ಫೇಕ್​ ಸರ್ಟಿಫಿಕೆಟ್​​, ಸ್ಯಾಲರಿ ಸ್ಲಿಪ್... ಜಾಸ್ತಿ ಸಂಬಳದ ಜಾಬ್​ ಆಸೆಗೆ ನಕಲಿ ಮಾಡಿದ್ರೆ ಈ ಕಾನೂನು ಸಂಕಷ್ಟಗಳು ತಪ್ಪಿದ್ದಲ್ಲ!

ಫೇಕ್​ ಸರ್ಟಿಫಿಕೆಟ್​​, ಸ್ಯಾಲರಿ ಸ್ಲಿಪ್
ಫೇಕ್​ ಸರ್ಟಿಫಿಕೆಟ್​​, ಸ್ಯಾಲರಿ ಸ್ಲಿಪ್
Published on

ಪ್ರಮುಖ ಮುಖ್ಯಾಂಶಗಳು

  • ಕೈಯಲ್ಲಿರುವ ಕೆಲಸವನ್ನು ಬಿಟ್ಟು ಹೆಚ್ಚಿನ ಸಂಬಳದಾಸೆಗೆ ನಕಲಿ ಸರ್ಟಿಫಿಕೆಟ್
  • ಸ್ಯಾಲರಿ ಸ್ಲಿಪ್​, ಸಿವಿಗಳನ್ನು ಫೇಕ್​ ಮಾಡಿ ಉದ್ಯೋಗ
Fake Certificates: ತಮ್ಮ ವಿದ್ಯಾರ್ಹತೆಗೆ ತಕ್ಕಂತ ಉದ್ಯೋಗವೇ ಸಿಗುತ್ತಿಲ್ಲ ಎಂದು ಅನೇಕ ಯುವಕರು ಇಂದು ಸಿಕ್ಕ ಸಿಕ್ಕ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಲೇ ತಾವು ಬಯಸಿದ ಉದ್ಯೋಗಕ್ಕಾಗಿ ಹಗಲಿರುಳು ಊರಿಂದ ಊರು ಬಿಟ್ಟು ನ್ಯಾಯವಾಗಿ ದುಡಿಯುತ್ತಿದ್ದಾರೆ. ಹೀಗಿರುವಾಗ, ಈಗಾಗಲೇ ಕೈಯಲ್ಲಿರುವ ಕೆಲಸವನ್ನು ಬಿಟ್ಟು, ಹೆಚ್ಚಿನ ಸಂಬಳದಾಸೆಗೆ ನಕಲಿ ಅನುಭವ ಸರ್ಟಿಫಿಕೆಟ್​, ಸ್ಯಾಲರಿ ಸ್ಲಿಪ್​ ಮತ್ತು ಸಿವಿಗಳನ್ನು ರೆಡಿ ಮಾಡಿಕೊಂಡು ಕೆಲಸ ಗಿಟ್ಟಿಸಿಕೊಳ್ಳುವ ಮಂದಿಗೆ ಈಗಿನ ಕಾನೂನುಗಳು ತಮ್ಮ ಕರಿಯರ್​ ಅನ್ನೇ ನಾಶ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದು ದುರಂತವೇ ಸರಿ.
ಹೊಸ ಹಾಗೂ ಹೆಚ್ಚಿನ ಸಂಬಳದ ಉದ್ಯೋಗ ತ್ವರಿತವಾಗಿ ಪಡೆಯುವ ಉದ್ದೇಶದಿಂದ ಕೆಲವರು ನಕಲಿ ದಾಖಲೆಗಳನ್ನು ಬಳಸುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಕಲಿ ಶೈಕ್ಷಣಿಕ ಪ್ರಮಾಣ ಪತ್ರ, ಎಕ್ಸಿಪಿರಿಯನ್ಸ್​ ಸರ್ಟಿಫಿಕೆಟ್​, ಸ್ಯಾಲರಿ ಸ್ಲೀಪ್ಸ್​, ರಿಲೀವಿಂಗ್ ಲೆಟರ್​ಗಳನ್ನು ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಫೇಕ್​ ಕೆಲಸಗಳು ಕೆಲಸವನ್ನು ಕಿತ್ತುಕೊಳ್ಳುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಅವರ ವೃತ್ತಿಜೀವನಕ್ಕೆ ಕಳಂಕ ತರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಅನೇಕ ಕಂಪನಿಗಳು ಈಗಾಗಲೇ ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು ಅರ್ಜಿ ಹಾಕಿರುವ ಮಂದಿಯ ಬ್ಯಾಕ್​ಗ್ರೌಂಡ್​ ವೆರಿಫಿಕೆಷನ್​ ಪ್ರಕ್ರಿಯೆಯನ್ನು ಬಹಳ ಚುರುಕಿನಿಂದ ಮಾಡುತ್ತಿವೆ. ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಅದರಲ್ಲಿ ಫೇಕ್​ ಹಾಗೂ ನಕಲಿ ಅಂಶವಿರುವ ಮಾಹಿತಿಯನ್ನು ಪತ್ತೆಹಚ್ಚುವಲ್ಲಿ ಮುಂಚೂಣಿಯಲ್ಲಿವೆ. ಈ ಪ್ರಕ್ರಿಯೆಯಲ್ಲಿ ದಾಖಲೆಗಳು ನಕಲಿ ಅಥವಾ ಸುಳ್ಳು ಮಾಹಿತಿಯನ್ನು ಒದಗಿಸಲಾಗಿದೆ ಎಂದು ಕಂಡುಬಂದರೆ, ಆಯಾ ಕಂಪನಿಗಳು ತಮ್ಮ ಆಂತರಿಕ ನಿಯಮಗಳು ಮತ್ತು ಉದ್ಯೋಗ ಒಪ್ಪಂದದ ನಿಯಮಗಳ ಪ್ರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ಅಂತಹ ಸಂದರ್ಭಗಳಲ್ಲಿ, ಕಂಪನಿಯು ತಕ್ಷಣವೇ ಕೆಲಸದ ಪ್ರಸ್ತಾಪವನ್ನು ರದ್ದು ಮಾಡಬಹುದು ಅಥವಾ ಅದಾಗಲೇ ಆರಂಭದ ಹಂತದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರೆ, ಉದ್ಯೋಗದಿಂದ ವಜಾಗೊಳಿಸಬಹುದು. ದಾಖಲೆಗಳ ಹಿನ್ನೆಲೆ ಪರಿಶೀಲನೆಯಲ್ಲಿ ವಿಫಲವಾದಲ್ಲಿ ನೇಮಕಾತಿಯನ್ನು ತಡೆಹಿಡಿಯುವ ಹಕ್ಕನ್ನು ಕಂಪನಿಯು ಹೊಂದಿದೆ. ಇದರ ಜತೆಗೆ, ಸಂಸ್ಥೆಯು ಆಂತರಿಕ ನೀತಿಗಳ ಪ್ರಕಾರ, ಭವಿಷ್ಯದಲ್ಲಿ ಅದೇ ಕಂಪನಿಯಲ್ಲಿ ನೀವು ಕೆಲಸ ಪಡೆಯದಂತೆ ಬ್ಲ್ಯಾಕ್​ ಲಿಸ್ಟ್​ಗೆ ಸೇರಿಸಬಹುದು.
ಉದ್ಯೋಗಿಗಳು ನೀಡಿರುವ ದಾಖಲೆಗಳು ನಕಲಿಯಾಗಿದೆ ಎಂಬುದನ್ನು ಕಂಪನಿಯು ಅರಿತು, ಅದರ ವಿರುದ್ಧ ಆರ್ಥಿಕ, ಕಾನೂನು ಅಥವಾ ಪ್ರತಿಷ್ಠಿತ ಹಾನಿಯನ್ನು ಅನುಭವಿಸಿದೆ ಎಂಬ ಕಾರಣವನ್ನು ಮುಂದಿಟ್ಟು ಪೊಲೀಸರಿಗೆ ದೂರು ಕೊಡಬಹುದು ಅಥವಾ ಕಾನೂನು ಕ್ರಮವನ್ನು ಜರುಗಿಸಬಹುದು. ತನಿಖೆಯಲ್ಲಿ ಫೋರ್ಜರಿ ಅಥವಾ ವಂಚನೆ ನಡೆದಿರುವುದು ಸಾಬೀತಾದರೆ, ಭಾರತೀಯ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಯಿದೆ. ಸಿಕ್ಕಿರುವ ಸಾಕ್ಷ್ಯಗಳು, ಕಂಪನಿಯ ನೀತಿಗಳು ಮತ್ತು ಪ್ರಕರಣದ ಸಂದರ್ಭಗಳ ಆಧಾರದ ಮೇಲೆ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.
ಹೆಚ್ಚಿನ ಸಂಬಳದ ಉದ್ಯೋಗದ ಆಸೆಗೆ ಬಿದ್ದು, ಎಕ್ಸ್​ಪಿರಿಯನ್ಸ್​ ಸರ್ಟಿಫಿಕೆಟ್​, ಮಾರ್ಕ್ ಮೆಮೊ, ಹಿಂದಿನ ಕಂಪನಿಗಳ ಸ್ಯಾಲರಿ ಸ್ಲಿಪ್​ಮತ್ತು ವಿಳಾಸದಂತಹ ಮಾಹಿತಿಗಳನ್ನು ನಕಲಿ ಮಾಡಿ ಸಿಕ್ಕಿಬಿದ್ದರೆ, ಅಲ್ಪಾವಧಿಯಲ್ಲಿ ಮಾತ್ರವಲ್ಲ ದೀರ್ಘಾವಧಿಯಲ್ಲಿ ಉದ್ಯೋಗ ಭದ್ರತೆ, ಕರಿಯರ್​ಗೆ ದೊಡ್ಡ ಕಪ್ಪು ಚುಕ್ಕೆ ಬೀಳುವುದು ಖಚಿತ. ಇದರಿಂದ ಭವಿಷದ್ಯಲ್ಲಿ ಪೆಟ್ಟು ಬಿದ್ದು, ಇತರರ ಕಣ್ಣಿನಲ್ಲಿ ಫ್ರಾಡ್​ ಎಂಬ ಹಣೆಪಟ್ಟಿಗೆ ಸಿಲುಕುವುದು ಖಚಿತ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net