ಇವತ್ತೇ ನಿಮ್ಮ ಕೊನೆ... ಹಬ್ಬದ ಖುಷಿಯಲ್ಲಿದ್ದ ಉದ್ಯೋಗಿಗಳಿಗೆ ಬೆಳಗ್ಗೆ 6 ಗಂಟೆಗೆ ಒರಾಕಲ್ ಬಿಗ್ ಶಾಕ್​ | ​Oracle

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ಪ್ರಮುಖ ಮುಖ್ಯಾಂಶಗಳು

  • ಹಬ್ಬದ ಖುಷಿಯಲ್ಲಿದ್ದ ಉದ್ಯೋಗಿಗಳಿಗೆ ಬಿಗ್ ಶಾಕ್​ ಕೊಟ್ಟ ಒರಾಕಲ್​
  • ಬೆಳಗ್ಗೆ 6 ಗಂಟೆಗೆ ಇಮೇಲ್​ ಮೂಲಕ ಕೆಲಸದಿಂದ ವಜಾಗೊಳಿಸಿದ ಟೆಕ್​ ಸಂಸ್ಥೆ
  • ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್​ನಲ್ಲಿ ಕಂಪನಿ ಹೇಳಿರುವ ವಿಷಯಗಳು ಹೀಗಿವೆ
Oracle Layoffs: ಟೆಕ್​ ದೈತ್ಯ ಕಂಪನಿಗಳಾದ ಟಿಸಿಎಸ್​, ಅಮೆಜಾನ್​, ಮೈಕ್ರೋಸಾಫ್ಟ್​, ಇನ್ಫೋಸಿಸ್ ಹಲವು ತಿಂಗಳುಗಳ ಹಿಂದಷ್ಟೇ​ ತನ್ನ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿದ ವಿಷಯ ಬಹುತೇಕರಿಗೆ ಗೊತ್ತೇ ಇದೆ. ಕೃತಕ ಬುದ್ಧಿಮತ್ತೇ (ಎಐ) ಎಂಬ ಆಧುನಿಕ ಟೆಕ್ನಾಲಜಿ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿ, ಉದ್ಯೋಗಿಗಳಿಗೆ ಗುಡ್​ಬೈ ಹೇಳುತ್ತಿರುವ ಸಾಲಿನಲ್ಲಿ ಒರಾಕಲ್ ಉಳಿದ ಸಂಸ್ಥೆಗಳಿಗಿಂತ ಒಂದಲ್ಲ, ಎರಡು ಹೆಜ್ಜೆ ಮುಂದೋಗಿದೆ.  
ಬಿಜಿನೆಸ್​ ಇನ್​ಸೈಡರ್​ ವರದಿ ಪ್ರಕಾರ, ಈ ಮುಂಚೆಯೇ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿರುವ ಸಂಸ್ಥೆಯ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದ ಒರಾಕಲ್​, ಯಾವಾಗ ಬೇಕಾದರೂ ವಜಾ ಪ್ರಕ್ರಿಯೆ ನಡೆಯಬಹುದು ಎಂದಿತ್ತು. ಅಂತೆಯೇ, ಸೆ.14ರಂದು ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ನೌಕರರಿಗೆ ಬೆಳಗ್ಗೆ 6 ಗಂಟೆಗೆ ಇಮೇಲ್ ಕಳುಹಿಸುವ ಮೂಲಕ ಕೆಲಸದಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಕಿತ್ತುಬಿಸಾಡಲಾಗಿದೆ. ಇದು ನಿಜಕ್ಕೂ ಶಾಕಿಂಗ್ ಬೆಳವಣಿಗೆ ಎಂದೇ ಹೇಳಬಹುದು. 
ಅನಿರ್ದಿಷ್ಟ ಸಂಖ್ಯೆಯ ಒರಾಕಲ್ ಉದ್ಯೋಗಿಗಳಿಗೆ ಕಳುಹಿಸಲಾದ ಲೇಆಫ್​ ಇಮೇಲ್​ ಸಂದೇಶದಲ್ಲಿ, "ನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಕಠಿಣ ಪರಿಸ್ಥಿತಿಯ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಪ್ರಸ್ತುತ ಒರಾಕಲ್​  ವ್ಯಾಪಾರ ಅಗತ್ಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ಬಳಿಕ ವಿಶಾಲವಾದ ಸಾಂಸ್ಥಿಕ ಬದಲಾವಣೆಯ ಭಾಗವಾಗಿ ನಿಮ್ಮ ರೋಲ್​ ಅನ್ನು ತೆಗೆದುಹಾಕುವ ನಿರ್ಧಾರವನ್ನು ಕೈಗೊಂಡಿದೆ. ಪರಿಣಾಮವಾಗಿ,ಇವತ್ತೇ ನಿಮ್ಮ ಕೊನೆಯ ಕೆಲಸದ ದಿನವಾಗಿರಲಿದೆ" ಎಂದು ತಿಳಿಸಿದೆ.
ಹಬ್ಬ, ವೀಕಾಫ್​ ಸೇರಿದಂತೆ ಇತರೆ ರಜೆಗಳಿಂದ ಕೆಲಸಕ್ಕೆ ವಾಪಾಸ್​ ಆಗಲು ಎದುರುನೋಡುತ್ತಿದ್ದ ಉದ್ಯೋಗಿಗಳಿಗೆ ಇದೀಗ ಸಂಸ್ಥೆಯ ಲೇಆಫ್​ ಇಮೇಲ್​ ನೋಡಿ ಹಠಾತ್​ ಶಾಕ್​ ಆಗಿದೆ. ಮುಖ್ಯವಾಗಿ, ಇಮೇಲ್​ ಸಂದೇಶದಲ್ಲಿ, ಯಾವ ಕಾರಣಕ್ಕೆ ವಜಾ ಮಾಡಿದ್ದೇವೆ ಎಂಬುದರ ಬಗ್ಗೆ ನಿರ್ದಿಷ್ಟ ವೈಯಕ್ತಿಕ ಕಾರಣವನ್ನು ಉಲ್ಲೇಖಿಸಿಲ್ಲ. ಬದಲಿಗೆ ಒರಾಕಲ್‌ನ ಪ್ರಸ್ತುತ ವ್ಯವಹಾರದ ಅಗತ್ಯಗಳನ್ನು ಮುಂದಿಟ್ಟು ಪರೋಕ್ಷವಾಗಿ ನಮಗೆ ಎಐಗಿಂತ ಮುಖ್ಯ ನೀವಲ್ಲ ಎಂಬುದನ್ನು ಹೇಳಿರುವುದಂತು ಸ್ಪಷ್ಟ.
ಇನ್ನು, ಕೆಲಸ ಕಳೆದುಕೊಂಡಿರುವ ಉದ್ಯೋಗಿಗಳು ಒರಾಕಲ್‌ನ ಸೆವರನ್ಸ್ ಯೋಜನೆಯ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಪರಿಹಾರ ಪ್ಯಾಕೇಜ್‌ಗೆ ಅರ್ಹರಾಗಿರುತ್ತಾರೆ ಎಂದು ಇಮೇಲ್​ನಲ್ಲಿ ತಿಳಿಸಲಾಗಿದೆ. ಅಲ್ಲದೆ, ಉದ್ಯೋಗಿಗಳು ತಮ್ಮ ಒರಾಕಲ್ ಇಮೇಲ್ ವಿಳಾಸದಲ್ಲಿ 'DocuSign' ನಿಂದ ಪ್ರತ್ಯೇಕ ಇಮೇಲ್ ಅನ್ನು ಸ್ವೀಕರಿಸಲಿದ್ದು, ಅದರಲ್ಲಿ ಅವರಿಗೆ ಪರಿಹಾರಧನ ಹಾಗೂ ಕೆಲಸದಿಂದ ರಿಲೀವ್​ ಆಗುವ ದಿನಾಂಕ ಸೇರಿದಂತೆ ಉಳಿದ ವಿವರಗಳನ್ನು ಉಲ್ಲೇಖ ಮಾಡಿರುವುದಾಗಿ ಹೇಳಿದೆ,(ಏಜೆನ್ಸೀಸ್).