ದಯಾಮರಣ; ಘನತೆಯ ಸಾವಿಗೆ ಸುಪ್ರೀಂ ಕೋರ್ಟ್ ಅಸ್ತು

 Euthanasia
Euthanasia
Published on
ದಯಾಮರಣಕ್ಕೆ ಸಂಬಂಧಿಸಿ ಭಾರತದಲ್ಲಿ ಸುದೀರ್ಘವಾದ ಸಾಮಾಜಿಕ ಸಂವಾದ ಮತ್ತು ಕಾನೂನು ಹೋರಾಟ ನಡೆದಿದೆ. ಈ ಕುರಿತಂತೆ ಬುಧವಾರ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಹದಿಮೂರು ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಯುವಕ ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ ನೀಡಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ದಯಾಮರಣಕ್ಕೆ ಅನುಮತಿ ದೊರೆತಿರುವುದು ಗಮನಾರ್ಹ. ಅಲ್ಲದೆ, ದಯಾಮರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ರೂಪಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವುದು ಮಹತ್ವದ ಬೆಳವಣಿಗೆ. ಈ ಸಂಬಂಧ ದೇಶದಲ್ಲಿ ಪ್ರಸ್ತುತ ಇರುವ ನಿಯಮಗಳೇನು? ರಾಣಾ ಪ್ರಕರಣವೇನು? ಈ ಕುರಿತಾದ ವಿವರ ಇಲ್ಲಿದೆ.
ಸಾವಿಗೂ ಒಂದು ಘನತೆ ಇದೆ ಎಂದು ಭಾರತೀಯ ತತ್ವಶಾಸ್ತ್ರ ಪ್ರತಿಪಾದಿಸಿಕೊಂಡೇ ಬಂದಿದೆ. ದೇವರಲ್ಲಿ ಪ್ರಾರ್ಥನೆ ಮಾಡುವಾಗ ‘ಸುಖಮರಣ’ವನ್ನು ಕಲ್ಪಿಸು ಎಂದು ಕೇಳಿಕೊಳ್ಳುವ ಕ್ರಮವೂ ಇದೆ. ಆದರೆ, ಭಾರತದಲ್ಲಿ ದಯಾಮರಣಕ್ಕೆ ಸಂಬಂಧಿಸಿ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಲೇ ಇರುತ್ತವೆ. ಮರಣಶಯ್ಯೆಯಲ್ಲಿದ್ದು, ಸಾವಿನ ಮನೆಯಲ್ಲಿ ಒಂದು ಕಾಲಿಟ್ಟಿದ್ದರೂ, ಜೀವ ಇನ್ನೂ ಇರುತ್ತದೆ. ಆದರೆ, ಅಂಥ ರೋಗಿ ಹಾಸಿಗೆಯಿಂದ ಏಳುವುದಿಲ್ಲ, ಮಾತನಾಡುವುದಿಲ್ಲ. ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡು ತಿಂಗಳುಗಳು, ಕೆಲವೊಮ್ಮೆ ವರ್ಷಗಳೇ ಕಳೆದಿರುತ್ತವೆ.
ಇಂಥ ರೋಗಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿಸುವುದು ಕುಟುಂಬದ ಸದಸ್ಯರಿಗೆ ಆರ್ಥಿಕವಾಗಿ ತ್ರಾಸದಾಯಕವೇ. ಅಷ್ಟೊಂದು ಚಿಕಿತ್ಸೆ ನೀಡಿದರೂ, ಅವರು ಬದುಕಿ ಉಳಿಯುವ ಸಾಧ್ಯತೆ ಕಿಂಚಿತ್ತೂ ಇರುವುದಿಲ್ಲ. ಹಾಗಾಗಿಯೇ, ಇಂಥ ಪ್ರಕರಣಗಳಲ್ಲಿ ದಯಾಮರಣಕ್ಕೆ ಅವಕಾಶ ನೀಡಬೇಕು ಎಂಬ ಆಗ್ರಹ ಕಳೆದ ಎರಡು ದಶಕಗಳಿಂದ ವ್ಯಾಪಕವಾಗಿದೆ. ಕಾನೂನು ಗೋಜಲಿನಲ್ಲಿ ಸಿಲುಕಿಕೊಂಡು ಇದಕ್ಕೆ ಪೂರ್ಣವಾದ ಸ್ಪಷ್ಟತೆ ಸಿಕ್ಕಿರಲಿಲ್ಲ. ಆದರೆ, ಕಳೆದ ಹದಿಮೂರು ವರ್ಷಗಳಿಂದ ಕೋಮಾ ಪರಿಸ್ಥಿತಿಯಲ್ಲಿ ಇರುವ 32 ವರ್ಷದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಏನಾಗಿತ್ತು?

ಅಂದು 2013ರ ಆಗಸ್ಟ್ 20, ರಕ್ಷಾಬಂಧನ ಹಬ್ಬದ ದಿನವೇ ದುರಂತ ಸಂಭವಿಸಿತು. ಮೂಲತಃ ದೆಹಲಿಯವರಾದ ಹರೀಶ್ ರಾಣಾ ಆಗ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ತಾವು ವಾಸವಿದ್ದ ಹಾಸ್ಟೆಲ್​ನ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದರು. ಈ ಅಪಘಾತದಿಂದಾಗಿ ಅವರ ತಲೆಗೆ ತೀವ್ರವಾದ ಪೆಟ್ಟಾಯಿತು. 100% ದೈಹಿಕ ಅಂಗವೈಕಲ್ಯಕ್ಕೆ ತುತ್ತಾದರು. ಇಡೀ ಶರೀರ ಪಾರ್ಶ್ವವಾಯುಗೆ ತುತ್ತಾಯಿತು. ಅಪಘಾತದ ನಂತರ ಅವರು ಕಣ್ಣು ಬಿಡಲು ಅಥವಾ ಕೈಕಾಲುಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದರು. ಅಂದಿನಿಂದ ಅವರು ಶಾಶ್ವತವಾಗಿ ‘ವೆಜಿಟೇಟಿವ್ ಸ್ಟೇಟ್’ (ಪ್ರಜ್ಞಾಹೀನ ಸ್ಥಿತಿ) ನಲ್ಲಿದ್ದಾರೆ ಮತ್ತು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೀರ್ಘಕಾಲದಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸುದೀರ್ಘಕಾಲದ ವೈದ್ಯಕೀಯ ಆರೈಕೆಯು ಅವರ ಕುಟುಂಬದ ಮೇಲೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ದೊಡ್ಡ ಹೊರೆಯನ್ನೇ ಹೊರಿಸಿದೆ. ಹರೀಶ್ ಅವರ ಪಾಲಕರು (ಅವರಿಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ) ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು ಮತ್ತು ಆಸ್ಪತ್ರೆಗೆ ಹತ್ತಿರವಿರಲು ದೆಹಲಿಯ ಮಹಾವೀರ್ ಎನ್​ಕ್ಲೇವ್​ನಲ್ಲಿದ್ದ ತಮ್ಮ ಮನೆಯನ್ನು ಮಾರಿ ಗಾಜಿಯಾಬಾದ್​ಗೆ ವಲಸೆ ಹೋಗಿದ್ದಾರೆ.

ದೀರ್ಘಕಾಲದ ಕಾನೂನು ಹೋರಾಟ

ಚೇತರಿಕೆಯ ಭರವಸೆಗಳು ಕ್ಷೀಣಿಸುತ್ತಿದ್ದಂತೆ, ರಾಣಾ ಕುಟುಂಬವು 2024ರ ಜುಲೈನಲ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿ ‘ಪರೋಕ್ಷ ದಯಾಮರಣ’ (Passive Euthanasia) ಕೋರಿ ಅರ್ಜಿ ಸಲ್ಲಿಸಿತು. ಗುಣಪಡಿಸಲಾಗದ ವೈದ್ಯಕೀಯ ಸ್ಥಿತಿಯಲ್ಲಿರುವ ರೋಗಿಗೆ ನೀಡಲಾಗುತ್ತಿರುವ ಜೀವನಾಧಾರ ಚಿಕಿತ್ಸೆಯನ್ನು ಹಿಂಪಡೆಯುವುದೇ ಈ ಪರೋಕ್ಷ ದಯಾಮರಣದ ಉದ್ದೇಶವಾಗಿದೆ. ಆದರೆ, ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತು. ಹರೀಶ್ ರಾಣಾ ಅವರು ಉಸಿರಾಟಕ್ಕಾಗಿ ಯಾಂತ್ರಿಕ ವೆಂಟಿಲೇಟರ್ ಮೇಲೆ ಅವಲಂಬಿತವಾಗಿಲ್ಲ ಮತ್ತು ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಹಾಗೂ ಪೋಷಣೆಗಾಗಿ (ಆಹಾರಕ್ಕಾಗಿ) ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಸಹಾಯದಿಂದ ಸ್ವತಃ ಬದುಕಲು ಶಕ್ತರಾಗಿದ್ದಾರೆ ಎಂದು ನ್ಯಾಯಾಲಯವು ಗಮನಿಸಿತು. ಬಳಿಕ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಯಿತು.
"

ಯಾವ ತಂದೆ-ತಾಯಿ ಮಗನಿಗೆ ಸಾವನ್ನು ಬಯಸುತ್ತಾರೆ? ಆದರೆ, ಆತ (ಹರೀಶ್) ಬದುಕುಳಿಯುವ ಸಣ್ಣ ಭರವಸೆಯೂ ಇಲ್ಲ. ಆದ್ದರಿಂದ, ದಯಾಮರಣ ಕಲ್ಪಿಸಿ ಎಂದು ಮೂರು ವರ್ಷಗಳಿಂದ ಹೋರಾಡುತ್ತಿದ್ದೇವೆ. ನ್ಯಾಯಾಲಯದ ಅಂತಿಮ ತೀರ್ಪು ಮಗನಿಗೆ ಘನತೆಯ ಸಾವು ಒದಗಿಸಲಿದೆ.

ಅಶೋಕ್ ರಾಣಾ ಹರೀಶ್ ರಾಣಾ ತಂದೆ

ನ್ಯಾಯಾಲಯ ಹೇಳಿದ್ದು

ಘನತೆ ಕಾಪಾಡಿಕೊಳ್ಳುವ ಜತೆಗೆ ಸೂಕ್ತ ಯೋಜನೆಯೊಂದಿಗೆ ಹರೀಶ್ ರಾಣಾ ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಬಹುದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ದೆಹಲಿಯ ಏಮ್ಸ್​ಗೆ ಸೂಚನೆ ನೀಡಿದೆ. ಹರೀಶ್ ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಏಮ್ಸ್​ನ ವೈದ್ಯಕೀಯ ಮಂಡಳಿ 2025ರ ಡಿಸೆಂಬರ್ 11ರಂದು ತಿಳಿಸಿತ್ತು.
ನ್ಯಾಯಮೂರ್ತಿ ಪಾರ್ದಿವಾಲಾ ಅವರು ತೀರ್ಪು ನೀಡುವ ಸಂದರ್ಭದಲ್ಲಿ ಅಮೆರಿಕದ ಧರ್ಮಗುರು ಹೆನ್ರಿ ವಾರ್ಡ್ ಬೀಚರ್ ಅವರ ಮಾತುಗಳನ್ನು ಉಲ್ಲೇಖಿಸುತ್ತ, ‘ದೇವರು ಮನುಷ್ಯನನ್ನು ಅವನು ಜೀವನವನ್ನು ಸ್ವೀಕರಿಸುತ್ತಾನೋ ಇಲ್ಲವೋ ಎಂದು ಕೇಳುವುದಿಲ್ಲ, ಅವನು ಜೀವನವನ್ನು ಸ್ವೀಕರಿಸಲೇಬೇಕು’ ಎಂದರು. ಜತೆಗೆ, ವಿಲಿಯಂ ಶೇಕ್ಸ್​ಪಿಯರ್​ನ ಪ್ರಸಿದ್ಧ ನಾಟಕ ‘ಹ್ಯಾಮ್ಲೆಟ್’ನ ಸಾಲಾದ To be or not to be
(ಇರಬೇಕೇ ಅಥವಾ ಬೇಡವೇ) ಎಂಬುದನ್ನು ಪ್ರಸ್ತಾಪಿಸುತ್ತ, ನ್ಯಾಯಾಲಯಗಳು ಹಲವು ಬಾರಿ ಇಂತಹ ಸಂದರ್ಭಗಳಲ್ಲಿ ಸಾಯುವ ಹಕ್ಕು (Right to die) ಕುರಿತಾದ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ವಿದೇಶಗಳಲ್ಲಿ ಹೇಗಿದೆ..?

ನೆದರ್​ಲ್ಯಾಂಡ್ಸ್ 2002ರಲ್ಲಿ ವಿಶ್ವದಲ್ಲಿ ಮೊದಲ ಬಾರಿ ವ್ಯಕ್ತಿಗೆ ವಿಶಿಷ್ಟ ಸಂದರ್ಭಗಳಲ್ಲಿ ಸ್ವಇಚ್ಛೆಯ ಸಾವಿನ ಅವಕಾಶವನ್ನು ನೀಡಿತು. ಅದೇ ವರ್ಷ ಬೆಲ್ಜಿಯಂ ದೇಶ ದಯಾಮರಣದ ಕಾನೂನನ್ನು ಮಾನ್ಯ ಮಾಡಿತು. ಬೆಲ್ಜಿಯಂನಲ್ಲಿ ಈ ಕಾನೂನು ಮಕ್ಕಳ ಅನಾರೋಗ್ಯದ ಪರಿಸ್ಥಿತಿಗಳಿಗೂ ಅನ್ವಯಿಸುತ್ತದೆ. ಅಮೆರಿಕದ ಐದು ರಾಜ್ಯಗಳಲ್ಲಿ ಮಾತ್ರ ದಯಾಮರಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹರೀಶ್ ರಾಣಾ ಪ್ರಕರಣದ ವಿವರ

2013ರ ಆಗಸ್ಟ್ 20: ಚಂಡೀಗಢ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿ ಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ, ತಮ್ಮ ಹಾಸ್ಟೆಲ್ ಕಟ್ಟಡದ 4ನೇ ಮಹಡಿಯಿಂದ ಕೆಳಗೆ ಬಿದ್ದು ತೀವ್ರ ಮಿದುಳಿನ ಗಾಯಗಳಿಗೆ ಒಳಗಾದರು.
2024ರ ಜುಲೈ: ಹರೀಶ್ ರಾಣಾ ಕುಟುಂಬವು ‘ಪರೋಕ್ಷ ದಯಾಮರಣ’ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತು; ಆದರೆ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿತು.
2024ರ ನವೆಂಬರ್: ಸುಪ್ರೀಂ ಕೋರ್ಟ್ ಕೂಡ ದಯಾಮರಣಕ್ಕೆ ಅನುಮತಿ ನೀಡಲು ನಿರಾಕರಿಸಿತು, ಆದರೆ ಚಿಕಿತ್ಸೆಯ ಬೆಂಬಲದ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.
2025ರ ಡಿಸೆಂಬರ್: ಹರೀಶ್ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಮತ್ತು ಅವರನ್ನು ಕೃತಕವಾಗಿ ಜೀವಂತವಾಗಿರಿಸಲಾಗಿದೆ ಎಂದು ತಿಳಿಸಿ ಪಾಲಕರು ಮತ್ತೆ ಸುಪ್ರೀಂ ಕೋರ್ಟ್​ಗೆ ಮೊರೆ ಹೋದರು.
2026ರ ಜನವರಿ 13: ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಹರೀಶ್ ರಾಣಾ ಪಾಲಕರನ್ನು ಭೇಟಿ ಮಾಡಿದರು.
2026ರ ಜನವರಿ 15: ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತು.
2026ರ ಮಾರ್ಚ್ 11: ದಯಾಮರಣಕ್ಕೆ ಅನುಮತಿ ನೀಡಿ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪ.

ನಿಯಮಗಳು ಹೇಳುವುದೇನು?

ಅರುಣಾ ಶಾನಭಾಗ್ ಪ್ರಕರಣದ ಕುರಿತು ಹೊರಬಂದ 2011ರ ಪ್ಯಾಸಿವ್ ಯೂತನೇಸಿಯಾ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯ ಮಿದುಳು ಈಗಾಗಲೇ ನಿಷ್ಕ್ರಿಯವಾಗಿದ್ದರೆ ಉಸಿರಾಟದ ಆಸರೆ ನೀಡುವ ಯಂತ್ರದ ಸಹಾಯವನ್ನು ನಿಲ್ಲಿಸಬಹುದು ; ವ್ಯಕ್ತಿಯ ದೇಹ ಸಂಪೂರ್ಣವಾಗಿ ನಿಷ್ಕ್ರಿಯ ಸ್ಥಿತಿಯಲ್ಲಿದ್ದರೆ (ಪರ್ಮನೆಂಟ್ ವೆಜಿಟೇಟಿವ್ ಸ್ಟೇಟ್) ಆಹಾರ ನಳಿಗೆಯಿಂದ ಉಣ್ಣಿಸುವ ಆಹಾರವನ್ನು ಕ್ರಮೇಣವಾಗಿ ನಿಲ್ಲಿಸಬಹುದು. ಮತ್ತು ಕೇವಲ ನೋವು ನಿವಾರಕ ಔಷಧಗಳನ್ನು ನೀಡಬಹುದು.
ದಯಾಮರಣಕ್ಕೆ ಸಂಬಂಧಿಸಿ ಭಾರತದಲ್ಲಿ 2018ರಲ್ಲಿ ನೀಡಿದ ತೀರ್ಪು ಕೆಲ ಅಂಶಗಳನ್ನು ಸ್ಪಷ್ಟಪಡಿಸಿತು. ‘ಪರೋಕ್ಷವಾಗಿ’ ಇಚ್ಛಾಮರಣಕ್ಕೆ (ಪ್ಯಾಸಿವ್ ಯೂತನೇಸಿಯಾ) ಅನುಮತಿ ನೀಡಿತು. ಅಂದರೆ, ಯಾವುದೇ ವ್ಯಕ್ತಿ ತೀವ್ರತರವಾದ ಅನಾರೋಗ್ಯ ಪರಿಸ್ಥಿತಿಯಲ್ಲಿ ಅಪಾರ ನೋವು-ಹಿಂಸೆಗಳಿಂದ ನರಳು ತ್ತಿದ್ದರೂ, ಆ ವ್ಯಕ್ತಿಯ ಅನುಮತಿ ಇದ್ದರೂ ಜೀವವನ್ನು ವೈದ್ಯರು ನೇರವಾಗಿ ಕೊನೆಗೊಳಿಸುವಂತಿಲ್ಲ. ಆದರೆ, ಸಾವಿನ ಅಂಚಿನಲ್ಲಿ ಇರುವ ವ್ಯಕ್ತಿಯ ಆಯ್ಕೆಯನ್ನು ಗೌರವಿಸುವ ನಿಟ್ಟಿನಲ್ಲಿ ಆತನ ‘ಲಿವಿಂಗ್ ವಿಲ್’ಗೆ ಮನ್ನಣೆ ಕೊಟ್ಟು ‘ಸಾವಿಗೆ ಸಹಕರಿಸುವ’ ಅನುಮತಿ ನೀಡಲಾಗಿದೆ. ಹಾಗಾಗಿ, ರೋಗಿಯ ಆರೈಕೆ ಮಾಡುವ ವೈದ್ಯಕೀಯ ತಂಡವು ಚಿಕಿತ್ಸೆಯನ್ನು ಮುಂದುವರಿಸದೆ ನಿಲ್ಲಿಸಬಹುದು ಮತ್ತು ಆದಷ್ಟು ನೋವು ರಹಿತ ಘನತೆಯ ಕೊನೆಯ ದಿನಗಳೊಂದಿಗೆ ಸಾವನ್ನು ಬರಮಾಡಿಕೊಳ್ಳಲು ಸಹಕರಿಸಬಹುದು.

ಮುಂದೇನು..?

ಹರೀಶ್​ನನ್ನು ಮನೆಯಿಂದ ದೆಹಲಿ ಏಮ್ಸ್​ಗೆ ಶಿಫ್ಟ್ ಮಾಡಲಾಗುತ್ತದೆ. ಪ್ಯಾಲಿಯೇಟಿವ್ ಕೇರ್ ವಿಭಾಗದಲ್ಲಿ ದಾಖಲಿಸಿ, ಲೈಫ್ ಸಪೋರ್ಟ್ ಸಿಸ್ಟಮ್​ನ ಸೂಕ್ತ ಯೋಜನೆ ಮುಖಾಂತರ ನಿಲ್ಲಿಸಲಾಗುತ್ತದೆ

42 ವರ್ಷ ಕೋಮಾದಲ್ಲಿದ್ದ ಅರುಣಾ

ಭಾರತದಲ್ಲಿ ದಯಾಮರಣದ ಅಹವಾಲನ್ನು ಮೊದಲ ಬಾರಿಗೆ ಅರುಣಾ ಶಾನಭಾಗ್ ಪ್ರಕರಣದಲ್ಲಿ ಸಲ್ಲಿಸಲಾಯಿತು. ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಉ.ಕನ್ನಡ ಜಿಲ್ಲೆಯ ಅರುಣಾ ಮೇಲೆ 1973ರಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿದ್ದರಿಂದ ಅರುಣಾ ಶಾಶ್ವತವಾಗಿ ಕೋಮಾ ಪರಿಸ್ಥಿತಿಗೆ ಜಾರಿದರು. ಅರುಣಾಳಿಗೆ ದಯಾಮರಣ ಕೋರಿ ಪತ್ರಕರ್ತೆ ಪಿಂಕಿ ವಿರಾನಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ 42 ವರ್ಷಗಳ ಕಾಲ ಕೋಮಾದಲ್ಲೇ ಇದ್ದ ಅರುಣಾಳಿಗೆ ಘನತೆಯ ಸಾವು ಸಿಗಲೇ ಇಲ್ಲ. ದಯಾಮರಣದ ಅವಕಾಶಕ್ಕಾಗಿ ಕಾಯುತ್ತಲೇ 2015ರಲ್ಲಿ ಪ್ರಾಣ ತೊರೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net