಲ್ಲಿ ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆಯಾಗಿದೆ.
ಹರಿಯಾಣದ ವಿಐಪಿ ಅಥವಾ ಫ್ಯಾನ್ಸಿ ವಾಹನ ನೋಂದಣಿ ಸಂಖ್ಯೆಗಳಿಗಾಗಿ ಆನ್‌ಲೈನ್ ಹರಾಜು ಕಳೆದ ಶುಕ್ರವಾರ ಪ್ರಾರಂಭವಾಯಿತು. 50,000 ರೂ. ಮೂಲ ಬೆಲೆಯಿಂದ ಪ್ರಾರಂಭವಾದ ಈ ವಿಶೇಷ ಸಂಖ್ಯೆಗೆ 45 ಬಿಡ್‌ಗಳು ಬಂದವು. ಬುಧವಾರ ಮಧ್ಯಾಹ್ನದ ವೇಳೆಗೆ 88 ಲಕ್ಷ ರೂ.ಗೆ ತಲುಪಿತು. ಬುಧವಾರ ಹರಾಜು ಕೊನೆಗೊಂಡಾಗ ಅದು 1.17 ಕೋಟಿ ರೂ. ತಲುಪಿತು. ಕಳೆದ ವಾರವಷ್ಟೇ 'HR22W222' ಸಂಖ್ಯೆ 37.91 ಲಕ್ಷ ರೂ.ಗಳಿಗೆ ಮಾರಾಟವಾಗಿತ್ತು.
ಅಂದಹಾಗೆ, fancy.parivahan.gov.in ಪೋರ್ಟಲ್‌ನಲ್ಲಿ ಆಯೋಜಿಸಲಾದ ಹರಿಯಾಣದ ಆನ್‌ಲೈನ್ ಹರಾಜು ವ್ಯವಸ್ಥೆಯಲ್ಲಿ ಬಿಡ್​ದಾರರಿಗೆ ಆಕರ್ಷಕ ನೋಂದಣಿ ಸಂಖ್ಯೆಗಳನ್ನು ಆಯ್ಕೆ ಮಾಡಲು ಮುಕ್ತ ಅವಕಾಶ ಸಿಕ್ಕಿತು. ಈ ಕಾರಣದಿಂದ ಸಹಜವಾಗಿಯೇ ತೀವ್ರ ಸ್ಪರ್ಧೆ ನಡೆಯಿತು.
'HR88B8888' ಸಂಖ್ಯೆಗೆ ಹೆಚ್ಚಿನ ಬೇಡಿಕೆ ಬರಲು ಅದರ ಆಕರ್ಷಣೆಯೇ ಮುಖ್ಯ ಕಾರಣವಾಗಿದೆ. ಇಲ್ಲಿ ಎಲ್ಲ ಅಂಕೆಗಳ ಅನುಕ್ರಮವು ಎಂಟನ್ನು ಹೋಲುತ್ತದೆ. 'B' ಅಕ್ಷರವು ಕೂಡ 8ನೇ ಸಂಖ್ಯೆಯನ್ನು ಹೋಲುತ್ತದೆ. 'HR' ಎಂಬುದು ಹರಿಯಾಣದ ರಾಜ್ಯ ಸಂಕೇತವಾಗಿದೆ. '88' ಎಂಬುದು ನಿರ್ದಿಷ್ಟ ಪ್ರಾದೇಶಿಕ ಸಾರಿಗೆ ಕಚೇರಿ (RTO) ಜಿಲ್ಲೆಯನ್ನು ಸೂಚಿಸುತ್ತದೆ. 'B' ಎಂಬುದು ವಾಹನ ಸರಣಿ ಸಂಕೇತವಾಗಿದೆ ಮತ್ತು '8888' ಎಂಬುದು ವಾಹನಕ್ಕೆ ನಿಯೋಜಿಸಲಾದ ನಾಲ್ಕು-ಅಂಕಿಯ ಸಂಖ್ಯೆಯಾಗಿದೆ. ಹೀಗಾಗಿ, ಈ ಸಂಖ್ಯೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿ, ಕೋಟಿ ರೂಪಾಯಿಯನ್ನೂ ದಾಟಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net