ಚುನಾವಣೆ ಮುಗಿಯುತ್ತಿದೆ ಎಚ್ಚರವಾಗಿರಿ; ಏ. 29ರ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಬಹುದು: ರಾಹುಲ್ ಗಾಂಧಿ | Rahul Gandhi
ರಾಹುಲ್ ಗಾಂಧಿ
Published on:
Copied
Follow Us
ನವದೆಹಲಿ: ಚುನಾವಣೆಗಳು ಮುಗಿಯುತ್ತಿವೆ, ಏ. 29ರ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಸೇರಿ ಎಲ್ಲವೂ ದುಬಾರಿಯಾಗಲಿವೆ ಎಂದು ಎಚ್ಚರಿಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆಯ ಹೊರೆಯನ್ನು ಕೇಂದ್ರ ಸರ್ಕಾರ ಗ್ರಾಹಕರಿಗೆ ವರ್ಗಾಯಿಸುತ್ತದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣೆಗಳು ಮುಗಿದಿವೆ, ಹಣದುಬ್ಬರದ ಬಿಸಿ ಸಮೀಪಿಸುತ್ತಿದೆ! ಎಚ್ಚರದಿಂದಿರಿ. ಏಪ್ರಿಲ್ 29ರ ನಂತರ ಪೆಟ್ರೋಲ್, ಡೀಸೆಲ್ ಸೇರಿ ಎಲ್ಲವೂ ದುಬಾರಿಯಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.
ಕಚ್ಚಾ ತೈಲ ಬೆಲೆ ಕಡಿಮೆಯಾದಾಗ ಮೋದಿ ಸರ್ಕಾರ ಲಾಭವನ್ನು ಜೇಬಿಗೆ ಹಾಕಿಕೊಂಡಿತು. ಈಗ ದುಬಾರಿಯಾಗಿರುವುದರಿಂದ, ನಿಮ್ಮ ಮೇಲೆ ಹೊರೆ ಹಾಕುತ್ತದೆ. ಅಗ್ಗವಾಗಿದ್ದಾಗ ಲೂಟಿ ಮಾಡುವ ಸರ್ಕಾರ, ಹಣದುಬ್ಬರದ ಹೊರೆಯನ್ನು ಸಾರ್ವಜನಿಕರು ಹೊರುವಂತೆ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಏ. 29ರಂದು ಪಶ್ಚಿಮ ಬಂಗಾಳದ ಎರಡನೇ ಹಂತದ ಚುನಾವಣೆ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಮತ್ತು ಈಗಾಗಲೇ ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ವಿಧಾನಸಭಾ ಚುನಾವಣೆಗಳು ಮುಗಿದಿದ್ದು, ಮೇ 4ರಂದು ಒಟ್ಟಿಗೆ ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗಲಿವೆ.
ಏತನ್ಮಧ್ಯೆ, ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದ ಬಳಿಕ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಈ ಹಿನ್ನೆಲೆ ಚುನಾವಣೆ ಮುಗಿದ ನಂತರ ಬೆಲೆ ಏರಿಕೆಯಾಗುವ ಊಹಾಪೋಹಗಳನ್ನು ಎದ್ದಿವೆ.
ಬೆಲೆ ಏರಿಕೆ ನಿರಾಕರಿಸಿದ ಕೇಂದ್ರ ಸರ್ಕಾರ
ಏ. 29 ಬಳಿಕದ ಬೆಲೆ ಏರಿಕೆಯ ಊಹಾಪೋಹಗಳನ್ನು ನಿರಾಕರಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳ ಪರಿಣಾಮಗಳ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).