ಆಂಧ್ರದಲ್ಲಿ ಅಮಾನವೀಯ ಘಟನೆ: ಆಂಬ್ಯುಲೆನ್ಸ್ ಸಿಗದೆ ಕಸದ ರಿಕ್ಷಾದಲ್ಲಿ ವೃದ್ಧೆಯ ಶವ ಸಾಗಾಟ!

Garbage Rickshaw
Garbage Rickshaw
Published on
ಅಮರಾವತಿ: ಆಧುನಿಕ ಜಗತ್ತಿನಲ್ಲಿ ನಾವು ಎಷ್ಟೇ ಮುಂದುವರಿದಿದ್ದರೂ, ಬಡವರ ಪಾಲಿಗೆ ಇಂದಿಗೂ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ ಎಂಬುದಕ್ಕೆ ಆಂಧ್ರಪ್ರದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಅನಾರೋಗ್ಯದಿಂದ ಮೃತಪಟ್ಟ ವೃದ್ಧ ಮಹಿಳೆಯೊಬ್ಬರ ಶವವನ್ನು ಸಾಗಿಸಲು ಆಸ್ಪತ್ರೆಯು ಆಂಬ್ಯುಲೆನ್ಸ್ ಒದಗಿಸಲು ವಿಫಲವಾದ ಕಾರಣ, ಅನಿವಾರ್ಯವಾಗಿ ಸಂಬಂಧಿಕರು ಮೃತದೇಹವನ್ನು 'ಕಸದ ರಿಕ್ಷಾ'ದಲ್ಲಿ ಇಟ್ಟು ಸ್ಮಶಾನಕ್ಕೆ ಕೊಂಡೊಯ್ದಿದ ಘಟನೆ ನಡೆದಿದೆ.

ನಡೆದಿದ್ದೇನು?

ವರದಿಗಳ ಪ್ರಕಾರ, ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯ ಗುಮ್ಮಲಕ್ಷ್ಮಿಪುರಂ ಗ್ರಾಮದಲ್ಲಿ, ಭದ್ರಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ರಾಧಮ್ಮ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತದೇಹವನ್ನು ಮನೆಗೆ ಅಥವಾ ಸ್ಮಶಾನಕ್ಕೆ ಕೊಂಡೊಯ್ಯಲು ಕುಟುಂಬಸ್ಥರು ಆಸ್ಪತ್ರೆ ಮಂಡಳಿಯ ಬಳಿ ಆಂಬ್ಯುಲೆನ್ಸ್ ಅಥವಾ ಶವವಾಹನಕ್ಕಾಗಿ ಕಳಕಳಿಯಿಂದ ವಿನಂತಿಸಿದರು. ಆದರೆ, ಗಂಟೆಗಟ್ಟಲೆ ಕಾಯಿಸಿದರೂ ಆಸ್ಪತ್ರೆಯ ಸಿಬ್ಬಂದಿ ವಾಹನ ವ್ಯವಸ್ಥೆ ಮಾಡಲಿಲ್ಲ ಎಂದು ಆರೋಪಿಸಲಾಗಿದೆ.
ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆಯಲು ಹಣವಿಲ್ಲದ ಮತ್ತು ಆಸ್ಪತ್ರೆಯಿಂದ ಯಾವುದೇ ನೆರವು ಸಿಗದ ಸ್ಥಿತಿಯಲ್ಲಿದ್ದ ಕುಟುಂಬಸ್ಥರು, ಕೊನೆಗೆ ಅಲ್ಲಿಯೇ ಇದ್ದ ಪುರಸಭೆಯ ಕಸ ಸಾಗಿಸುವ ರಿಕ್ಷಾವನ್ನು ಅವಲಂಬಿಸಬೇಕಾಯಿತು. ಮೃತದೇಹವನ್ನು ಕಸದ ಗಾಡಿಯಲ್ಲಿ ಇಟ್ಟು ರಸ್ತೆಯ ಮೂಲಕ ಸಾಗಿಸುತ್ತಿರುವ ದೃಶ್ಯವನ್ನು ಕಂಡ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.
ಸಾರ್ವಜನಿಕರ ಆಕ್ರೋಶ
ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸರ್ಕಾರದ ಆರೋಗ್ಯ ಇಲಾಖೆಯ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.‘ ಬಡವರ ಪಾಲಿಗೆ ಸರ್ಕಾರಿ ಸೌಲಭ್ಯಗಳು ಬರೀ ಘೋಷಣೆಗಳಿಗಷ್ಟೇ ಸೀಮಿತವಾಗಿವೆಯೇ ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಆದರೆ, ಸತ್ತ ನಂತರವೂ ಅನುಭವಿಸಿದ ಈ ಅವಮಾನ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net