ಎಪ್​ಸ್ಟೀನ್ ಫೈಲ್ಸ್ ಕಂಪನ

Epstein Files
Epstein Files
Published on
ಎಪ್​ಸ್ಟೀನ್ ಫೈಲ್ಸ್ ಜಾಗತಿಕವಾಗಿ ಕಂಪನ ಸೃಷ್ಟಿಸಿದ್ದು, ಈ ಪ್ರಕರಣದಲ್ಲಿ ಮೊದಲ ಬಂಧನ ಗುರುವಾರದಂದು ಆಗಿದೆ. ಬ್ರಿಟನ್​ನ ಕಿಂಗ್ ಚಾರ್ಲ್ಸ್-3 ಅವರ ಸೋದರ ಆಂಡ್ರೂ ಮೌಂಟ್​ಬ್ಯಾಟನ್-ಮಿಂಡ್ಸರ್ ಅವರನ್ನು ಸರ್ಕಾರಿ ಕಚೇರಿಯಲ್ಲಿ ದುರ್ನಡತೆ ಶಂಕೆಯ ಮೇಲೆ ಪೊಲೀಸರು ಬಂಧಿಸಿದ್ದಾರೆ. ಜನ್ಮದಿನದಂದೇ ಆಂಡ್ರೂ ಬಂಧಿತರಾಗಿದ್ದು, ರಾಜಪರಿವಾರ ತೀವ್ರ ಮುಜುಗರ ಅನುಭವಿಸುವಂತಾಗಿದೆ. ಮಾತ್ರವಲ್ಲ, ಎಪಸ್ಟೀನ್ ಫೈಲ್ಸ್​ನಲ್ಲಿ ಹಲವು ಪ್ರತಿಷ್ಠಿತರ ಹೆಸರು ಇದ್ದು, ಹಲವು ರಹಸ್ಯ ಹಾಗೂ ನಿಗೂಢ ಸಂಗತಿಗಳು ಬಹಿರಂಗವಾಗಿವೆ. ಈ ಕುರಿತಾದ ವಿವರ ಇಲ್ಲಿದೆ.

ಏನಿದು ಎಪ್​ಸ್ಟೀನ್ ಫೈಲ್ಸ್ ಪ್ರಕರಣ..?

ಜೆಫ್ರಿ ಎಪ್​ಸ್ಟೀನ್ ಪ್ರಕರಣವು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಮತ್ತು ಆಘಾತಕಾರಿ ಲೈಂಗಿಕ ಹಗರಣಗಳಲ್ಲಿ ಒಂದಾಗಿದೆ. ಈ ಪ್ರಕರಣವು ಜಾಗತಿಕ ಮಟ್ಟದಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳ ಮತ್ತು ಇತರ ಗಣ್ಯರ ನಿದ್ದೆಗೆಡಿಸಿದೆ. ಎಪಸ್ಟೀನ್ ನಡೆಸುತ್ತಿದ್ದ ಅಕ್ರಮ ಜಾಲದ ಬಗ್ಗೆ ಪ್ರತಿಷ್ಠಿತ ವ್ಯಕ್ತಿಗಳು ತಿಳಿದಿದ್ದರೂ ಸುಮ್ಮನಿದ್ದರು ಅಥವಾ ಕೆಲವರು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬುದು ಸಂತ್ರಸ್ತರ ಗಂಭೀರ ಆರೋಪ.
ಬಡತನ ಅಥವಾ ಕಷ್ಟದಲ್ಲಿರುವ ಅಪ್ರಾಪ್ತ ಬಾಲಕಿಯರನ್ನು ಎಪ್​ಸ್ಟೀನ್ ಹಣದ ಆಮಿಷವೊಡ್ಡಿ ಕರೆತರುತ್ತಿದ್ದ. ನಂತರ ಅವರನ್ನು ತಾನು ಮತ್ತು ತನ್ನ ಪ್ರಭಾವಿ ಸ್ನೇಹಿತರು ಲೈಂಗಿಕವಾಗಿ ಬಳಸಿಕೊಳ್ಳುವಂತೆ ಮಾಡುತ್ತಿದ್ದ. ಈತನ ಗೆಳತಿ ಗಿಸ್ಲೇನ್ ಮ್ಯಾಕ್ಸ್​ವೆಲ್, ಎಪ್​ಸ್ಟೀನ್ ಪರವಾಗಿ ಇಂತಹ ಬಾಲಕಿಯರನ್ನು ಹುಡುಕಿ ತರುವ ಕೆಲಸ ಮಾಡುತ್ತಿದ್ದಳು ಎಂಬ ಆರೋಪದ ಮೇಲೆ ಈಗ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಳೆ.
ಜೆಫ್ರಿ ಎಪ್​ಸ್ಟೀನ್ ಒಬ್ಬ ಅಮೆರಿಕನ್ ಕೋಟ್ಯಧಿಪತಿ ಮತ್ತು ಹೂಡಿಕೆದಾರನಾಗಿದ್ದ. 1953ರಲ್ಲಿ ನ್ಯೂಯಾರ್ಕ್​ನಲ್ಲಿ ಜನಿಸಿದ ಈತ, ಪದವಿ ಶಿಕ್ಷಣ ಪೂರೈಸದಿದ್ದರೂ ಶಿಕ್ಷಕನಾಗಿ ವೃತ್ತಿ ಆರಂಭಿಸಿದ. ನಂತರ ಹಣಕಾಸು ವಲಯಕ್ಕೆ ಪ್ರವೇಶಿಸಿ ‘ಬಿಯರ್ ಸ್ಟರ್ನ್ಸ್’ ಎಂಬ ಪ್ರಸಿದ್ಧ ಬ್ಯಾಂಕ್​ನಲ್ಲಿ ಕೆಲಸ ಮಾಡಿದ. ನಂತರ ತನ್ನದೇ ಆದ ಹೂಡಿಕೆ ಸಂಸ್ಥೆಯನ್ನು ಆರಂಭಿಸಿ ಅತಿದೊಡ್ಡ ಶ್ರೀಮಂತರ ಹಣವನ್ನು ನಿರ್ವಹಿಸುತ್ತಿದ್ದ.
ಫ್ಲಾರಿಡಾದ ಪಾಮ್ ಬೀಚ್​ನಲ್ಲಿ, ಮೆಕ್ಸಿಕೊ, ನ್ಯೂಯಾರ್ಕ್​ನಲ್ಲಿ ಬಂಗಲೆಗಳನ್ನು ಖರೀದಿಸಿದ. ಅವುಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಶ್ರೀಮಂತರಿಗೆ ಅದ್ದೂರಿ ಪಾರ್ಟಿಗಳನ್ನು ಸಂಘಟಿಸಿ, ಅದರ ಮೂಲಕ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಾಧಿಸಿದ. ದಿನಗಳೆದಂತೆ ಈತನ ಪಾರ್ಟಿಗಳು ಜನಪ್ರಿಯವಾದವು.
ಜೆಫ್ರಿ ಎಪ್​ಸ್ಟೀನ್ ತನ್ನ ಆಪ್ತ ಗೆಳತಿ ಗಿಸ್ಲೇನ್ ಮ್ಯಾಕ್ಸ್​ವೆಲ್ ಜೊತೆಗೂಡಿ ದಶಕಗಳ ಕಾಲ ಅಪ್ರಾಪ್ತ ಬಾಲಕಿಯರ ಲೈಂಗಿಕ ಸಾಗಾಣಿಕೆ (ಖಛ್ಡಿ ಖ್ಟಚ್ಛ್ಛ್ಚಜ್ಞಿಜ) ಜಾಲವನ್ನು ನಡೆಸುತ್ತಿದ್ದ. 2008ರಲ್ಲಿ ಅವನ ವಿರುದ್ಧದ ಆರೋಪಗಳು ಸಾಬೀತಾದರೂ, ತನ್ನ ಪ್ರಭಾವ ಬಳಸಿ ಜೈಲು ಶಿಕ್ಷೆಯಿಂದ ಪಾರಾದ. ಆದರೆ, 2019ರಲ್ಲಿ ಬಂಧಿತನಾಗಿ ವಿಚಾರಣೆ ನಡೆಯುತ್ತಿರುವಾಗಲೇ ನ್ಯೂಯಾರ್ಕ್​ನ ಜೈಲಿನಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ (ಇದು ಇಂದಿಗೂ ಹಲವು ಅನುಮಾನಗಳಿಗೆ ದಾರಿಯಾಗಿದೆ). ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಮಾಡಲಾಯಿತು ಎಂದೂ ಹೇಳಲಾಗುತ್ತಿದೆಯಾದರೂ, ಅದರ ಬಗ್ಗೆ ಸ್ಪಷ್ಟತೆ ಇಲ್ಲ.
ಇತ್ತೀಚೆಗೆ ಬಿಡುಗಡೆಯಾದ ‘ಎಪ್​ಸ್ಟೀನ್ ಫೈಲ್ಸ್’ ಎಂಬುದು ಈ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳಾಗಿವೆ. ಅಮೆರಿಕದ ನ್ಯಾಯಾಂಗ ಇಲಾಖೆ ಜನವರಿ 30ರಂದು ಬಿಡುಗಡೆ ಮಾಡಿರುವ 30 ಲಕ್ಷ ಪುಟಗಳ ದಾಖಲೆಗಳು, 1.8 ಲಕ್ಷ ಚಿತ್ರಗಳು ಮತ್ತು ಎರಡು ಸಾವಿರ ವಿಡಿಯೋಗಳು ಎಪಸ್ಟೀನ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಜಗತ್ತಿನ ಹಲವು ದೇಶಗಳ, ಹಲವು ಕ್ಷೇತ್ರಗಳ ನೂರಾರು ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಒಳಗೊಂಡಿವೆ. ನ್ಯಾಯಾಲಯದ ದಾಖಲೆಗಳಲ್ಲಿ ನೇರವಾಗಿ ಅಪರಾಧಿಗಳು ಎಂದು ಹೆಸರಿಸದಿದ್ದರೂ, ಎಪ್​ಸ್ಟೀನ್ ದ್ವೀಪಗಳಲ್ಲಿ ಅಥವಾ ಆತನ ವಿಮಾನ ‘ಲೊಲಿಟಾ ಎಕ್ಸ್​ಪ್ರೆಸ್’ನಲ್ಲಿ ಪ್ರಯಾಣಿಸಿದವರ ಹೆಸರುಗಳು ಹೊರಬಂದಿವೆ.
ಅಮೆರಿಕದ ಹಾಲಿ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಕೂಡ ದಾಖಲೆಗಳಲ್ಲಿದೆ. ‘ನನಗೆ ಎಪ್​ಸ್ಟೀನ್ 15 ವರ್ಷಗಳಿಂದ ಗೊತ್ತು. ಭಯಂಕರ ಆಸಾಮಿ. ಆತನ ಜತೆಗಿರುವುದು ಖುಷಿ ನೀಡುತ್ತದೆ. ನನ್ನಂತೆಯೇ ಆತನೂ ಸುಂದರ ಯುವತಿಯರನ್ನು ಇಷ್ಟಪಡುತ್ತಾನೆ’ ಎಂದು ಡೊನಾಲ್ಡ್ ಟ್ರಂಪ್ 2002ರಲ್ಲಿ ಹೇಳಿದ್ದರು.
ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಎಪ್​ಸ್ಟೀನ್ ಜೊತೆ ಹಲವು ಬಾರಿ ವಿಮಾನದಲ್ಲಿ ಪ್ರಯಾಣಿಸಿರುವುದು ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಆದರೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಬಿಲ್ ಕ್ಲಿಂಟನ್ ಹೇಳಿಕೊಂಡಿದ್ದಾರೆ.
ಬ್ರಿಟನ್ ರಾಜಮನೆತನದ ಪ್ರಿನ್ಸ್ ಆಂಡ್ರೂ್ಯ ಎಪ್​ಸ್ಟೀನ್ ದ್ವೀಪಕ್ಕೆ ಭೇಟಿ ನೀಡಿದ್ದರು ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸಿದ್ದರು. ಈ ಕಾರಣಕ್ಕಾಗಿಯೇ ಅವರು ತಮ್ಮ ರಾಜಮನೆತನದ ಅಧಿಕೃತ ಜವಾಬ್ದಾರಿಗಳಿಂದ ಹಿಂದೆ ಸರಿಯಬೇಕಾಯಿತು.
ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಕೂಡ ಎಪ್​ಸ್ಟೀನ್ ದ್ವೀಪಕ್ಕೆ ಭೇಟಿ ನೀಡಿದ್ದರು ಎಂಬುದು ಅಚ್ಚರಿಯ ವಿಷಯವಾಗಿ ಹೊರಬಂದಿದೆ.
ಇತರ ಗಣ್ಯರು: ಮೈಕ್ರೋಸಾಫ್ಟ್​ನ ಬಿಲ್ ಗೇಟ್ಸ್ ಹಾಗೂ ಹಲವು ಹಾಲಿವುಡ್ ನಟರ ಹೆಸರುಗಳು ವಿಮಾನದ ದಾಖಲೆಗಳಲ್ಲಿ ಕಂಡುಬಂದಿವೆ.
ಸೃಷ್ಟಿಸಿರುವ ತಲ್ಲಣ ಮತ್ತು ಪರಿಣಾಮಗಳು ವಿಶ್ವಾಸಾರ್ಹತೆಯ ಪ್ರಶ್ನೆ: ಜಗತ್ತಿನ ದೊಡ್ಡ ನಾಯಕರು ಮತ್ತು ಉದ್ಯಮಿಗಳು ಇಂತಹ ಹೀನಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯೊಂದಿಗೆ ಸ್ನೇಹ ಹೊಂದಿದ್ದು, ಅವರ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಕಾನೂನು ಸಂಕಷ್ಟ: ಈ ದಾಖಲೆಗಳ ಬಿಡುಗಡೆಯ ನಂತರ, ಪಟ್ಟಿಯಲ್ಲಿರುವ ವ್ಯಕ್ತಿಗಳ ವಿರುದ್ಧ ಹೊಸದಾಗಿ ತನಿಖೆ ನಡೆಸುವಂತೆ ಒತ್ತಡ ಹೆಚ್ಚಾಗಿದೆ.
ವರ್ಚಸ್ಸಿಗೆ ಧಕ್ಕೆ: ಈ ಹಗರಣದಿಂದಾಗಿ ಅನೇಕ ಕಂಪನಿಗಳ ಷೇರು ಮೌಲ್ಯ ಕುಸಿಯಿತು ಮತ್ತು ಹಲವು ಗಣ್ಯರು ತಮ್ಮ ಸಾಮಾಜಿಕ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ.
ನ್ಯಾಯದ ಭರವಸೆ: ಸಂತ್ರಸ್ತರಿಗೆ ದಶಕಗಳ ನಂತರ ನ್ಯಾಯ ಸಿಗುವ ಭರವಸೆ ಮೂಡಿದೆ ಮತ್ತು ಪ್ರಭಾವಿಗಳು ಎಷ್ಟೇ ದೊಡ್ಡವರಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ ರವಾನೆಯಾಗಿದೆ.

ಹಿನ್ನೆಲೆ ಮತ್ತು ಪ್ರಭಾವ

ಎಪ್​ಸ್ಟೀನ್ ಅಮೆರಿಕದ ಮಾಜಿ ಅಧ್ಯಕ್ಷರು, ಬ್ರಿಟನ್ ರಾಜಮನೆತನದ ವ್ಯಕ್ತಿಗಳು, ಖ್ಯಾತ ವಿಜ್ಞಾನಿಗಳು ಮತ್ತು ಹಾಲಿವುಡ್ ನಟರೊಂದಿಗೆ ನಿಕಟ ಸ್ನೇಹ ಹೊಂದಿದ್ದ.
ಕೆರಿಬಿಯನ್ ಸಮುದ್ರದಲ್ಲಿ ಈತ ‘ಲಿಟಲ್ ಸೇಂಟ್ ಜೇಮ್ಸ’ ಎಂಬ ಖಾಸಗಿ ದ್ವೀಪವನ್ನು ಹೊಂದಿದ್ದ. ಇದನ್ನು ಜನರು ‘ಲೈಂಗಿಕ ದೌರ್ಜನ್ಯದ ದ್ವೀಪ’ ಅಥವಾ ‘ಪಾಪದ ದ್ವೀಪ’ ಎಂದು ಕರೆಯುತ್ತಿದ್ದರು. ಅಲ್ಲಿ ಈತ ಹೈ-ಪೊ›ಫೈಲ್ ರಹಸ್ಯ ಪಾರ್ಟಿಗಳನ್ನು ಆಯೋಜಿಸುತ್ತಿದ್ದ.

ಮತ್ತೆ ಮುನ್ನೆಲೆಗೆ ಬಂದಿರುವುದೇಕೆ?

ವರ್ಜೀನಿಯಾ ಗಿಫ್ರೆ ಎಂಬ ಸಂತ್ರಸ್ತೆ ಗಿಸ್ಲೇನ್ ಮ್ಯಾಕ್ಸ್​ವೆಲ್ ವಿರುದ್ಧ ಹೂಡಿದ್ದ ಮೊಕದ್ದಮೆಯ ಭಾಗವಾಗಿ, ಅಮೆರಿಕದ ನ್ಯಾಯಾಲಯವು ಈ ಹಿಂದೆ ರಹಸ್ಯವಾಗಿದ್ದ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಆದೇಶಿಸಿತು. ಈ ದಾಖಲೆಗಳು ಇತ್ತೀಚೆಗೆ ಬಿಡುಗಡೆಯಾದ ಕಾರಣ ಈ ಹಗರಣ ಮತ್ತೆ ಜಾಗತಿಕ ಸುದ್ದಿಯಾಗಿದೆ.
ಇದರಲ್ಲಿ ಈತನ ದ್ವೀಪಕ್ಕೆ ಭೇಟಿ ನೀಡಿದ ಅಥವಾ ಈತನೊಂದಿಗೆ ಸಂಪರ್ಕ ಹೊಂದಿದ್ದ ನೂರಾರು ಗಣ್ಯರ ಹೆಸರುಗಳಿವೆ. ಈ ಪ್ರಕರಣವು ಕೇವಲ ಒಬ್ಬ ವ್ಯಕ್ತಿಯ ಅಪರಾಧವಲ್ಲ, ಬದಲಾಗಿ ಅಧಿಕಾರ ಮತ್ತು ಹಣವನ್ನು ಬಳಸಿ ಹೇಗೆ ವ್ಯವಸ್ಥಿತವಾಗಿ ಶೋಷಣೆ ಮಾಡಬಹುದು ಎಂಬುದಕ್ಕೆ ಕನ್ನಡಿಯಾಗಿದೆ.
ಬ್ರಿಟನ್​ನ ಮಾಜಿ ಪ್ರಿನ್ಸ್ ಆಂಡ್ರ್ಯೂ ಅವರನ್ನು ಫೆಬ್ರವರಿ 19ರಂದು (ಅವರ 66ನೇ ಹುಟ್ಟುಹಬ್ಬದಂದೇ) ಸಾರ್ವಜನಿಕ ಕಚೇರಿಯಲ್ಲಿ ದುಷ್ಕೃತ್ಯದ ಶಂಕೆಯ ಮೇಲೆ ಬಂಧಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಎಪ್​ಸ್ಟೀನ್ ಫೈಲ್​ಗಳಲ್ಲಿರುವ ಇಮೇಲ್​ಗಳು, ಆಂಡ್ರ್ಯೂ ಬ್ರಿಟನ್​ನ ‘ವ್ಯಾಪಾರ ರಾಯಭಾರಿ’ಯಾಗಿ ಕೆಲಸ ಮಾಡುತ್ತಿದ್ದಾಗ (2001-2011), ಜೆಫ್ರಿ ಎಪ್​ಸ್ಟೀನ್ ಜೊತೆಗೆ ಕೆಲವು ಅತಿ ಗೌಪ್ಯ ಸರ್ಕಾರಿ ಮತ್ತು ಹೂಡಿಕೆಯ ವರದಿಗಳನ್ನು ಹಂಚಿಕೊಂಡಿದ್ದರು ಎಂಬುದನ್ನು ಸೂಚಿಸುತ್ತವೆ.
ಈ ಹಿಂದೆ ವರ್ಜೀನಿಯಾ ಗಿಫ್ರೆ ಎಂಬ ಮಹಿಳೆ, ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಎಪ್​ಸ್ಟೀನ್ ತನ್ನನ್ನು ಆಂಡ್ರೂ್ಯ ಅವರೊಂದಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಗಿ ಆರೋಪಿಸಿದ್ದರು. 2022ರಲ್ಲಿ ಆಂಡ್ರ್ಯೂ ನ್ಯಾಯಾಲಯದ ಹೊರಗೆ ದೊಡ್ಡ ಮೊತ್ತದ ಹಣ ನೀಡಿ ಈ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದರು. ಆಂಡ್ರ್ಯೂ ಅವರ ಈ ವಿವಾದಗಳು ಬ್ರಿಟನ್ ರಾಜಮನೆತನದ ವರ್ಚಸ್ಸಿಗೆ ಧಕ್ಕೆ ತಂದಿದೆ.
ಆಂಡ್ರ್ಯೂ ಅವರಿಗಿದ್ದ ‘ಪ್ರಿನ್ಸ್’ ಮತ್ತು ‘ಹಿಸ್ ರಾಯಲ್ ಹೈನೆಸ್’ ಎಂಬ ಬಿರುದುಗಳನ್ನು ಕಿಂಗ್ ಚಾರ್ಲ್ಸ್ ಐಐಐ 2025ರ ಅಕ್ಟೋಬರ್​ನಲ್ಲಿ ಕಿತ್ತುಕೊಂಡಿದ್ದಾರೆ. ಈಗ ಅವರನ್ನು ಕೇವಲ ಆಂಡ್ರ್ಯೂ ಮೌಂಟ್​ಬ್ಯಾಟನ್-ವಿಂಡ್ಸರ್ ಎಂದು ಕರೆಯಲಾಗುತ್ತದೆ. ಮೊದಲ ಬಂಧನ: ಸುಮಾರು 400 ವರ್ಷಗಳ ಇತಿಹಾಸದಲ್ಲಿ ಬಂಧನಕ್ಕೊಳಗಾದ ರಾಜಮನೆತನದ ಮೊದಲ ಹಿರಿಯ ವ್ಯಕ್ತಿ ಇವರಾಗಿದ್ದಾರೆ (ಕೊನೆಯದಾಗಿ ಕಿಂಗ್ ಚಾಲ್ಸ್ ಐ ಬಂಧನಕ್ಕೊಳಗಾಗಿದ್ದರು).
ಇದು ಅಂತಾರಾಷ್ಟ್ರೀಯ ವ್ಯಾಪಾರ ಕೇವಲ ರಾಜಕೀಯ ಹಠಕ್ಕೆ ಬಲಿಯಾಗದೆ, ನಿಯಮಬದ್ಧ ಚೌಕಟ್ಟಿನಲ್ಲಿ ನಡೆಯಬೇಕು ಎಂಬ ಸಂದೇಶವನ್ನು ರವಾನಿಸಿದೆ. ಅಮೆರಿಕದ ಈ ನ್ಯಾಯಾಂಗ ತೀರ್ಪು ಜಾಗತಿಕ ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಮುಕ್ತ ವ್ಯಾಪಾರವನ್ನು ಉತ್ತೇಜಿಸಲು ಪೂರಕವಾಗಿದೆ. ಟ್ರಂಪ್ ಅವರು ಇದನ್ನು ‘ಆರ್ಥಿಕ ಪೆಟ್ಟು’ ಎಂದು ಕರೆದಿದ್ದರೂ, ಜಗತ್ತಿನ ಇತರ ದೇಶಗಳಿಗೆ ಇದು ‘ಆರ್ಥಿಕ ಚೇತರಿಕೆ’ಯ ಸಂಕೇತವಾಗಿದೆ. ಭಾರತ ಮತ್ತು ಅಮೆರಿಕ ನಡುವೆ ಮುಂದಿನ ದಿನಗಳಲ್ಲಿ ಏರ್ಪಡುವ ವ್ಯಾಪಾರ ಒಪ್ಪಂದಗಳ ಮೇಲೆ ಈ ತೀರ್ಪು ಸಕಾರಾತ್ಮಕ ಪ್ರಭಾವ ಬೀರಲಿದ್ದು, ಭಾರತದ ರಫ್ತು ವಹಿವಾಟಿಗೆ ಹೊಸ ಚೈತನ್ಯ ನೀಡಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net