ಭವಿಷ್ಯದ ಭರವಸೆ ಎಥೆನಾಲ್​

ಭವಿಷ್ಯದ ಭರವಸೆ ಎಥೆನಾಲ್​
ಭವಿಷ್ಯದ ಭರವಸೆ ಎಥೆನಾಲ್​
Published on

ಕಳೆದ ಕೆಲವು ವರ್ಷಗಳಲ್ಲಿ ಭಾರತ ಎಥೆನಾಲ್ ಉತ್ಪಾದನೆಯಲ್ಲಿ ಭಾರಿ ಪ್ರಗತಿ ಸಾಧಿಸಿರುವುದಂತೂ ಹೌದು. 2025ರ ನವೆಂಬರ್ ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟು ಎಥೆನಾಲ್ ಉತ್ಪಾದನಾ ಸಾಮರ್ಥ್ಯ 1,990 ಕೋಟಿ ಲೀಟರ್‌ಗಳಿಗೆ ತಲುಪಿದೆ. ಭಾರತವು ಈಗಾಗಲೇ ಪೆಟ್ರೋಲ್‌ನಲ್ಲಿ ಶೇಕಡ 20ರಷ್ಟು (ಇ-20) ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಬಹುತೇಕ ತಲುಪಿದೆ. ಮೊದಮೊದಲು ಕೇವಲ ಕಬ್ಬಿನ ಹಾಲಿನಿಂದ ಎಥೆನಾಲ್ ತಯಾರಿಸಲಾಗುತ್ತಿತ್ತು. ಆದರೆ ಈಗ ಅಕ್ಕಿ, ಮೆಕ್ಕೆಜೋಳ ಮತ್ತು ಕೃಷಿ ತ್ಯಾಜ್ಯಗಳಿಂದಲೂ ಉತ್ಪಾದನೆ ಮಾಡಲಾಗುತ್ತಿದೆ.

ಶೇ.100ರಷ್ಟು ಎಥೆನಾಲ್ (ಇ-100) ಬಳಕೆಗಿರುವ ಅಡೆತಡೆಗಳು: ಪ್ರಸ್ತುತ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸಾಮಾನ್ಯ ವಾಹನಗಳು 100% ಎಥೆನಾಲ್‌ನಲ್ಲಿ ಓಡಲಾರವು. ಎಥೆನಾಲ್ ಪೆಟ್ರೋಲ್‌ಗಿಂತ ಇಂಜಿನ್ ಅನ್ನು ಹೆಚ್ಚು ತುಕ್ಕು ಹಿಡಿಸುವ ಗುಣ ಹೊಂದಿದ್ದು, ಇದಕ್ಕಾಗಿ ಇಂಜಿನ್ ಮತ್ತು ಇಂಧನ ಪೈಪ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಇದನ್ನೇ ‘ಫ್ಲೆಕ್ಸ್ ಫ್ಯುಯೆಲ್’ ತಂತ್ರಜ್ಞಾನ ಎನ್ನಲಾಗುತ್ತದೆ. ಅಲ್ಲದೆ, ಎಥೆನಾಲ್‌ನ ಶಕ್ತಿಯ ಸಾಂದ್ರತೆ ಪೆಟ್ರೋಲ್‌ಗಿಂತ 30-35% ಕಡಿಮೆ ಇರುತ್ತದೆ. ಅಂದರೆ, 100% ಎಥೆನಾಲ್ ಬಳಸಿದರೆ ವಾಹನದ ಮೈಲೇಜ್ ಗಣನೀಯವಾಗಿ ಕಡಿಮೆಯಾಗಬಹುದು.

20% ಮಿಶ್ರಣಕ್ಕೆ 1,000 ಕೋಟಿ ಲೀಟರ್ ಎಥೆನಾಲ್ ಬೇಕು. 100% ಗುರಿ ತಲುಪಬೇಕೆಂದರೆ ಉತ್ಪಾದನೆಯನ್ನು ಈಗಿರುವುದಕ್ಕಿಂತ ಐದು ಪಟ್ಟು ಹೆಚ್ಚಿಸಬೇಕಾಗುತ್ತದೆ, ಇದು ಅಷ್ಟು ಸುಲಭದ ಮಾತಲ್ಲ.

ಗುರಿ ಮುಟ್ಟಬಹುದೆ?

ಸಂಪೂರ್ಣ 100% ಎಥೆನಾಲ್ ಮಿಶ್ರಣವು ರಾತ್ರೋರಾತ್ರಿ ಸಾಧ್ಯವಿಲ್ಲದಿದ್ದರೂ, ಸರ್ಕಾರವು ಹಂತಹಂತವಾಗಿ ಈ ಗುರಿಯತ್ತ ಹೆಜ್ಜೆಹಾಕುತ್ತಿದೆ. ಸರ್ಕಾರವು ಈಗಾಗಲೇ ಇ-85 ಮತ್ತು ಇ-100 ಇಂಧನಗಳ ಬಳಕೆಯ ಬಗ್ಗೆ ಪರೀಕ್ಷೆಗಳನ್ನು ನಡೆಸಲು ಹೊಸ ನಿಯಮಗಳನ್ನು ಹೊರಡಿಸಲು ಸಿದ್ಧತೆ ನಡೆಸಿದೆ. ಬ್ರೆಜಿಲ್‌ನಲ್ಲಿ ಈಗಾಗಲೇ 100% ಎಥೆನಾಲ್ ಬಳಸುವ ವಾಹನಗಳಿವೆ. ಭಾರತವೂ ಅದೇ ಹಾದಿಯಲ್ಲಿ ಸಾಗಲು ಪ್ರಯತ್ನಿಸುತ್ತಿದೆ. ಭಾರತವು ಶೀಘ್ರದಲ್ಲೇ 100% ಎಥೆನಾಲ್ ಬಳಸಲು ಸಾಧ್ಯವಾಗದಿದ್ದರೂ, ಮುಂದಿನ ಕೆಲವು ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಫ್ಲೆಕ್ಸ್ ಫ್ಯುಯೆಲ್ ವಾಹನಗಳು ಮಾರುಕಟ್ಟೆಗೆ ಬಂದರೆ ಮತ್ತು ಉತ್ಪಾದನೆ ಹೆಚ್ಚಾದರೆ, ಪೆಟ್ರೋಲ್ ಮೇಲಿನ ಅವಲಂಬನೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಇದು ರೈತರಿಗೂ ಹೆಚ್ಚಿನ ಆದಾಯ ತಂದುಕೊಡಲಿದೆ.

- ಪಶ್ಚಿಮ ಏಷ್ಯಾದ ಯುದ್ಧದ ಬಿಕ್ಕಟ್ಟಿನಿಂದಾಗಿ ಇಂಧನ ಭದ್ರತೆಯ ಸವಾಲು ಎದುರಾಗಿರುವ ಹಿನ್ನೆಲೆಯಲ್ಲಿ, ಭಾರತ ಶೀಘ್ರದಲ್ಲೇ ಶೇಕಡ 100ರಷ್ಟು ಎಥೆನಾಲ್ ಮಿಶ್ರಣದ ಗುರಿ ಹೊಂದಬೇಕು. ಭಾರತ ತನ್ನ ತೈಲ ಅಗತ್ಯಕ್ಕಾಗಿ ಶೇಕಡ 87ರಷ್ಟು ಆಮದನ್ನೇ ಅವಲಂಬಿಸಿದ್ದು, ವಾರ್ಷಿಕವಾಗಿ 22 ಲಕ್ಷ ಕೋಟಿ ರೂ. ಮೊತ್ತದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಬ್ರೆಜಿಲ್ ಮಾದರಿಯಲ್ಲಿ ಭಾರತವೂ ಜೈವಿಕ ಇಂಧನ ಉತ್ಪಾದನೆಗೆ ಆದ್ಯತೆ ನೀಡಬೇಕು. ಗ್ರೀನ್ ಹೈಡ್ರೋಜನ್ ಭವಿಷ್ಯದ ಇಂಧನವಾಗಿದ್ದು, ತ್ಯಾಜ್ಯದಿಂದ ಹೈಡ್ರೋಜನ್ ಉತ್ಪಾದಿಸುವ ಮೂಲಕ ಭಾರತವನ್ನು ಇಂಧನ ರಫ್ತುದಾರ ದೇಶವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ.- ನಿತಿನ್ ಗಡ್ಕರಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ

ಉತ್ಪಾದನೆ ಹೆಚ್ಚಿಸಲು ಕೈಗೊಂಡ ಕ್ರಮಗಳು

ಸರ್ಕಾರವು ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ಇಂಧನ ನೀತಿಯಲ್ಲಿ ಬದಲಾವಣೆ ತಂದಿದೆ. 2030ರ ಒಳಗಿದ್ದ ಶೇಕಡ 20ರಷ್ಟು ಮಿಶ್ರಣದ ಗುರಿಯನ್ನು 2025-26ಕ್ಕೆ ಮುಂಚಿತವಾಗಿಯೇ ಬದಲಾಯಿಸಲಾಗಿದೆ. ಹೊಸ ಎಥೆನಾಲ್ ಘಟಕಗಳನ್ನು ಸ್ಥಾಪಿಸಲು ಅಥವಾ ಹಳೆಯವುಗಳನ್ನು ವಿಸ್ತರಿಸಲು ಬ್ಯಾಂಕ್‌ಗಳಿಂದ ಸಾಲ ಪಡೆದರೆ, ಸರ್ಕಾರವು ಬಡ್ಡಿಯ ಮೇಲೆ ರಿಯಾಯಿತಿ ನೀಡುತ್ತಿದೆ.

ಕೇವಲ ಕಬ್ಬಿನ ಹಾಲಿಗೆ ಸೀಮಿತವಾಗದೆ, ಅಕ್ಕಿ, ಮೆಕ್ಕೆಜೋಳ ಮತ್ತು ಕೃಷಿ ತ್ಯಾಜ್ಯಗಳಿಂದ ಉತ್ಪಾದನೆ ಮಾಡಲು ಅನುಮತಿ ನೀಡಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಎಥೆನಾಲ್ ಖರೀದಿಸಲು ಸರ್ಕಾರವು ಮೊದಲೇ ದರವನ್ನು ನಿಗದಿಪಡಿಸುತ್ತದೆ, ಇದರಿಂದ ಉತ್ಪಾದಕರಿಗೆ ಖಚಿತವಾದ ಆದಾಯ ಸಿಗುತ್ತದೆ. ಎಥೆನಾಲ್ ಮೇಲಿನ ಜಿಎಸ್‌ಟಿಯನ್ನು 18%ರಿಂದ 5% ಕ್ಕೆ ಇಳಿಸಲಾಗಿದೆ, ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿದೆ. ಇತ್ತೀಚಿನ ವರದಿಗಳಂತೆ ವಿಮಾನ ಇಂಧನದಲ್ಲೂ ಎಥೆನಾಲ್ ಮಿಶ್ರಣ ಮಾಡಲು ಸರ್ಕಾರ ಅನುಮತಿ ನೀಡುವತ್ತ ಹೆಜ್ಜೆ ಹಾಕಿದೆ.

ಫ್ಲೆಕ್ಸ್ ಫ್ಯುಯೆಲ್ ತಂತ್ರಜ್ಞಾನ ಎಂದರೇನು?ಸಾಮಾನ್ಯವಾಗಿ ವಾಹನಗಳು ಕೇವಲ ಪೆಟ್ರೋಲ್ ಅಥವಾ ಡೀಸೆಲ್ ಮೂಲಕ ಚಲಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ ಫ್ಲೆಕ್ಸ್ ಫ್ಯುಯೆಲ್ ಇಂಜಿನ್ ಒಂದಕ್ಕಿಂತ ಹೆಚ್ಚು ರೀತಿಯ ಇಂಧನ ಅಥವಾ ಇಂಧನಗಳ ಮಿಶ್ರಣದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ತಂತ್ರಜ್ಞಾನವಾಗಿದೆ. ಈ ಇಂಜಿನ್ ಹೊಂದಿರುವ ವಾಹನವು 100% ಪೆಟ್ರೋಲ್‌ನಿಂದ ಹಿಡಿದು 85% ಅಥವಾ 100% ವರೆಗಿನ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಯಾವುದೇ ತೊಂದರೆಯಿಲ್ಲದೆ ಓಡಬಲ್ಲದು. ಭಾರತವು ಫ್ಲೆಕ್ಸ್ ಫ್ಯುಯೆಲ್ ತಂತ್ರಜ್ಞಾನದ ಪ್ರಾಥಮಿಕ ಹಂತದಲ್ಲಿದೆ. ಮುಂದಿನ 2-3 ವರ್ಷಗಳಲ್ಲಿ ರಸ್ತೆಗಳ ಮೇಲೆ ಇಂತಹ ವಾಹನಗಳು ಸಾಮಾನ್ಯವಾಗುವ ನಿರೀಕ್ಷೆಯಿದೆ.

ಇಂಜಿನ್‌ನಲ್ಲಿರುವ ಫ್ಯುಯೆಲ್ ಸೆನ್ಸರ್ ಇಂಧನದಲ್ಲಿ ಎಥೆನಾಲ್ ಪ್ರಮಾಣ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಿ, ಅದಕ್ಕೆ ತಕ್ಕಂತೆ ಇಂಧನ ದಹನ ಪ್ರಕ್ರಿಯೆಯನ್ನು ತಾನೇ ಸರಿಹೊಂದಿಸಿಕೊಳ್ಳುತ್ತದೆ. ಭಾರತ ಸರ್ಕಾರವು ಈಗಾಗಲೇ ಪ್ರಮುಖ ವಾಹನ ತಯಾರಕರೊಂದಿಗೆ ಸೇರಿ ಫ್ಲೆಕ್ಸ್ ಫ್ಯುಯೆಲ್ ವಾಹನಗಳ ಪ್ರಾಯೋಗಿಕ ಪರೀಕ್ಷೆ ಆರಂಭಿಸಿದೆ. ಟೊಯೋಟಾ ಸಂಸ್ಥೆ ತನ್ನ ‘ಮಿರಾಲ್’ ಮತ್ತು ಫ್ಲೆಕ್ಸ್ ಫ್ಯುಯೆಲ್ ಹೈಬ್ರಿಡ್ ಕಾರುಗಳನ್ನು ಭಾರತದಲ್ಲಿ ಪ್ರದರ್ಶಿಸಿದೆ. ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಮತ್ತು ಟೊಯೋಟಾ ಕಂಪನಿಗಳು ಫ್ಲೆಕ್ಸ್ ಫ್ಯುಯೆಲ್ ಇಂಜಿನ್ ತಯಾರಿಸಲು ಮುಂದಾಗಿವೆ. ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮತ್ತು ಬಜಾಜ್ ಈಗಾಗಲೇ ಎಥೆನಾಲ್ ಆಧಾರಿತ ಬೈಕ್ ಮಾದರಿಗಳನ್ನು ಪ್ರದರ್ಶಿಸಿವೆ. ಸರ್ಕಾರವು ಫ್ಲೆಕ್ಸ್ ಫ್ಯುಯೆಲ್ ವಾಹನಗಳ ಮೇಲೆ ಜಿಎಸ್‌ಟಿ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದು ವಾಹನಗಳ ಬೆಲೆ ಕಡಿಮೆ ಮಾಡಲು ಸಹಾಯ ಮಾಡಲಿದೆ. ಅಲ್ಲದೆ, ಪೆಟ್ರೋಲ್‌ಗಿಂತ ಎಥೆನಾಲ್ ಅಗ್ಗವಾಗಿರುವುದರಿಂದ ಗ್ರಾಹಕರಿಗೆ ಲಾಭವಾಗುವ ಸಾಧ್ಯತೆಯಿದೆ.

ಮೂಲಸೌಕರ್ಯ ಸವಾಲು: ಫ್ಲೆಕ್ಸ್ ಫ್ಯುಯೆಲ್ ಜಾರಿಗೆ ಬರಬೇಕೆಂದರೆ ಕೇವಲ ವಾಹನ ಇದ್ದರೆ ಸಾಲದು, ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಇಂಧನ ಸಿಗುವಂತೆ ಮಾಡಬೇಕು. ಸರ್ಕಾರವು ಹಂತ-ಹಂತವಾಗಿ ಇಂಧನ ಮಾರಾಟ ಮಳಿಗೆಗಳನ್ನು ಸಿದ್ಧಪಡಿಸುತ್ತಿದೆ.

ಲಾಭಗಳು

ಕಬ್ಬು ಮತ್ತು ಧಾನ್ಯಗಳಿಂದ ಎಥೆನಾಲ್ ತಯಾರಿಸುವುದರಿಂದ ರೈತರ ಆದಾಯ ಹೆಚ್ಚುತ್ತದೆ.

ಭಾರತವು ಕಚ್ಚಾ ತೈಲಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದ್ದು, ಪ್ರತಿ ವರ್ಷ 26 ಲಕ್ಷ ಕೋಟಿ ರೂಪಾಯಿ ಇದಕ್ಕಾಗಿ ಖರ್ಚು ಮಾಡುತ್ತಿದೆ. ಎಥೆನಾಲ್ ಬಳಕೆ ಹೆಚ್ಚಾದಷ್ಟು ದೇಶದ ಹಣ ಉಳಿತಾಯವಾಗುತ್ತದೆ.

ಪೆಟ್ರೋಲ್‌ಗೆ ಹೋಲಿಸಿದರೆ ಎಥೆನಾಲ್ ಕಡಿಮೆ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತದೆ, ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ.

ಜೈವಿಕ ಇಂಧನ ಹೆಚ್ಚು ಉತ್ಪಾದಿಸುವ ರಾಜ್ಯಗಳು

ಉತ್ತರ ಪ್ರದೇಶ: ದೇಶದ ಅತಿದೊಡ್ಡ ಎಥೆನಾಲ್ ಉತ್ಪಾದಕ ರಾಜ್ಯ. ಇಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿರುವುದರಿಂದ ಕಬ್ಬಿನ ಹಾಲಿನಿಂದ ಹೆಚ್ಚಿನ ಉತ್ಪಾದನೆ ನಡೆಯುತ್ತದೆ.

ಮಹಾರಾಷ್ಟ್ರ: ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯ. ಸಹಕಾರಿ ಸಕ್ಕರೆ ಕಾರ್ಖಾನೆಗಳ ಜಾಲ ಇಲ್ಲಿ ಬಲವಾಗಿದೆ.

ಕರ್ನಾಟಕ: ಮೂರನೇ ಪ್ರಮುಖ ರಾಜ್ಯ. ಇಲ್ಲಿ ಕಬ್ಬಿನ ಜೊತೆಗೆ ಮೆಕ್ಕೆಜೋಳದಿಂದಲೂ ಎಥೆನಾಲ್ ತಯಾರಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಇತರ ರಾಜ್ಯಗಳು: ಬಿಹಾರ, ಹರಿಯಾಣ, ಪಂಜಾಬ್ ಮತ್ತು ಆಂಧ್ರಪ್ರದೇಶಗಳು ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆಯಲ್ಲಿ ವೇಗವಾಗಿ ಬೆಳೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net