ಚುನಾವಣೆ ಆಯೋಗ ಮೋದಿಯದ್ದಲ್ಲ, ದೇಶದ್ದು ಎಂಬುದನ್ನು ಆಯೋಗ ಮರೆಯಬಾರದು; ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ
  • ಬಿಜೆಪಿ, ಆರ್​ಎಸ್ಎಸ್​ ಹಾಗೂ ಚುನಾವಣೆ ಆಯೋಗದ ವಿರುದ್ಧ ರಾಹುಲ್ ಕಿಡಿ
ನವದೆಹಲಿ: ಭಾರತೀಯ ಚುನಾವಣೆ ಆಯೋಗ ಸ್ವತಂತ್ರ ಸಂಸ್ಥೆ ಮತ್ತು ದೇಶಕ್ಕೆ ಸೇರಿದ್ದು, ಪ್ರಧಾನಿ ಮೋದಿಗೆ ಸೇರಿದ್ದಲ್ಲ ಎಂಬುದನ್ನು ಚುನಾವಣೆ ಆಯೋಗ ಮರೆಯಬಾರದು ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಭಾನುವಾರ(ಡಿ. 14) ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪಕ್ಷದ 'ವೋಟ್ ಚೋರ್, ಗಡ್ಡಿ ಚೋರ್' ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಕೇಳಿ, ಜಗತ್ತು ಸತ್ಯವನ್ನು ನೋಡುವುದಿಲ್ಲ, ಅದು ಶಕ್ತಿಯನ್ನು ನೋಡುತ್ತದೆ. ಯಾರಿಗೆ ಅಧಿಕಾರವಿದೆಯೋ ಅವರನ್ನು ಗೌರವಿಸಲಾಗುತ್ತದೆ ಎಂದು ಹೇಳುತ್ತಾರೆ. ಇದು ಮೋಹನ್ ಭಾಗವತ್ ಅವರ ಚಿಂತನೆ. ಇದು ಆರ್​​ಎಸ್ಎಸ್​ ಸಿದ್ದಾಂತ, ನಮ್ಮ ಸಿದ್ಧಾಂತ, ಭಾರತದ ಸಿದ್ಧಾಂತ, ಹಿಂದೂ ಧರ್ಮದ ಸಿದ್ಧಾಂತ, ಜಗತ್ತಿನ ಪ್ರತಿಯೊಂದು ಧರ್ಮದ ಸಿದ್ಧಾಂತವು ಸತ್ಯವು ಅತ್ಯಂತ ಮುಖ್ಯವಾದ ವಿಷಯ ಎಂದು ಹೇಳುತ್ತದೆ. ಮೋಹನ್ ಭಾಗವತ್ ಸತ್ಯ ಅರ್ಥಹೀನ, ಅಧಿಕಾರ ಮುಖ್ಯ ಎಂದು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.
ಈ ವೇದಿಕೆ ಮೂಲಕವೇ ನಾನು ನಿಮಗೆ ಖಾತರಿ ನೀಡುತ್ತೇವೆ. ಸತ್ಯವನ್ನು ಎತ್ತಿ ಹಿಡಿಯುವ ಮೂಲಕ, ಸತ್ಯದ ಜೊತೆ ನಿಲ್ಲುವ ಮೂಲಕ ನಾವು ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಆರ್​ಎಸ್ಎಸ್ ಸರ್ಕಾರವನ್ನು ಕಿತ್ತೊಗೆಯುತ್ತೇವೆ, ನೀವು ನೋಡುತ್ತೀರಿ ಎಂದು ಪ್ರತಿಪಾದಿಸಿದ್ದಾರೆ.
ದೇಶದ ಚುನಾವಣೆಗಳಲ್ಲಿ ಬಿಜೆಪಿ ಅಕ್ರಮ ನಡೆಸುತ್ತಿದೆ. ಬಿಜೆಪಿ ಮತ್ತು ಚುನಾವಣೆ ಆಯೋಗದ ನಡುವೆ ಒಪ್ಪಂದ ನಡೆದಿದೆ. ಬಿಜೆಪಿ ಮತಗಳ್ಳತನ ಮಾಡುತ್ತದೆ. ಬಿಹಾರ ಚುನಾವಣೆಯಲ್ಲಿ ಮತದಾನದ ಸಮಯದಲ್ಲಿ ಮಹಿಳೆಯರಿಗೆ 10 ಸಾವಿರ ರೂ. ನೀಡಲಾಯಿತು. ಆಯೋಗ ಯಾವುದೇ ಕ್ರಮಕೈಗೊಳ್ಳಲಿಲ್ಲ. ಚುನಾವಣಾ ಆಯುಕ್ತರು ಏನೇ ಮಾಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪ್ರ ಧಾನಿ ನರೇಂದ್ರ ಮೋದಿ ಕಾನೂನನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಸತ್​ನಲ್ಲಿ ಮತಗಳ್ಳತನದ ನನ್ನ ಮೂರು ಸುದ್ದಿಗೋಷ್ಠಿಗಳ ಬಗ್ಗೆ ಚರ್ಚೆ ಮಾಡುವಂತೆ ನಾನು ಅಮಿತ್ ಶಾ ಅವರಿಗೆ ಸವಾಲು ಹಾಕಿದೆ. ಈ ವೇಳೆ ಸಂಸತ್ತಿನಲ್ಲಿ ಅವರು ಮಾತನಾಡುವಾಗ ಕೈ ನಡುಗುತ್ತಿದ್ದವು. ಸತ್ಯ ಯಾರು ಮಾತನಾಡುತ್ತಿದ್ದಾರೆಂದು ದೇಶಕ್ಕೆ ತೋರಿಸೋಣ ಎಂದೆ, ನೀವು ಅವರ ನಡುಗುವ ಕೈಗಳನ್ನು ನೋಡಿದ್ದೀರಾ? ಅವರು ಏಕೆ ನಡುಗುತ್ತಿದ್ದರು ಎಂದು ನಾನು ನಿಮಗೆ ಹೇಳಬೇಕೇ? ಏಕೆಂದರೆ ಅವರಿಗೆ ಅಧಿಕಾರವಿದ್ದಾಗ ಮಾತ್ರ ಅವರು ಧೈರ್ಯಶಾಲಿಗಳಾಗಿರುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಚುನಾವಣೆ ಆಯೋಗಕ್ಕೆ ಎಚ್ಚರಿಕೆ ನೀಡಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾಧಿಕಾರಿ ಆಯೋಗ ದೇಶದ್ದು, ಮೋದಿಯದ್ದಲ್ಲ ಎಂಬುದನ್ನು ಮರೆಯಬಾರದು. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪ್ರಧಾನಿ ಮೋದಿ ಚುನಾವಣಾ ಆಯೋಗಕ್ಕೆ ವಿನಾಯಿತಿ ನೀಡಲು ತಂದ ಹೊಸ ಕಾನೂನನ್ನು ರದ್ದು ಮಾಡುತ್ತೇವೆ. ನಾವು ಅದನ್ನು ಬದಲಾಯಿಸುತ್ತೇವೆ ಮತ್ತು ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧದ ಹೋರಾಟ ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಇದು ಸಮಯ ತೆಗೆದುಕೊಳ್ಳಬಹುದು, ಆದರೆ ಸತ್ಯವು ಅಂತಿಮವಾಗಿ ಗೆಲ್ಲುತ್ತದೆ. ಮೋದಿ, ಷಾ ಅವರನ್ನು ಸೋಲಿಸಲು ನಾವು ಸತ್ಯ, ಅಹಿಂಸೆಯೊಂದಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net