ಜಾನಿ ಜಾನಿ, ರೇನ್​ ಗೋ ಅವೇ ರೈಮ್ಸ್​ ಮಕ್ಕಳಲ್ಲಿ ಸುಳ್ಳು ಮತ್ತು ಸ್ವಾರ್ಥ ಕಲಿಸುತ್ತೆ: ಭಾರಿ ಚರ್ಚೆ ಹುಟ್ಟುಹಾಕಿದ ಸಚಿವರ ಹೇಳಿಕೆ! English Rhymes

ಜಾನಿ ಜಾನಿ, ರೇನ್​ ಗೋ ಅವೇ ರೈಮ್ಸ್​ ಮಕ್ಕಳಲ್ಲಿ ಸುಳ್ಳು ಮತ್ತು ಸ್ವಾರ್ಥವನ್ನು ಕಲಿಸುತ್ತೆ: ಭಾರಿ ಚರ್ಚೆ ಹುಟ್ಟುಹಾಕಿದ ಸಚಿವರ ಹೇಳಿಕೆ! English Rhymes
ಜಾನಿ ಜಾನಿ, ರೇನ್​ ಗೋ ಅವೇ ರೈಮ್ಸ್​ ಮಕ್ಕಳಲ್ಲಿ ಸುಳ್ಳು ಮತ್ತು ಸ್ವಾರ್ಥವನ್ನು ಕಲಿಸುತ್ತೆ: ಭಾರಿ ಚರ್ಚೆ ಹುಟ್ಟುಹಾಕಿದ ಸಚಿವರ ಹೇಳಿಕೆ! English Rhymes
Published on

ಪ್ರಮುಖ ಮುಖ್ಯಾಂಶಗಳು

  • 'ಜಾನಿ ಜಾನಿ' ಮತ್ತು 'ರೇನ್ ರೇನ್' ಪದ್ಯಗಳು ಭಾರತೀಯ ಮೌಲ್ಯಗಳಿಗೆ ವಿರುದ್ಧ ಎಂದ ಸಚಿವ ಯೋಗೇಂದ್ರ ಉಪಾಧ್ಯಾಯ
  • ಮಳೆ ನಿಲ್ಲಲಿ ಎನ್ನುವುದು ಮಕ್ಕಳ ಸ್ವಾರ್ಥದ ಪರಮಾವಧಿ, ಇದು ನಮ್ಮ ಸಂಸ್ಕೃತಿಯಲ್ಲ ಎಂದು ಸಚಿವರ ವಿಶ್ಲೇಷಣೆ
  • 'ಜಾನಿ ಜಾನಿ' ಪದ್ಯವು ಬಾಲ್ಯದಲ್ಲೇ ಮಕ್ಕಳಿಗೆ ಸುಳ್ಳು ಹೇಳುವುದನ್ನು ಕಲಿಸುತ್ತದೆ ಎಂದು ಸಚಿವರ ಆತಂಕ
  • ಮಕ್ಕಳು ಪದ್ಯದಿಂದಲ್ಲ, ವ್ಯವಸ್ಥೆಯ ಭ್ರಷ್ಟಾಚಾರ ಹಾಗೂ ಪೇಪರ್ ಲೀಕ್‌ನಿಂದ ಸುಳ್ಳು ಕಲಿಯುತ್ತಾರೆ ಎಂದು ಕಾಂಗ್ರೆಸ್ ಟೀಕೆ
ಲಖನೌ: ಮಕ್ಕಳ ಜನಪ್ರಿಯ ಇಂಗ್ಲಿಷ್ ಪದ್ಯಗಳಾದ ( English Rhymes ) ‘ಜಾನಿ ಜಾನಿ ಯೆಸ್ ಪಪ್ಪಾ’ ಮತ್ತು ‘ರೇನ್ ರೇನ್ ಗೋ ಅವೇ’ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ಹೊಸ ವಿವಾದ ಸೃಷ್ಟಿಸಿದ್ದಾರೆ. ಈ ಪದ್ಯಗಳು ಮಕ್ಕಳಿಗೆ ಸುಳ್ಳು ಹೇಳುವುದನ್ನು ಕಲಿಸುತ್ತವೆ ಮತ್ತು ಸ್ವಾರ್ಥವನ್ನು ಉತ್ತೇಜಿಸುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದು, ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ಶನಿವಾರ (ಮೇ 09) ರಾಜಧಾನಿ ಲಖನೌದ ಪ್ರಮುಖ ಶಾಲೆಯೊಂದರಲ್ಲಿ ನಡೆದ ಧನ್ಯವಾದ ಸಮರ್ಪಣೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಉಪಾಧ್ಯಾಯ, 'ರೈನ್ ರೈನ್ ಗೋ ಅವೇ' ಎಂಬ ರೈಮ್ಸ್, ಮಕ್ಕಳ​ ಸಾಮೂಹಿಕ ಕಲ್ಯಾಣದ ಬದಲು ಅವರ ವೈಯಕ್ತಿಕ ಆನಂದವನ್ನು ಮಾತ್ರ ಉತ್ತೇಜಿಸುತ್ತದೆ ಎಂದು ಹೇಳಿದರು.
‘ರೇನ್ ರೇನ್ ಗೋ ಅವೇ’ ಎಂಬ ಇಂಗ್ಲಿಷ್​ ಪದ್ಯವು ಮಕ್ಕಳಲ್ಲಿ ಸ್ವಾರ್ಥವನ್ನು ಪ್ರಚೋದಿಸುತ್ತದೆ. ಕೇವಲ ಪುಟ್ಟ ಮಕ್ಕಳು ಆಟವಾಡಬೇಕು ಎಂಬ ಕಾರಣಕ್ಕಾಗಿ ಮಳೆ ನಿಲ್ಲಲಿ ಎಂದು ಹೇಳುವುದು ನಮ್ಮ ಸಂಸ್ಕೃತಿಯಲ್ಲ, ಯಾವುದೇ ಕೆಲಸವು ನಿಸ್ವಾರ್ಥತೆಯಿಂದ ಕೂಡಿದ್ದಾಗ ಮಾತ್ರ ನಿಜವಾದ ಸಂತೋಷ ಸಿಗುತ್ತದೆ. ಆದರೆ ಈ ಪದ್ಯವು ಕೇವಲ ವೈಯಕ್ತಿಕ ಸಂತೋಷ ಎಂಬ ತತ್ವವನ್ನು ಸಾರುತ್ತಿದ್ದು, ಇದು ಭಾರತೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಉಪಾಧ್ಯಾಯ ಅವರು ವಿಶ್ಲೇಷಿಸಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯು 'ಸರ್ವಜನ ಹಿತಯ್, ಸರ್ವಜನ ಸುಖಯ್' (ಎಲ್ಲರ ಕಲ್ಯಾಣ, ಎಲ್ಲರ ಸಂತೋಷಕ್ಕಾಗಿ) ಎಂಬುದನ್ನು ಒತ್ತಿ ಹೇಳುತ್ತದೆ ಎಂದು ಉಪಾಧ್ಯಾಯ ಅವರು ಇದೇ ಸಮಯದಲ್ಲಿ ಹೇಳಿದರು. 
ಇದಕ್ಕೂ ಮುನ್ನ ಅಂದರೆ, ಮೇ 6 ರಂದು ಉಪಾಧ್ಯಾಯ ಅವರು ಮತ್ತೊಂದು ಇಂಗ್ಲಿಷ್ ರೈಮ್ಸ್​ 'ಜಾನಿ, ಜಾನಿ ಯೆಸ್ ಪಾಪಾ' ಅನ್ನು ಟೀಕಿಸಿ, ಇದು ಮಕ್ಕಳಿಗೆ ತಮ್ಮ ಹೆತ್ತವರಿಗೆ ಸುಳ್ಳು ಹೇಳಲು ಕಲಿಸುತ್ತದೆ ಎಂದು ಹೇಳಿದ್ದರು.
ಮಕ್ಕಳಿಗೆ ಪದ್ಯಗಳನ್ನು ಹೇಳಿಕೊಡುವಾಗ ಅವುಗಳು ನೀಡುವ ಸಂದೇಶದ ಬಗ್ಗೆ ಪೋಷಕರು ಗಮನಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವ ಉಪಾಧ್ಯಾಯರು, 'ಜಾನಿ ಜಾನಿ ಯೆಸ್ ಪಪ್ಪಾ' ಅಂತಹ ಪದ್ಯಗಳು ಬಾಲ್ಯದಲ್ಲೇ ಸುಳ್ಳು ಹೇಳುವ ಬೀಜಗಳನ್ನು ಬಿತ್ತುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಾನು ಯಾವುದೇ ನಿರ್ದಿಷ್ಟ ಭಾಷೆ ಅಥವಾ ಸಂಸ್ಕೃತಿಯ ವಿರೋಧಿಯಲ್ಲ, ಒಂದು ವೇಳೆ ಇಂತಹ ಸಂದೇಶಗಳು ಹಿಂದಿ ಅಥವಾ ಸಂಸ್ಕೃತದಲ್ಲಿ ಇದ್ದರೂ ತಾನು ಇದೇ ಮಾತನ್ನು ಹೇಳುತ್ತಿದ್ದೆ ಎಂದು ಉಪಾಧ್ಯಾಯ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಚಿವರ ಈ ವಿವಾದಾತ್ಮಕ ಹೇಳಿಕೆಗೆ ವಿಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಯುಪಿ ಕಾಂಗ್ರೆಸ್, ಸಾಮಾಜಿಕ ಜಾಲತಾಣದಲ್ಲಿ ಸಚಿವರನ್ನು ಲೇವಡಿ ಮಾಡಿದ್ದು, "ಮಕ್ಕಳು ಪದ್ಯಗಳಿಂದ ಸುಳ್ಳು ಕಲಿಯುವುದಿಲ್ಲ, ಬದಲಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವ್ಯವಸ್ಥೆಯ ವೈಫಲ್ಯಗಳನ್ನು ಕಂಡು ಅಪನಂಬಿಕೆ ಬೆಳೆಸಿಕೊಳ್ಳುತ್ತಾರೆ. ಇಲ್ಲಿ ಸಚಿವರ ಕೆಲಸ ಪದ್ಯಗಳನ್ನು ಬದಲಿಸುವುದಲ್ಲ, ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ತಡೆಯುವುದು ಎಂದು ಕಾಂಗ್ರೆಸ್​ ಕುಟುಕಿದೆ. 
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಈ ಬಗ್ಗೆ ವ್ಯಂಗ್ಯವಾಡಿದ್ದು, "ಬಿಜೆಪಿಯೇ ಸುಳ್ಳಿನ ವಿಶ್ವವಿದ್ಯಾಲಯವಾಗಿರುವಾಗ ಬೇರೆ ಪಠ್ಯಗಳ ಅವಶ್ಯಕತೆ ಅವರಿಗಿಲ್ಲ" ಎಂದು ಟೀಕಿಸಿದ್ದಾರೆ. ಸದ್ಯ ಉಪಾಧ್ಯಾಯ ಅವರು ಆಡಿದ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net