ಆರ್‌ಜೆಡಿಯಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ಬಿಜೆಪಿಗೆ ಸೇರಿದ ರಿತು; ಪ್ರಧಾನಿ ಮೋದಿ ‘ರಾಷ್ಟ್ರ ಮೊದಲು’ ನೀತಿಗೆ ಜೈ ಎಂದ ಜೈಸ್ವಾಲ್​ | Ritu Jaiswal

Ritu Jaiswal | ಆರ್‌ಜೆಡಿಯಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ಬಿಜೆಪಿಗೆ ಸೇರಿದ ರಿತು  ಜೈಸ್ವಾಲ್
Ritu Jaiswal | ಆರ್‌ಜೆಡಿಯಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ಬಿಜೆಪಿಗೆ ಸೇರಿದ ರಿತು ಜೈಸ್ವಾಲ್
Published on
ಪಟನಾ: ಬಿಹಾರ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕಿ ರಿತು ಜೈಸ್ವಾಲ್ (Ritu Jaiswal) ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದು ರಾಜ್ಯದಲ್ಲಿ ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ಸ್ಪಷ್ಟ ಮುನ್ಸೂಚನೆಯಾಗಿದ್ದು, ಬಿಹಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಸರೋಗಿ ರಿತು ಜೈಸ್ವಾಲ್​​ರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಹಿಂದೆ ಆರ್‌ಜೆಡಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಜೈಸ್ವಾಲ್, ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಹರ್ ಕ್ಷೇತ್ರದಿಂದ ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಬಿಹಾರ ರಾಜಕಾರಣದಲ್ಲಿ ಮುಖಿಯಾ ದೀದಿ ಎಂದೇ ಜನಪ್ರಿಯರಾಗಿರುವ ಇವರು, ದೀರ್ಘಕಾಲದವರೆಗೆ ಆರ್‌ಜೆಡಿಯ ಪ್ರಮುಖ ಮುಖಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಆರ್‌ಜೆಡಿ ನಾಯಕತ್ವದೊಂದಿಗೆ, ವಿಶೇಷವಾಗಿ ತೇಜಸ್ವಿ ಯಾದವ್​​ರೊಂದಿಗೆ ವೈಮನಸ್ಸು ಹೆಚ್ಚಾಗಿತ್ತು ಎನ್ನಲಾಗಿದ್ದು, 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪರಿಹಾರ್ ಕ್ಷೇತ್ರದಿಂದ ಆರ್‌ಜೆಡಿ ಟಿಕೆಟ್ ನಿರಾಕರಿಸಿದ್ದೇ ಈ ಭಿನ್ನಾಭಿಪ್ರಾಯಕ್ಕೆ ಪ್ರಮುಖ ಕಾರಣವಾಗಿತ್ತು. ಪಕ್ಷದ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಜೈಸ್ವಾಲ್, ನಾಯಕತ್ವದ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿದ್ದರು. ಆದರೆ, ಈ ಚುನಾವಣೆಯಲ್ಲಿ ಅವರಿಗೆ ಜಯ ಸಿಗಲಿಲ್ಲ. ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ಬಂಡಾಯವೆದ್ದ ಈ ನಡವಳಿಕೆಯನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿದ ಆರ್‌ಜೆಡಿ, ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿತ್ತು.

ರಾಷ್ಟ್ರ ಮೊದಲು ಎಂಬ ನೀತಿಗೆ ಮನಸೋತ ರಿತು ಜೈಸ್ವಾಲ್

ಬಿಜೆಪಿಗೆ ಸೇರಿದ ಬೆನ್ನಲ್ಲೇ ಆರ್‌ಜೆಡಿ ಮಾಜಿ ನಾಯಕಿ ರಿತು ಜೈಸ್ವಾಲ್ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ನೀತಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬಿಜೆಪಿ ಪಕ್ಷವು ಯಾವಾಗಲೂ ರಾಷ್ಟ್ರ ಮೊದಲು ಎಂಬ ನೀತಿಯೊಂದಿಗೆ ಕೆಲಸ ಮಾಡುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ತಾವೂ ಕೇವಲ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಸೀಮಿತವಾಗಿದ್ದಾಗ ಇತರ ಆಯಾಮಗಳನ್ನು ನೋಡಲು ಸಾಧ್ಯವಾಗಿರಲಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಮತ್ತು ಎಲ್ಲಾ ಸಿದ್ಧಾಂತಗಳ ಜನರ ಬಗ್ಗೆ ಯೋಚಿಸುತ್ತಾರೆ ಹಾಗೂ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಾರೆ ಎಂದು ಹೇಳಿದರು. ಇಂದು ಸಮಾಜದ ಕೊನೆಯ ಸಾಲಿನಲ್ಲಿ ಕುಳಿತಿರುವ ವ್ಯಕ್ತಿಗೂ ಅಂತ್ಯೋದಯ ಪರಿಕಲ್ಪನೆಯಡಿ ಸೌಲಭ್ಯಗಳು ತಲುಪಿ ಅವರು ಮುಖ್ಯವಾಹಿನಿಯ ಭಾಗವಾಗುವುದು ಅತ್ಯಂತ ಅಗತ್ಯವಾಗಿದೆ ಮತ್ತು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತನ್ನ ಕಲ್ಯಾಣ ಯೋಜನೆಗಳ ಮೂಲಕ ಅತ್ಯಂತ ಬಲವಾದ ಹೆಜ್ಜೆಯನ್ನು ಇಟ್ಟಿದೆ ಎಂದು ಜೈಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net