ದೇಶ ಕಾಪಾಡಿದ ಯೋಧನನ್ನೇ ಬಿಡಲಿಲ್ಲ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ನಿವೃತ್ತ ಗ್ರೂಪ್ ಕ್ಯಾಪ್ಟನ್ ಮೇಲೆ ಕಬ್ಬಿಣದ ರಾಡ್​​ನಿಂದ ಮಾರಣಾಂತಿಕ ಹಲ್ಲೆ! Amit Kumar Gupta

ನಿವೃತ್ತ ಗ್ರೂಪ್ ಕ್ಯಾಪ್ಟನ್ ಅಮಿತ್ ಕುಮಾರ್ ಗುಪ್ತಾ
ನಿವೃತ್ತ ಗ್ರೂಪ್ ಕ್ಯಾಪ್ಟನ್ ಅಮಿತ್ ಕುಮಾರ್ ಗುಪ್ತಾ
Published on
ಗುರುಗ್ರಾಮ್​: ಕಾರ್ಗಿಲ್ ಯುದ್ಧದಂತಹ ಭೀಕರ ಕದನದಲ್ಲಿ ಶತ್ರುಗಳ ಎದೆ ನಡುಗಿಸಿ, ಭಾರತೀಯ ವಾಯುಪಡೆಯ 'ಆಪರೇಷನ್ ಸಫೇದ್ ಸಾಗರ್' ಯಶಸ್ಸಿಗೆ ಕಾರಣರಾದ ನಿವೃತ್ತ ಗ್ರೂಪ್ ಕ್ಯಾಪ್ಟನ್ ಒಬ್ಬರ ಮೇಲೆ ಹಲ್ಲೆ ನಡೆದಿರುವ ದಾರುಣ ಘಟನೆ ವರದಿಯಾಗಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ವಾಗ್ವಾದವು ವಿಕೋಪಕ್ಕೆ ಹೋಗಿ, ನಿವೃತ್ತ ಯೋಧನ ಕೈ ಮುರಿದು, ತಲೆಗೆ ಮಾರಕಾಸ್ತ್ರದಿಂದ ಹೊಡೆದಿರುವ ಹೇಯ ಕೃತ್ಯ ಗುರುಗ್ರಾಮ್‌ನಲ್ಲಿ ನಡೆದಿದೆ.

ಪಾರ್ಕಿಂಗ್​ಗೆ ನಿರಾಕರಣೆ!

ಸೆಪ್ಟೆಂಬರ್ 10 ರ ರಾತ್ರಿ, ನಿವೃತ್ತ ಸೈನಿಕ ಗ್ರೂಪ್ ಕ್ಯಾಪ್ಟನ್ ಅಮಿತ್ ಕುಮಾರ್ ಗುಪ್ತಾ (Amit Kumar Gupta) ತಮ್ಮ ಕುಟುಂಬದೊಂದಿಗೆ ಗುರುಗ್ರಾಮ್‌ನ ಸೆಕ್ಟರ್ 65 ರಲ್ಲಿರುವ 'ಮ್ಯಾಗ್ನಮ್ ಗ್ಲೋಬಲ್ ಪಾರ್ಕ್'ಗೆ ಊಟ ಮಾಡಲು ತೆರಳಿದ್ದರು. ಅಲ್ಲಿನ 'ಗೊಂಜೊ' ರೆಸ್ಟೋರೆಂಟ್‌ಗೆ ತೆರಳಿದ್ದರು.
ರಾತ್ರಿ 8 ಗಂಟೆ ಸುಮಾರಿಗೆ ತಮ್ಮ ಕುಟುಂಬವನ್ನು ರೆಸ್ಟೋರೆಂಟ್ ಬಳಿ ಇಳಿಸಿ, ಕಾರು ಪಾರ್ಕ್ ಮಾಡಲು ಹೋದ ಅಮಿತ್ ಕುಮಾರ್ ಅವರಿಗೆ ಅಲ್ಲಿನ ಪಾರ್ಕಿಂಗ್ ಸಿಬ್ಬಂದಿ ಸತಾಯಿಸಲು ಶುರು ಮಾಡಿದರು. ವ್ಯಾಲೆಟ್ ಏರಿಯಾ, ಬೇಸ್‌ಮೆಂಟ್ ಹಾಗೂ ಬಹುಮಹಡಿ ಪಾರ್ಕಿಂಗ್ ಸ್ಥಳಗಳ ನಡುವೆ ಅವರನ್ನು ಅಲೆದಾಡಿಸಿ, ಕೊನೆಗೆ ಕಾರು ಪಾರ್ಕ್ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಕಬ್ಬಿಣದ ಸರಳಿನಿಂದ ಮಾರಣಾಂತಿಕ ಹಲ್ಲೆ!

ಪಾರ್ಕಿಂಗ್ ಸಿಬ್ಬಂದಿಯ ಈ ಬೇಜವಾಬ್ದಾರಿ ವರ್ತನೆಯನ್ನು ಪ್ರಶ್ನಿಸಿ, ತಮ್ಮ ಕಾರನ್ನು ರಿವರ್ಸ್ ಮಾಡಲು ಮುಂದಾದಾಗ ವಿವಾದ ತೀವ್ರಗೊಂಡಿದೆ. ಸಿಬ್ಬಂದಿಯೊಬ್ಬ ಉದ್ಧಟತನ ತೋರಿ, ನೇರವಾಗಿ ಕಾರಿನ ಮುಂಭಾಗದ ವಿಂಡ್‌ಶೀಲ್ಡ್​ಗೆ ಹೊಡೆದು ಹಾನಿ ಮಾಡಲು ಪ್ರಯತ್ನಿಸಿದ್ದಾನೆ. ಇದನ್ನು ತಡೆಯಲು ಹೋದ ಗ್ರೂಪ್ ಕ್ಯಾಪ್ಟನ್ ಮೇಲೆ ಆ ಕಿರಾತಕ ಕಬ್ಬಿಣದ ಸರಳಿನ ಮೂಲಕ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ಮೊದಲು ಕೈಗೆ ಬಲವಾಗಿ ಹೊಡೆದು ನಂತರ ತಲೆಗೆ ಬಲವಾದ ಏಟು ನೀಡಿದ್ದಾನೆ. ಇದರಿಂದ ತಲೆ ಒಡೆದು ವಿಪರೀತ ರಕ್ತಸ್ರಾವವಾಗಿದೆ. ಅವನು ನನ್ನ ಕೈ ಮುರಿದೆ, ತಲೆಗೆ ಹೊಡೆದ, ಕಾರಿನ ಗ್ಲಾಸ್ ಒಡೆದ. ಅದೃಷ್ಟವಶಾತ್ ಅಲ್ಲಿಯೇ ಇದ್ದ ಅಡುಗೆಯವರೊಬ್ಬರು ಬಂದು ನನಗೆ ಸಹಾಯ ಮಾಡಿದರು ಎಂದು ಅಮಿತ್ ಕುಮಾರ್ ಮಾಧ್ಯಮಗಳಿಗೆ ನೋವು ತೋಡಿಕೊಂಡಿದ್ದಾರೆ.

ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ, ಪೊಲೀಸರ ಕ್ರಮಕ್ಕೆ ಒತ್ತಾಯ

ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕುಟುಂಬದವರು ಕೂಡಲೇ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿದ್ದು, ತೀವ್ರ ರಕ್ತಸ್ರಾವ ಹಾಗೂ ಮೂಳೆ ಮುರಿತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ದೇಶಕ್ಕಾಗಿ ಹೋರಾಡಿದ ಯೋಧನಿಗೆ ಸಿಕ್ಕ ಈ ಬಹುಮಾನ ಕಂಡು ಇಡೀ ದೇಶವೇ ಬೆಚ್ಚಿಬಿದ್ದಿದೆ. ಆ ಆರೋಪಿಯ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸುವಂತೆ ಅವರು ಬಲವಾಗಿ ಆಗ್ರಹಿಸಿದ್ದಾರೆ.
ಎಚ್ಚೆತ್ತ ಗುರುಗ್ರಾಮ್ ಪೊಲೀಸರು: ಎಫ್‌ಐಆರ್ ದಾಖಲು
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗುರುಗ್ರಾಮ್ ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತರಿಂದ ಲಿಖಿತ ದೂರು ಬರುವ ಮುನ್ನವೇ ವಿಡಿಯೋ ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net