EPFO ಸೇವೆ ಇನ್ನೂ ಬಂದ್? ಅಪ್‌ಗ್ರೇಡ್ ಬಳಿಕವೂ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ!

EPFO
EPFO
Published on
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಡೇಟಾಬೇಸ್ ಕ್ರೋಢೀಕರಣ ಹಾಗೂ ಸಾಫ್ಟ್‌ವೇರ್ ಅಪ್‌ಗ್ರೇಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಆನ್‌ಲೈನ್ ಸೇವೆಗಳು ಜುಲೈ 2ರಿಂದ ಪುನರಾರಂಭವಾಗಬೇಕಿದ್ದರೂ, ಗುರುವಾರ ಬೆಳಗ್ಗೆಯೂ ಪೋರ್ಟಲ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಿಲ್ಲ. ಇದರಿಂದ ಹಲವಾರು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ದಾಖಲಿಸಿದ್ದಾರೆ.
ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಇನ್ನೂ "ಸಿಸ್ಟಮ್ ಮೈಗ್ರೇಷನ್ ಮತ್ತು ತಾತ್ಕಾಲಿಕ ಸೇವೆ ಲಭ್ಯತೆ" ಕುರಿತು ಸಂದೇಶವೇ ಕಾಣಿಸುತ್ತಿದೆ. ಇದರಿಂದ ಕ್ಲೇಮ್ ಸಲ್ಲಿಕೆ ಸೇರಿದಂತೆ ವಿವಿಧ ಆನ್‌ಲೈನ್ ಸೇವೆಗಳನ್ನು ಬಳಸಲು ಸದಸ್ಯರಿಗೆ ತೊಂದರೆಯಾಗಿದೆ.

ಏಕೆ ಸೇವೆ ಸ್ಥಗಿತಗೊಳಿಸಲಾಗಿತ್ತು?

ಇಪಿಎಫ್‌ಒ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಕ್ಲೇಮ್ ಪ್ರಕ್ರಿಯೆಯನ್ನು ವೇಗಗೊಳಿಸುವುದು, ಸೇವೆಯ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವುದು ಹಾಗೂ ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಡೇಟಾಬೇಸ್ ಕ್ರೋಢೀಕರಣ ಮತ್ತು ಸಾಫ್ಟ್‌ವೇರ್ ಅಪ್‌ಗ್ರೇಡ್ ಕಾರ್ಯ ಕೈಗೊಳ್ಳಲಾಗಿದೆ. ಈ ನವೀಕರಣದ ಭಾಗವಾಗಿ ಕ್ಲೇಮ್ ಪ್ರಕ್ರಿಯೆಗೆ ಬಳಸುವ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನೂ ನವೀಕರಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಜೂನ್ 26ರಿಂದ ಸೇವೆ ಬಂದ್

ಇಪಿಎಫ್‌ಒ ಪ್ರಕಟಣೆ ಪ್ರಕಾರ, ಜೂನ್ 26ರ ಮಧ್ಯರಾತ್ರಿಯಿಂದ ಆನ್‌ಲೈನ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಜುಲೈ 1ರ ರಾತ್ರಿ 11.59ರವರೆಗೆ ಈ ಕೆಲಸ ಪೂರ್ಣಗೊಳ್ಳಲಿದ್ದು, ಜುಲೈ 2ರ ಮಧ್ಯರಾತ್ರಿಯಿಂದ ಸೇವೆ ಪುನರಾರಂಭವಾಗಲಿದೆ ಎಂದು ತಿಳಿಸಲಾಗಿತ್ತು.
ಆದರೆ, ನಿಗದಿತ ಅವಧಿ ಮುಗಿದ ಬಳಿಕವೂ ವೆಬ್‌ಸೈಟ್ ಸಂಪೂರ್ಣವಾಗಿ ಕಾರ್ಯನಿರ್ವಹಿಸದ ಕಾರಣ ಸದಸ್ಯರಲ್ಲಿ ಗೊಂದಲ ಉಂಟಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದೂರು

ಸೇವೆ ವಿಳಂಬದ ಬಗ್ಗೆ ಹಲವು ಬಳಕೆದಾರರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಿಗದಿತ ಡೌನ್‌ಟೈಮ್ ಈಗಾಗಲೇ ಮುಗಿದಿದೆ. ಆದರೂ ಇಪಿಎಫ್‌ಒ ಪೋರ್ಟಲ್ ಇನ್ನೂ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಸಾವಿರಾರು ಬಳಕೆದಾರರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ವಿಳಂಬಕ್ಕೆ ಕಾರಣವೇನು? ಸೇವೆಗಳು ಯಾವಾಗ ಆರಂಭವಾಗುತ್ತವೆ?" ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ. ಇಪಿಎಫ್‌ಒ ಈ ಕುರಿತು ಇನ್ನೂ ಯಾವುದೇ ಹೊಸ ಅಧಿಕೃತ ಸ್ಪಷ್ಟನೆ ನೀಡಿಲ್ಲ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net