ಕಾನೂನುಬದ್ಧವಾಗಿ ಚುನಾವಣೆ ಆಯೋಗಕ್ಕೆ ಎಸ್​ಐಆರ್ ನಡೆಸುವ ಅಧಿಕಾರವಿಲ್ಲ; ಕಾಂಗ್ರೆಸ್ ಸಂಸದ ಮನೀಶ್ ತಿವಾರಿ | Manish Tewari

ಕಾಂಗ್ರೆಸ್ ಸಂಸದ ಮನೀಶ್ ತಿವಾರಿ
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ
Published on
ನವದೆಹಲಿ: ಭಾರತೀಯ ಚುನಾವಣೆ ಆಯೋಗಕ್ಕೆ ಕಾನೂನುಬದ್ಧವಾಗಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್​ಐಆರ್) ನಡೆಸುವ ಅಧಿಕಾರವಿಲ್ಲ, ಕೂಡಲೇ ಅದನ್ನು ನಿಲ್ಲಿಸುವಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ(Manish Tewari) ಹೇಳಿದ್ದಾರೆ.
ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಯನ್ನು ಆರಂಭಿಸಿ ಮಾತನಾಡಿದ ಅವರು, ಅನೇಕ ವಿರೋಧ ಪಕ್ಷದ ನಾಯಕರು ಮತ್ತು ಜನರು ಈಗ ಚುನಾವಣಾ ಸಂಸ್ಥೆಯ ತಟಸ್ಥತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಚುನಾವಣಾ ಸುಧಾರಣೆಗಳನ್ನು ಮಾಡುವ ಮೊದಲು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಆಯ್ಕೆಗೆ ಸಂಬಂಧಿಸಿದ 2023ರ ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಆಯೋಗ ತಟಸ್ಥ ಅಂಪೈರ್ ಆಗಿ ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ವಿಷಾದಕರವಾಗಿ ನಾನು ಹೇಳಲೇಬೇಕು, ಈ ಬದಿಯಲ್ಲಿ ಕುಳಿತಿರುವ ಅನೇಕ ವಿರೋಧ ಪಕ್ಷದ ಸದಸ್ಯರಿಗೆ ಮತ್ತು ಅನೇಕ ಜನರು ಅದರ ನಿಷ್ಪಕ್ಷಪಾತತೆಯ ಬಗ್ಗೆ ಪ್ರಶ್ನೆ ಮೂಡಿವೆ. ಕಾನೂನು ಪ್ರಕಾರ ಮುಖ್ಯ ಚುನಾವಣಾ ಆಯುಕ್ತರ ಸಮಿತಿಯು ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ಸಚಿವರನ್ನು ಒಳಗೊಂಡಿರಬೇಕು. ಅದರ ಜೊತೆಗೆ ಸಮಿತಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಅವರನ್ನು ಸೇರಿಸಬೇಕೆಂಬುದು ನನ್ನ ಸಲಹೆ. ಅದನ್ನು ಮಾಡಿದ್ರೆ ಆಯೋಗ ಮೇಲೆ ಇರುವ ಅನುಮಾನವನ್ನು ಹೊಗಲಾಡಿಸಬಹುದು ಎಂದು ತಿಳಿಸಿದ್ದಾರೆ.
327ನೇ ವಿಧಿಯು ಸಂಸತ್ತಿಗೆ ಮತದಾರರ ಪಟ್ಟಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಕಾನೂನುಗಳನ್ನು ಮಾಡುವ ಹಕ್ಕುಗಳನ್ನು ನೀಡಿದೆ. ವಿಶೇಷ ತೀವ್ರ ಪರಿಷ್ಕರಣೆ (ಮತದಾರರ ಪಟ್ಟಿ) ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಎಸ್​ಐಆರ್ ನಡೆಯುತ್ತಿದೆ. ಆದರೆ ಅದನ್ನು ಮಾಡು ಅಧಿಕಾರ ಆಯೋಗಕ್ಕೆ ಇಲ್ಲ. ಇದನ್ನು ನಾನು ತುಂಬಾ ಜವಾಬ್ದಾರಿಯಿಂದ ಹೇಳ್ತಿದ್ದೇನೆ ಎಂದಿದ್ದಾರೆ.
ಸಂವಿಧಾನ ಅಥವಾ ಕಾನೂನಿನಲ್ಲಿ ಎಸ್​ಐಆರ್​​ಗೆ ಯಾವುದೇ ಅವಕಾಶವಿಲ್ಲ. ಯಾವುದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಲಿಖಿತವಾಗಿ ದಾಖಲಿಸಿ ಸಾರ್ವಜನಿಕಗೊಳಿಸಬೇಕಾದ ಕಾರಣಗಳಿಗಾಗಿ ಸರಿಪಡಿಸಬಹುದು ಎಂಬುದು ಚುನಾವಣಾ ಆಯೋಗದ ಹಕ್ಕು. ಆಗ ಮಾತ್ರ ನೀವು SIR ನಡೆಸಬಹುದು, ಇಡೀ ಬಿಹಾರ ಅಥವಾ ಇಡೀ ಕೇರಳಕ್ಕೆ SIR ಮಾಡಲು ಸಾಧ್ಯವಿಲ್ಲ ಎಂದು ತಿವಾರಿ ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net