ಎಐಎಡಿಎಂಕೆಗೆ ಬಿಗ್ ಶಾಕ್!..ಡಿಎಂಕೆ ಸೇರಲು ಮುಂದಾದ ಪನ್ನೀರ್‌ಸೆಲ್ವಂ; ಅದಲು ಬದಲಾಯ್ತು ರಾಜಕೀಯ ಲೆಕ್ಕಾಚಾರ | OPS Joins DMK

OPS Joins DMK |  ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ರೊಂದಿಗೆ ಪನ್ನೀರ್‌ಸೆಲ್ವಂ
OPS Joins DMK | ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ರೊಂದಿಗೆ ಪನ್ನೀರ್‌ಸೆಲ್ವಂ
Published on
ಚೆನ್ನೈ: ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಹಿರಿಯ ನಾಯಕ ಓ ಪನ್ನೀರ್‌ಸೆಲ್ವಂ, ಶುಕ್ರವಾರ (ಫೆ.27) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಮ್ಮುಖದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರ್ಪಡೆಗೊಳ್ಳಲಿದ್ದಾರೆ (OPS Joins DMK )ಎಂದು ವರದಿಯಾಗಿದೆ.
ಮೂರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ 75 ವರ್ಷದ ಪನ್ನೀರ್‌ಸೆಲ್ವಂ, ಮುಂಬರುವ ಚುನಾವಣೆಯಲ್ಲಿ ತೇಣಿ ಜಿಲ್ಲೆಯ ಬೋಡಿನಾಯಕನೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.
ಕಳೆದ ಚುನಾವಣೆಯಲ್ಲಿ ಬೋಡಿನಾಯಕನೂರ್ ಕ್ಷೇತ್ರದಿಂದಲೇ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಇಪಿಎಸ್​ ಗೆಲುವು ಸಾಧಿಸಿದ್ದರು. ಒಂದು ಕಾಲದಲ್ಲಿ ಜಯಲಲಿತಾ ಆಪ್ತ ಸಹಾಯಕರೆಂದು ಗುರುತಿಸಿಕೊಂಡಿದ್ದ ಪನ್ನೀರ್‌ಸೆಲ್ವಂರನ್ನು, ಎಡಪ್ಪಾಡಿ ಕೆ. ಪಳನಿಸ್ವಾಮಿ ಅಮಾನತುಗೊಳಿಸಿದ್ದರು.

ಮರುಸೇರ್ಪಡೆಗೆ ಮನಸ್ಸು ಮಾಡಿದ್ದ ಇಪಿಎಸ್​

ನಾನು ಎಐಎಡಿಎಂಕೆ ಜೊತೆ ಒಂದಾಗಲು ಸಿದ್ಧನಿದ್ದೇನೆ, ಟಿಟಿವಿ ದಿನಕರನ್ ನನ್ನನ್ನು ಸ್ವಾಗತಿಸಲು ತಯಾರಿದ್ದಾರೆ ಎಂದಿದ್ದ ಇಪಿಎಸ್​, ವಿಪಕ್ಷ ನಾಯಕ ಪಳನಿಸ್ವಾಮಿಯನ್ನು ತಮ್ಮ ಹಿರಿಯ ಸಹೋದರ ಎಂದು ಕರೆದಿದ್ದರು. ಪನೀರ್‌ಸೆಲ್ವಂ ಎಐಎಡಿಎಂಕೆಗೆ ಮತ್ತೆ ಸೇರುವ ಪ್ರಯತ್ನವನ್ನು ಪಳನಿಸ್ವಾಮಿ ತಿರಸ್ಕರಿಸಿದ್ದು, ಪಕ್ಷದಲ್ಲಿ ಅವರಿಗೆ ಜಾಗವಿಲ್ಲ ಎಂದು ಹೇಳಿದ್ದರು. ಈ ಸಂಘರ್ಷದಿಂದ ಬಿಜೆಪಿ ಅಂತರಕಾಯ್ದುಕೊಂಡಿತ್ತು. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಇದನ್ನು ಎಐಎಡಿಎಂಕೆಯ ಆಂತರಿಕ ವಿಷಯ ಎಂದಿದ್ದರು.
ಇದು ಎಐಎಡಿಎಂಕೆಯ ಆಂತರಿಕ ವಿಷಯವಾಗಿದ್ದು, ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ನಾಗೇಂದ್ರನ್ ಜನವರಿಯಲ್ಲಿ ಹೇಳಿದ್ದರು.
2024 ರ ಲೋಕಸಭಾ ಚುನಾವಣೆಗೆ ಮುನ್ನ ಎಐಎಡಿಎಂಕೆ ಎನ್‌ಡಿಎ ಮೈತ್ರಿಕೂಟವನ್ನು ತೊರೆದಿತ್ತು, ಆದರೆ ಈಗ ಮತ್ತೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮರಳಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು, ಇದರೊಂದಿಗೆ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಮತದಾನ ನಡೆಯಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net