

ರಾಯ್ಪುರ: ಕಾಡುಗಳಿಂದ ಬಂದೂಕು ಹಿಡಿದ ನಕ್ಸಲರನ್ನು ನಿರ್ಮೂಲನೆ ಮಾಡಲಾಗಿದ್ರೂ, ನಕ್ಸಲಿಸಂನ ಬೆದರಿಕೆ ಇನ್ನೂ ನಿಂತಿಲ್ಲ. ದಿಮಾಗಿ ನಕ್ಸಲರು ನಮ್ಮ ನಡುವೆಯೇ ಅನೇಕ ಸಂಘಟನೆಗಳ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಭಾನುವಾರ(ನ. 08) ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಕರಣ್‌ಪುರದಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಶಿಬಿರದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸುವ ಸಂದರ್ಭದಲ್ಲಿ ಮಾತನಾಡಿರುವ ಅವರು, 2026ರ ಈ ದೀಪಾವಳಿ ನಿಜಕ್ಕೂ ವಿಶೇಷವಾಗಿದೆ. ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯ ವಿರುದ್ಧ ದಶಕಗಳ ಕಾಲ ನಡೆದ ಹೋರಾಟದಲ್ಲಿ ದೇಶ ಗೆದ್ದ ನಂತರದ ಮೊದಲ ದೀಪಾವಳಿ ಇದಾಗಿದೆ ಎಂದಿದ್ದಾರೆ.
ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಕ್ಸಲರನ್ನು ನಿರ್ಮೂಲನೆ ಮಾಡಲಾಗಿದೆ, ಆದರೆ ಅಪಾಯ ಸಂಪೂರ್ಣವಾಗಿ ದೂರವಾಗಿಲ್ಲ. ಕಾಡುಗಳಿಂದ ಸಶಸ್ತ್ರ ನಕ್ಸಲರನ್ನು ನಾಶ ಮಾಡಿದ್ರೂ, ದಿಮಾಗಿ ನಕ್ಸಲರು ನಮ್ಮ ನಡುವೆಯೇ ಅನೇಕ ಸಂಘಟನೆಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ. ನಾವು ಅವರನ್ನು ಗುರುತಿಸಿ, ಸೋಲಿಸಬೇಕು. ಮತ್ತು ರಾಷ್ಟ್ರದ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಹಲವಾರು ಮಾವೋವಾದಿ ನಾಯಕರು ಮತ್ತು ಕಾರ್ಯಕರ್ತರನ್ನು ನಿರ್ಮೂಲನೆ ಮಾಡಿ ನೂರಾರು ಇತರರ ಶರಣಾಗತಿಯ ಬಳಿಕ ಮಾರ್ಚ್ 31ರಂದು ದೇಶವು ನಕ್ಸಲಿಸಂನ ಪಿಡುಗಿನಿಂದ ಮುಕ್ತವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಇನ್ನೂ ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಸತತ 13ನೇ ಬಾರಿಗೆ ದೇಶದ ಗಡಿ ಕಾಯುವ ಯೋಧರೊಂದಿಗೆ ಹಬ್ಬವನ್ನು ಹಂಚಿಕೊಂಡಿರುವ ಪ್ರಧಾನಿಯವರು, ಯೋಧರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ್ದಲ್ಲದೆ, ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಯನ್ನು ಕಾಯುವಲ್ಲಿ ಅವರ ಅಸಾಧಾರಣ ಸೇವೆಯನ್ನು ಶ್ಲಾಘಿಸಿದ್ದಾರೆ (ಏಜೆನ್ಸೀಸ್).