ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಐಎಡಿಎಂಕೆ ಉಚ್ಛಾಟಿತ ನಾಯಕ; ಟಿವಿಕೆ ನಾಯಕರೊಂದಿಗೆ ಮಾತುಕತೆ! | KA Sengottaiyan

KA Sengottaiyan | ರಾಜೀನಾಮೆ ಸಲ್ಲಿಸಿದ ಶಾಸಕ ಕೆಎ ಸೆಂಗೋಟ್ಟಯ್ಯನ್
KA Sengottaiyan | ರಾಜೀನಾಮೆ ಸಲ್ಲಿಸಿದ ಶಾಸಕ ಕೆಎ ಸೆಂಗೋಟ್ಟಯ್ಯನ್
Published on
ಚೆನ್ನೈ: ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಶಾಸಕ ಕೆಎ ಸೆಂಗೋಟ್ಟಯ್ಯನ್, ತಮ್ಮ ಸ್ಥಾನಕ್ಕೆ ಬುಧವಾರ ( ನ.26) ರಾಜೀನಾಮೆ ನೀಡಿದ್ದು, ನಾಳೆ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೆಂಗೊಟ್ಟೈಯನ್ ಇಂದು ಬೆಳಿಗ್ಗೆ ಚೆನ್ನೈ ತಲುಪಿದ್ದು, ಅಲ್ಲಿ ಟಿವಿಕೆ ನಾಯಕರೊಂದಿಗೆ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ. ಇತ್ತ ಡಿಎಂಕೆ ಕೂಡ ಅವರ ಸಂಪರ್ಕಕ್ಕೆ ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದ್ದು, ನಾಳೆ ಎಲ್ಲ ಊಹಾಪೋಹಗಳಿಗು ಸ್ಪಷ್ಟತೆ ಸಿಗಲಿದೆ.
ಟಿವಿಕೆ ಸೇರುವ ಉದ್ದೇಶವಿದೆಯೇ ಎಂದು ಮಾಧ್ಯಮಗಳು ಪ್ರಶ್ನೆಗೆ ಸೆಂಗೊಟ್ಟೈಯನ್ ಯಾವುದೇ ಉತ್ತರ ನೀಡದೆ, ಕೇವಲ ಧನ್ಯವಾದ ಹೇಳಿ ಅಲ್ಲಿಂದ ತೆರಳಿದ್ದಾರೆ. ರಾಜೀನಾಮೆ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಸೆಂಗೊಟ್ಟೈಯನ್, ಹಲವಾರು ಏರಿಳಿತಗಳನ್ನು ಸಹಿಸಿಕೊಂಡು ಕೂಡ ಎಐಎಡಿಎಂಕೆಗೆ 50 ವರ್ಷಗಳನ್ನು ಅರ್ಪಿಸಿದ್ದೇನೆ, ಅಂತಹ ನನ್ನನ್ನು ಪಕ್ಷದಿಂದಲೇ ಉಚ್ಛಾಟಿಸಿರುವುದು ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದರು. ನವೆಂಬರ್​ ತಿಂಗಳ ಆರಂಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ವಿರುದ್ಧ ಹೇಳಿಕೆ ನೀಡಿದ ಬಳಿಕ ಎಐಎಡಿಎಂಕೆಯೊಳಗೆ ಆಂತರಿಕ ಬಿಕ್ಕಟ್ಟು ಉದ್ಭವಿಸಿದೆ.

ಸೆಂಗೊಟ್ಟೈಯನ್ ಹೇಳಿದ್ದೇನು..?

ಡಿಎಂಕೆಯಲ್ಲಿ ಮಾತ್ರವಲ್ಲ, ಎಐಡಿಎಂಕೆಯಲ್ಲೂ ಕುಟುಂಬ ರಾಜಕಾರಣವಿದೆ, ವಿಶೇಷವಾಗಿ ಎಡಪ್ಪಾಡಿ ಕೇಪರ್ತಿ ಸ್ವಾಮಿ ಅವರ ಮಗ ಮತ್ತು ಅವರ ಸಂಬಂಧಿ ಪಕ್ಷದ ವಿಷಯದಲ್ಲಿ ನಿರಂತರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದಿದ್ದರು. ಡಿಎಂಕೆ ವಂಶಪಾರಂಪರ್ಯ ರಾಜಕೀಯವನ್ನು ಉತ್ತೇಜಿಸುತ್ತಿದೆ ಎಂದು ಪಳನಿಸ್ವಾಮಿ ಪದೇ ಪದೇ ಆರೋಪಿಸುತ್ತಿರುವುದರಿಂದ ಸೆಂಗೊಟ್ಟೈಯನ್ ಹೇಳಿಕೆ ಪಕ್ಷಕ್ಕೂ ಡ್ಯಾಮೇಜ್​ ತಂದಿತ್ತು.
ಈ ಹೇಳಿಕೆ ಪರಿಣಾಮ ಬೀರಲು ತುಂಬಾ ಸಮಯ ತೆಗೆದುಕೊಳ್ಳಲಿಲ್ಲ. ಪಳನಿಸ್ವಾಮಿ, ತಮ್ಮ ವಿರುದ್ಧವೇ ಹೇಳಿಕೆ ನೀಡಿದ್ದ ಸೆಂಗೊಟ್ಟೈಯನ್​​ರನ್ನು ಡಿಎಂಕೆ ಬಿಟೀಮ್ ಸದಸ್ಯ ಎಂದು ಕರೆದು ಪಕ್ಷದಿಂದಲೇ ವಜಾಗೊಳಿಸಿ, ದೇಶದ್ರೋಹಿ ಪಟ್ಟ ಕಟ್ಟಿದರು. ಎಂಜಿಆರ್ ಮತ್ತು ಜಯಲಲಿತಾ ಅವರ ಕೈ ಕೆಳಗೆ ದೀರ್ಘಕಾಲ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದ ಸೆಂಗೊಟ್ಟೈಯನ್ ಕೆಲ ನೇರ ಹೇಳಿಕೆಗಳು, ಎಐಎಡಿಎಂಕೆ ನಾಯಕರಿಗೆ ರುಚಿಸಲಿಲ್ಲ ಆದ್ದರಿಂದ ಪಕ್ಷದಿಂದಲೇ ಗೇಟ್​ ಪಾಸ್​ ನೀಡಿದರು.
2026 ರ ಮಧ್ಯದಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಟಿವಿಕೆ ಕೂಡ ರಣಕಹಳೆ ಮೊಳಗಿಸಿದೆ. ಈ ನಡುವೆ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪಕ್ಷಗಳು ಉತ್ತಮ ಮೈತ್ರಿಕೂಟಗಳನ್ನು ರಚಿಸುವ ಪ್ರಯತ್ನದಲ್ಲಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net