40 ರೂಪಾಯಿ ಚಹಾ ಹಣ ಉಳಿಸಲು ಹೋಗಿ ಜೈಲು ಪಾಲಾದ ನಕಲಿ ಐಪಿಎಸ್ ಅಧಿಕಾರಿ!...ಸೆಲ್ಯೂಟ್​ ಬಯಸಿದ್ದೇ ತಪ್ಪಾಯ್ತಾ..? Fake IPS Officer

Fake IPS Officer ಸಾಂದರ್ಭಿಕ ಚಿತ್ರ
Fake IPS Officer ಸಾಂದರ್ಭಿಕ ಚಿತ್ರ
Published on
ಲಖನೌ: ಚಹಾ ಕುಡಿದು ಕೇವಲ 40 ರೂಪಾಯಿ ಪಾವತಿಸಲು ನಿರಾಕರಿಸಿದ್ದಲ್ಲದೆ, ಕರ್ತವ್ಯದಲ್ಲಿದ್ದ ಅಸಲಿ ಪೊಲೀಸ್ ಸಿಬ್ಬಂದಿಯ ಬಳಿಯೇ ತನಗೆ ಸೆಲ್ಯೂಟ್ (Fake IPS Officer) ಹೊಡೆಯುವಂತೆ ದರ್ಪ ತೋರಿದ ನಕಲಿ ಐಪಿಎಸ್ ಅಧಿಕಾರಿಯೊಬ್ಬನನ್ನು ಉತ್ತರ ಪ್ರದೇಶದ ಲಖನೌದಲ್ಲಿ ಬಂಧಿಸಲಾಗಿದೆ.

ಘಟನೆಯ ಹಿನ್ನೆಲೆ

ವರದಿಗಳ ಪ್ರಕಾರ, ಲಖನೌದ ಪ್ರಮುಖ ರಸ್ತೆ ಬದಿಯ ಚಹಾ ಅಂಗಡಿಯೊಂದಕ್ಕೆ ವ್ಯಕ್ತಿಯೊಬ್ಬ ಬಂದಿದ್ದನು. ಅಲ್ಲಿ ಚಹಾ ಕುಡಿದ ನಂತರ ಆತನ ಬಿಲ್ ಕೇವಲ 40 ರೂಪಾಯಿ ಆಗಿತ್ತು. ಆದರೆ, ತಾನೊಬ್ಬ ದೊಡ್ಡ ಪೊಲೀಸ್ ಅಧಿಕಾರಿ ಎಂಬ ಅಹಂನಲ್ಲಿದ್ದ ಆತ, ಚಹಾ ವ್ಯಾಪಾರಿಗೆ ಹಣ ನೀಡಲು ನಿರಾಕರಿಸಿದ್ದಾನೆ. ವ್ಯಾಪಾರಿ ಹಣಕ್ಕಾಗಿ ಒತ್ತಾಯಿಸಿದಾಗ ಆತನ ಮೇಲೆ ದರ್ಪ ತೋರಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಅಂಗಡಿಯ ಮಾಲೀಕರು ತಕ್ಷಣವೇ ಸಮೀಪದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ವ್ಯಕ್ತಿಯನ್ನು ತಡೆದು ಪ್ರಶ್ನಿಸಿದಾಗ, ಆತ ಯಾವುದೇ ಪಶ್ಚಾತ್ತಾಪ ತೋರದೆ ಉಲ್ಟಾ ಕಾನ್‌ಸ್ಟೆಬಲ್‌ಗಳ ಮೇಲೆಯೇ ಮುಗಿಬಿದ್ದಿದ್ದಾನೆ. ತಾನು ನೋಯ್ಡಾ ವಲಯದ ಹಿರಿಯ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡ ಆತ, "ನಾನು ಯಾರೆಂದು ನಿಮಗೊತ್ತಾ? ನನಗೆ ತಕ್ಷಣ ಗೌರವ ನೀಡಿ, ಸಲ್ಯೂಟ್ ಮಾಡಿ. ನೀವೇಕೆ ನನಗೆ ಇನ್ನೂ ಸಲ್ಯೂಟ್ ಹೊಡೆದಿಲ್ಲ?" ಎಂದು ಪದೇ ಪದೇ ಕಿರುಚುತ್ತಾ ಪೊಲೀಸರನ್ನು ಹೆದರಿಸಲು ಯತ್ನಿಸಿದ್ದಾನೆ.

ನಕಲಿ ಅಧಿಕಾರಿಗೆ ಕಾನ್‌ಸ್ಟೆಬಲ್ ಖಡಕ್ ಪ್ರತ್ಯುತ್ತರ

ಆದರೆ, ಕಾನ್‌ಸ್ಟೆಬಲ್‌ಗಳು ಆತನ ಬೆದರಿಕೆಗೆ ಕಿಂಚಿತ್ತೂ ಕದಡಲಿಲ್ಲ. ಬದಲಿಗೆ ಅತ್ಯಂತ ಶಾಂತವಾಗಿ, "ಸಾಮಾನ್ಯ ನಾಗರಿಕ ಉಡುಪಿನಲ್ಲಿರುವ ಯಾರಿಗೂ ನಾವು ಸೆಲ್ಯೂಟ್ ಹೊಡೆಯುವುದಿಲ್ಲ. ನೀವು ನಿಜವಾಗಿಯೂ ಪೊಲೀಸ್ ಅಧಿಕಾರಿಯಾಗಿದ್ದರೆ, ಮೊದಲು ನಿಮ್ಮ ಅಧಿಕೃತ ಸಮವಸ್ತ್ರ ಧರಿಸಿ ಬನ್ನಿ ಮತ್ತು ನಿಮ್ಮ ಗುರುತಿನ ಚೀಟಿಯನ್ನು ತೋರಿಸಿ" ಎಂದು ಗದರಿಸಿದ್ದಾರೆ. "ಸರಿಯಾದ ಪೊಲೀಸ್ ಸಮಸ್ತ್ರದಲ್ಲಿ ಬಂದು ಐಡೆಂಟಿಟಿ ಕಾರ್ಡ್ ತೋರಿಸಿ, ಆಮೇಲೆ ನಾನು ನಿಮಗೆ ಸೆಲ್ಯೂಟ್ ಹೊಡೆಯುತ್ತೇನೆ. ಅಲ್ಲಿಯವರೆಗೂ ಇಲ್ಲ!" ಎಂದು ಕಾನ್‌ಸ್ಟೆಬಲ್ ಸ್ಪಷ್ಟಪಡಿಸಿದ್ದಾರೆ. ಆದರೆ, ಆರೋಪಿಯ ಬಳಿ ಯಾವುದೇ ಗುರುತಿನ ಚೀಟಿ ಇರಲಿಲ್ಲ.

ದೂರು ಮತ್ತು ಕಾನೂನು ಕ್ರಮ

ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆತ ನಕಲಿ ಅಧಿಕಾರಿ ಎಂಬುದು ಸಾಬೀತಾಗುತ್ತಿದ್ದಂತೆ, ಆತನನ್ನು ವಶಕ್ಕೆ ಪಡೆಯಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಲಖನೌ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ 'X' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಲಖನೌದ ಮಹಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯಾವುದೇ ಪ್ರಚೋದನೆಗೆ ಒಳಗಾಗದೆ, ಅತ್ಯಂತ ಘನತೆಯಿಂದ ಹಾಗೂ ನಿಯಮಾವಳಿಗಳ ಪ್ರಕಾರವೇ (By the book) ಉತ್ತರಿಸಿದ ಕಾನ್‌ಸ್ಟೆಬಲ್‌ನ ಶಾಂತ ಮತ್ತು ದೃಢವಾದ ನಡೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net