ನಕಲಿ ಐಎಎಸ್​ ಅಧಿಕಾರಿ ಬಂಧನ; ಸರ್ಕಾರಿ ವಾಹನ, ಗನ್​ಮ್ಯಾನ್ ನೇಮಿಸಿಕೊಂಡು ಶಾಲೆ, ಸಂಸ್ಥೆಗಳಿಂದ ಸುಲಿಗೆ ಆರೋಪ | Fake IAS officer

ನಕಲಿ ಐಎಎಸ್ ಅಧಿಕಾರಿ ಬಂಧಿಸಿರುವುದು
ನಕಲಿ ಐಎಎಸ್ ಅಧಿಕಾರಿ ಬಂಧಿಸಿರುವುದು
Published on
ಗೋರಖ್​ಪುರ: ಕಳೆದ ಆರು ತಿಂಗಳಿನಿಂದ ಐಎಎಸ್​ ಅಧಿಕಾರಿ ಎಂದು ಸರ್ಕಾರಿ ವಾಹನದ ರೀತಿ ಬೋರ್ಡ್ ಹಾಕಿಕೊಂಡು, ಗನ್​ಮ್ಯಾನ್​ ನೇಮಿಸಿಕೊಂಡು ಹಲವು ಶಾಲೆ, ಸಂಸ್ಥೆ, ವ್ಯಕ್ತಿಗಳಿಂದ ಸುಲಿಗೆ ಮಾಡ್ತಿದ್ದ ನಕಲಿ ಐಎಎಸ್ ಅಧಿಕಾರಿಯೊಬ್ಬನನ್ನು(Fake IAS officer) ಪೊಲೀಸರು ಬಂಧಿಸಿದ್ದಾರೆ ಎಂದು(ಡಿ. 13) ವರದಿಯಾಗಿದೆ.
ಬುಧವಾರ ಗೋರಖ್​ಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಬಿಹಾರದ ಸೀತಾಮರ್ಹಿಯ ಲಲಿತ್ ಕಿಶೋರ್ ಎಂದು ಗುರುತಿಸಲಾಗಿದೆ. ತನ್ನ ಹೆಸರು ಗೌರವ್ ಕುಮಾರ್, ಐಎಎಸ್ ಅಧಿಕಾರಿ ಎಂದು ಹೇಳಿ ನಕಲಿ ತಪಾಸಣೆ, ಟೆಂಡರ್, ಉದ್ಯೋಗಗಳ ಭರವಸೆ ಹಾಗೂ ದೊಡ್ಡ ಪ್ರಮಾಣದ ಸುಲಿಗೆಯ ದಂಧೆಯನ್ನು ಸೃಷ್ಟಿಸ್ದ ಎನ್ನಲಾಗಿದೆ.

ಆರೋಪಿ ಜೊತೆಗೆ ಅವರ ಸೋದರ ಮಾವ ಅಭಿಷೇಕ್ ಕುಮಾರ್, ಆಪ್ತ ಸಹಾಯಕ ಪರಮಾನಂದ ಗುಪ್ತಾ ಎಂಬುವರನ್ನು ಸಹ ಬಂಧಿಸಲಾಗಿದೆ. ಪೊಲೀಸರಿಗೆ ಬಂದ ಅನಾಮಧೇಯ ದೂರಿನೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆ. ನಕಲಿ ಐಎಎಸ್ ಲಲಿತ್ ಕಿಶೋರ್ ಚಿಲುವಾಟಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಜುಂಗಿಯಾ ಬಜಾರ್‌ನಲ್ಲಿ ಕಚೇರಿ ನಡೆಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ತಾನೂ ನಿಜವಾದ ಐಎಎಸ್ ಅಧಿಕಾರಿಯೊಂದು ತೋರಿಸಿಕೊಳ್ಳಲು ಆರೋಪಿ ಬೀಕನ್ ಅಳವಡಿಸಿದ ವಾಹನಗಳಲ್ಲಿ ತಿರುಗಾಡುತ್ತಾ, ನಕಲಿ ಸರ್ಕಾರಿ ನಾಮಫಲಕಗಳನ್ನು ಹಾಕಿಕೊಂಡಿದ್ದನು. ಜೊತೆಗೆ ತಿಂಗಳಿಗೆ 30 ಸಾವಿರ ಸಂಬಳದಂತೆ 10 ಗನ್‌ಮೆನ್‌ಗಳನ್ನು ನೇಮಿಸಿಕೊಂಡಿದ್ದಾನೆ. ಒಬ್ಬ ಸ್ಟೆನೋಗ್ರಾಫರ್​ಗೆ 60 ಸಾವಿರ ಸಂಬಳ ನೀಡುತ್ತಿದ್ದ ಎನ್ನಲಾಗಿದೆ.
ಆರೋಪಿಗಳ ಬಂಧನದ ಬಳಿಕ ಕಚೇರಿಯಲ್ಲಿ ನಕಲಿ ಐಡಿಗಳು, ಲ್ಯಾಪ್‌ಟಾಪ್‌ಗಳು, ಆಭರಣಗಳು, ನಗದು ಹಾಗೂ ಲಲಿತ್ ಕಿಶೋರ್ ನಿಜವಾದ ಅಧಿಕಾರಿಗಳ ಮುಖಗಳನ್ನು ತನ್ನ ಮುಖಗಳೊಂದಿಗೆ ಬದಲಾಯಿಸಿದ್ದ ಅನೇಕ ಕೃತಕ ಬುದ್ಧಿಮತ್ತೆ (AI)-ರಚಿತ ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿರುವ ಹೆಚ್ಚುವರಿ ಎಸ್‌ಪಿ ಅಭಿನವ್ ತ್ಯಾಗಿ, ನಕಲಿ ಐಎಎಸ್ ಅಧಿಕಾರಿ ಲಲಿತ್ ಕಿಶೋರ್ ಮತ್ತು ಅವರ ಇಬ್ಬರು ಸಹಚರರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಆರೋಪಿ ಖಾಸಗಿ ಶಾಲೆಗಳಲ್ಲಿ ನಕಲಿ "ತಪಾಸಣೆ" ನಡೆಸಿ ಅವುಗಳ ನಿರ್ವಾಹಕರಿಂದ ದೊಡ್ಡ ಮೊತ್ತವನ್ನು ಸುಲಿಗೆ ಮಾಡಿದ್ದರು ಎನ್ನಲಾಗಿದೆ. ಆರೋಪಿ ಯುಪಿ, ಬಿಹಾರ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಾದ್ಯಂತ ಜನರನ್ನು ವಂಚಿಸಿದ್ದಾರೆ. ಪಾಟ್ನಾದ ಒಬ್ಬ ದೂರುದಾರನು ಟೆಂಡರ್‌ಗಳಿಗಾಗಿ 1.70 ಕೋಟಿ ರೂ.ಗಳಿಗೂ ಹೆಚ್ಚು ಮತ್ತು ಎರಡು ವಾಹನಗಳನ್ನು ಪಾವತಿಸಿರುವುದಾಗಿ ಹೇಳಿದ್ದಾನೆ. ಮತ್ತೆ ಯಾರಾದರೂ ವಂಚನೆಗೊಳಗಾಗಿದ್ದರೆ ದೂರು ದಾಖಲಿಸುವಂತೆ ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net