ನಿಮ್ಮಿಂದ ಆಗಲ್ಲ ಅಂದ್ರೆ ಭಾರತ ಬಿಟ್ಟು ತೊಲಗಿ...ಮೆಟಾಗೆ ಖಡಕ್​ ವಾರ್ನಿಂಗ್​ ಕೊಟ್ಟ ಸುಪ್ರೀಂಕೋರ್ಟ್​! Meta

ಮೆಟಾಗೆ ಖಡಕ್​ ವಾರ್ನಿಂಗ್​ ಕೊಟ್ಟ ಸುಪ್ರೀಂಕೋರ್ಟ್​
ಮೆಟಾಗೆ ಖಡಕ್​ ವಾರ್ನಿಂಗ್​ ಕೊಟ್ಟ ಸುಪ್ರೀಂಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ಪ್ರೈವಸಿ ಪಾಲಿಸಿ ವಿಚಾರವಾಗಿ ಟೆಕ್​ ದೈತ್ಯ ಮತ್ತು ವಾಟ್ಸ್​ಆ್ಯಪ್​ ಮಾಲೀಕರಾದ ಮೆಟಾಗೆ ಕೊರ್ಟ್​ ತರಾಟೆ
  • ಮೆಟಾಗೆ ಖಡಕ್​ ವಾರ್ನಿಂಗ್​ ನೀಡಿದ ಭಾರತದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್​
  • ನಮ್ಮ ಡೇಟಾದ ಒಂದೇ ಒಂದು ಅಂಕಿಯನ್ನು ಸಹ ಹಂಚಿಕೊಳ್ಳಲು ನಾವು ಬಿಡುವುದಿಲ್ಲ ಸಿಜೆಐ
ನವದೆಹಲಿ: ಪ್ರೈವಸಿ ಪಾಲಿಸಿ ವಿಚಾರವಾಗಿ ಟೆಕ್​ ದೈತ್ಯ ಮತ್ತು ವಾಟ್ಸ್​ಆ್ಯಪ್​ ಮಾಲೀಕರಾದ ಮೆಟಾ ( Meta ) ಕಂಪನಿಗೆ ಭಾರತದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್​ ಇಂದು (ಫೆ.03) ಖಡಕ್​ ವಾರ್ನಿಂಗ್​ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್​ ನೇತೃತ್ವದ ಸಾಂವಿಧಾನಿಕ ಪೀಠ, ಅಮೆರಿಕ ಮೂಲದ ಟೆಕ್​ ದೈತ್ಯ ಕಂಪನಿ ಮೆಟಾ ನಡೆಯನ್ನು ಖಂಡಿಸಿದೆ. ನೀವು ಗೌಪ್ಯತೆ ವಿಚಾರದಲ್ಲಿ ಆಟವಾಡಲಾಗದು, ನಮ್ಮ ಡೇಟಾದ ಒಂದೇ ಒಂದು ಅಂಕಿಯನ್ನು ಸಹ ಹಂಚಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಸೂರ್ಯಕಾಂತ್​ ಅವರು ಖಡಕ್​ ಆಗಿ ಎಚ್ಚರಿಸಿದ್ದಾರೆ.
ವಾಟ್ಸ್​ಆ್ಯಪ್‌ನ 2021ರ ಗೌಪ್ಯತೆ ನಿಯಮಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯಾ ಈ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಮರ್ಷಿಯಲ್​ ಉದ್ದೇಶಗಳಿಗಾಗಿ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವ ಮೆಟಾ ಕಂಪನಿಯ "ಶೋಷಣಾ" ನೀತಿಯನ್ನು ಟೀಕಿಸಿದರು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ತಮ್ಮ ಜೋರು ಧ್ವನಿಯಲ್ಲಿ, ನೀವು ನಮ್ಮ ಸಂವಿಧಾನವನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಭಾರತವನ್ನು ತೊರೆಯಿರಿ. ಯಾವುದೇ ನಾಗರಿಕರ ಗೌಪ್ಯತೆಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ ಎಂದರು.
ದೇಶದ ಲಕ್ಷಾಂತರ ಬಡ ಮತ್ತು ಅವಿದ್ಯಾವಂತ ಜನರಿಗೆ ನಿಮ್ಮ ನೀತಿ ಅರ್ಥವಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ ನ್ಯಾಯಾಲಯ, ವಾಟ್ಸ್​ಆ್ಯಪ್​ ಕಂಪನಿಯ ಗೌಪ್ಯತಾ ನೀತಿಯ ಬಗ್ಗೆ ಸ್ಪಷ್ಟವಾದ ಅವಲೋಕನಗಳನ್ನು ಮಾಡಿತು. ಬಡ ಮಹಿಳೆ ಅಥವಾ ರಸ್ತೆಬದಿಯ ವ್ಯಾಪಾರಿ ಅಥವಾ ತಮಿಳು ಮಾತ್ರ ಮಾತನಾಡುವ ಯಾರಿಗಾದರೂ ನಿಮ್ಮ ನೀತಿ ಅರ್ಥವಾಗುತ್ತದೆಯೇ? ಎಂದು ನ್ಯಾಯಾಲಯ ಪ್ರಶ್ನೆ ಮಾಡಿತು.
ಮಾತು ಮುಂದುವರಿಸಿದ ನ್ಯಾಯಾಲಯ, ಕೆಲವೊಮ್ಮೆ ನಿಮ್ಮ ನೀತಿಗಳನ್ನು ಅರ್ಥಮಾಡಿಕೊಳ್ಳಲು ನಮಗೂ ಕಷ್ಟವಾಗುತ್ತದೆ. ಹೀಗಿರುವಾಗ ಬಿಹಾರದ ಗ್ರಾಮೀಣ ಭಾಗದಲ್ಲಿರುವ ಜನರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎನ್ನುವ ಮೂಲಕ ಮೆಟಾ ಮತ್ತು ವಾಟ್ಸ್​​ಆ್ಯಪ್​ ಅನ್ನು ತರಾಟೆಗೆ ತೆಗೆದುಕೊಂಡಿತು. ನಿಮ್ಮ ನೀತಿಗಳು ಖಾಸಗಿ ಮಾಹಿತಿಯ ಕಳ್ಳತನ ಮಾಡುವ ಒಂದು ಮಾರ್ಗವಾಗಿದೆ. ನಾವು ಅದನ್ನು ಅನುಮತಿಸುವುದಿಲ್ಲ ಎಂದು ಖಡಕ್​ ಆಗಿ ಹೇಳಿತು.
ಇದೇ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿಗಳು ತಮ್ಮದೇ ಆದ ಅನುಭವವನ್ನು ವಿವರಿಸಿದರು. ನೀವು ಹವಾಮಾನದ ವೈಪರಿತ್ಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದು ವಾಟ್ಸಾಪ್‌ನಲ್ಲಿ ವೈದ್ಯರಿಗೆ ಸಂದೇಶ ಕಳುಹಿಸಿದರೆ ಮತ್ತು ವೈದ್ಯರು ಕೆಲವು ಔಷಧಿಗಳ ಪ್ರಿಸ್ಕ್ರಿಪ್ಷನ್ ಕಳುಹಿಸಿದರೆ, ತಕ್ಷಣ ನಿಮಗೆ ಜಾಹೀರಾತುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದು ಹೇಗೆ ಎಂದು ಪ್ರಶ್ನೆ ಮಾಡುವ ಮೂಲಕ ಮೆಟಾ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿತು.
ಇದೇ ವೇಳೆ ಮೆಟಾ ಮತ್ತು ವಾಟ್ಸ್​ಆ್ಯಪ್​ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಮತ್ತು ಹಿರಿಯ ವಕೀಲ ಅಖಿಲ್ ಸಿಬಲ್, ಎಲ್ಲಾ ಸಂದೇಶಗಳು 'ಎಂಡ್-ಟು-ಎಂಡ್ ಎನ್‌ಕ್ರಿಪ್ಟ್' ಆಗಿವೆ. ಅಂದರೆ, ಕಂಪನಿಗಳು ಸಹ ಈ ವಿಷಯವನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರತಿವಾದ ಮಂಡಿಸಿದರು. ಸದ್ಯ ನ್ಯಾಯಾಲಯ ಈ ವಿಚಾರಣೆಯನ್ನು ಮುಂದೂಡಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net