ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣ ಪ್ರಯೋಗವಾಗಿದ್ದು, ಮುಂದಿನ ವರ್ಷ ಫಲಿತಾಂಶ ಬರಲಿದೆ: ಸುಪ್ರೀಂಕೋರ್ಟ್​ಗೆ ಕೇಂದ್ರ ಮಾಹಿತಿ | Ethanol blending

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Published on
ನವದೆಹಲಿ: ಪೆಟ್ರೋಲ್​ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ(Ethanol blending) ಮಾಡುವ ಕಾರ್ಯಕ್ರಮವೂ ಇನ್ನೂ ನಡೆಯುತ್ತಿರುವ ಪ್ರಯೋಗವಾಗಿದ್ದು, ಮುಂದಿನ ವರ್ಷದ ವೇಳೆಗೆ ಈ ನೀತಿಯ ಪರಿಣಾಮ ಸ್ಪಷ್ಟವಾಗಲಿದೆ ಎಂದು ಮಂಗಳವಾರ(ಜೂ. 30) ಸುಪ್ರೀಂಕೋರ್ಟ್​​ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವು ಹಳೆಯ ವಾಹನಗಳಿಗೆ ಹಾನಿ ಮಾಡುತ್ತದೆ ಮತ್ತು ಇಂಧನ ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಜೊತೆ ವಾಹನದ ಇಂಜಿನ್​ ಅನ್ನು ಹಾಳು ಮಾಡುತ್ತದೆ ಎಂಬ ಕಳವಳ ಮಧ್ಯೆ ಕೇಂದ್ರ ಸರ್ಕಾರದಿಂದ ಈ ಹೇಳಿಕೆ ಬಂದಿದೆ.
2025-26ರ ಸಾಲಿನ ಎಥೆನಾಲ್ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್​ ಆದೇಶಕ್ಕೆ ತಡೆ ನೀಡಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.
ಈ ವೇಳೆ ಕೇಂದ್ರದ ಪರವಾಗಿ ಹಾಜರಾಗಿ ವಾದಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸರ್ಕಾರವು 20% ಎಥೆನಾಲ್ ಮಿಶ್ರಣವನ್ನು ಪ್ರಯೋಗಿಸಲು ಪ್ರಯತ್ನಿಸುತ್ತಿದೆ. ಮುಂದಿನ ವರ್ಷದ ವೇಳೆಗೆ ನಮಗೆ ಅದರ ಫಲಿತಾಂಶಗಳು ಸಿಗಲಿವೆ. ಈ ಹಂತದಲ್ಲಿ ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ನ್ಯಾಯಾಂಗ ಹಸ್ತಕ್ಷೇಪವು ಸರ್ಕಾರದ ರಾಷ್ಟ್ರೀಯ ಎಥೆನಾಲ್ ಮಿಶ್ರಣ ನೀತಿಯನ್ನು ಅಸ್ಥಿರಗೊಳಿಸಬಹುದು ಎಂದು ತಿಳಿಸಿದರು.
ದೇಶಾದ್ಯಂತ ಹಲವಾರು ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಇದೇ ರೀತಿಯ ವಿವಾದಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಇದು ವಿಭಿನ್ನ ನ್ಯಾಯಾಲಯಗಳಿಂದ ಸಂಘರ್ಷದ ತೀರ್ಪುಗಳಿಗೆ ಕಾರಣವಾಗಬಹುದು. ಹೀಗಾಗಿ ಎಲ್ಲಾ ಪ್ರಕರಣಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸಬೇಕೆಂದು ಎಂದು ಮನವಿ ಮಾಡಿದರು.
ಖಾಸಗಿ ಕಂಪನಿಗಳ ಪರ ವಾದಿಸಿದ ವಕೀಲ ಸಿದ್ಧಾರ್ಥ್ ದೇವ್, ಅಟಾರ್ನಿ ಜನರಲ್ ಅವರ ಮನವಿಯನ್ನು ವಿರೋಧಿಸಿದರು. ಮತ್ತು ಇದೆಲ್ಲವೂ ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುವ ಪ್ರಯತ್ನ ಎಂದು ತಿಳಿಸಿದರು. ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ಬಳಿಕ ಸುಪ್ರೀಂ ಕೋರ್ಟ್, ಎರಡೂ ಕಡೆಯವರು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net