ಕೌಟುಂಬಿಕ ಕಲಹ; ಬೆಂಗಳೂರಿನಲ್ಲಿ ವಿಚ್ಚೇದನ ಕೋರಿದ ಪತ್ನಿ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ ಪತಿ | Wife murder

ಕೊಲೆಯಾಗಿರುವ ಭುವನೇಶ್ವರಿ
ಕೊಲೆಯಾಗಿರುವ ಭುವನೇಶ್ವರಿ
Published on
ಬೆಂಗಳೂರು: ನಗರದಲ್ಲಿ ಮಂಗಳವಾರ(ಡಿ. 23) ಸಂಜೆ ಸಾಫ್ಟ್​ವೇರ್ ಇಂಜಿನಿಯರ್ ಒಬ್ಬ ವಿಚ್ಚೇದನ ಕೋರಿದಳು ಎಂದು ತನ್ನ ಪತ್ನಿಯನ್ನು ನಡುರಸ್ತೆಯಲ್ಲೇ ಕಾರು ಅಡ್ಡಗಟ್ಟಿ ಗುಂಡಿಟ್ಟು ಕೊಲೆ ಮಾಡಿ(Wife murder), ಬಳಿಕ ಮಾಗಡಿ ರೋಡ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. 
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಸವೇಶ್ವರನಗರದ ಶಾಖೆಯ ಸಹಾಯಕ ವ್ಯವಸ್ಥಾಪಕಿಯಾಗಿರುವ ಭುವನೇಶ್ವರಿ (39) ಕೊಲೆಯಾದವರು. ಆರೋಪಿ ಅವರ ಪತಿ ಬಾಲಮುರುಗನ್. ಸಂಜೆ 6.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುವಾಗ ಕಾರು ಅಡ್ಡಗಟ್ಟಿ ಪತ್ನಿ ಮೇಲೆ 5 ಸುತ್ತು ಗುಂಡು ಹಾರಿಸಿದ್ದಾನೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಅಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್, ಆರೋಪಿ ಮತ್ತು ಮೃತ ಮಹಿಳೆ ಇಬ್ಬರೂ ತಮಿಳುನಾಡಿನ ಸೇಲಂ ಜಿಲ್ಲೆಯವರು. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. 2011ರಲ್ಲಿ ಇಬ್ಬರು ವಿವಾಹವಾಗಿದ್ದರು. ಕೌಟುಂಬಿಕ ಕಲಹದಿಂದ ಕಳೆದ 18 ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಬಾಲಮುರುಗನ್ ನಾಲ್ಕು ವರ್ಷಗಳಿಂದ ನಿರುದ್ಯೋಗಿಯಾಗಿದ್ದನು. ಹೆಂಡತಿಯ ಮೇಲೆ ಅನುಮಾನ ಪಡುತ್ತಿದ್ದನು. ಇದರಿಂದ ದೂರವಿರಲು ನಿರ್ಧರಿಸಿ ವೈಟ್​ಫೀಲ್ಡ್​ನಿಂದ ರಾಜಾಜಿನಗರಕ್ಕೆ ಸ್ಥಳಾಂತರಗೊಂಡು ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಅವರು ಇರುವ ಸ್ಥಳ ಪತ್ತೆ ಹಚ್ಚಿ ತಾನು ಕೆ.ಪಿ.ಅಗ್ರಹಾರದಲ್ಲಿ ಮನೆ ಮಾಡಿದ್ದನು. ಇತ್ತೀಚಿಗೆ ಪತ್ನಿ ವಿಚ್ಚೇದನ ಕೋರಿ ಕಾನೂನು ನೋಟಿಸ್ ಕಳುಹಿಸಿದ್ದರು. ಈ ಹಿನ್ನೆಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಬಿಎನ್ಎಸ್ ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net