'ಎಲ್ ನಿನೊ' ಭಾರತದಲ್ಲಿ 55,000 ಸಾವು ಸಾಧ್ಯತೆ! ಮುಂದಿನ ಮಾರ್ಚ್​ವರೆಗೂ ತೀವ್ರ ಪ್ರಭಾವ

'ಎಲ್ ನಿನೊ' ಭಾರತದಲ್ಲಿ 55,000 ಸಾವು ಸಾಧ್ಯತೆ! ಮುಂದಿನ ಮಾರ್ಚ್​ವರೆಗೂ ತೀವ್ರ ಪ್ರಭಾವ
Published on: 

ನವದೆಹಲಿ: ಭೂಮಿಯ ತಾಪಮಾನವನ್ನು ಭಾರಿ ಪ್ರಮಾಣದಲ್ಲಿ ಏರಿಸಲು ಕಾರಣವಾಗುವ ನೈಸರ್ಗಿಕ ಎಲ್ ನಿನೊ ವಿದ್ಯಮಾನ ಭಾರತಕ್ಕೆ ಕಂಟಕವಾಗಲಿದ್ದು, ಮುಂದಿನ ಮಾರ್ಚ್​ನೊಳಗೆ ಅದರ ಪ್ರಭಾವದಿಂದ ಸುಮಾರು 55,000 ಜನರು ಮೃತಪಡಬಹುದೆಂದು ಹೊಸ ಟ್ರ್ಯಾಕರ್​ ಎಚ್ಚರಿಕೆ ಗಂಟೆ ಬಾರಿಸಿದೆ.

ಎಲ್ ನಿನೊದಿಂದ ಶಾಂತ ಮಹಾಸಾಗರದ (ಪೆಸಿಫಿಕ್) ಮಧ್ಯ ಹಾಗೂ ಪೂರ್ವ ಸಮಭಾಜಕ ವೃತ್ತದ ಭಾಗಗಳ ಮೇಲ್ಮೈ ತಾಪಮಾನ ವಿಪರೀತವಾಗಿ ಏರಿಕೆಯಾಗಿ ಜಗತ್ತಿನಾದ್ಯಂತ ಗಾಳಿ ಬೀಸುವಿಕೆ, ಒತ್ತಡ ಮತ್ತು ಮಳೆಯಾಗುವ ವಿಧಾನಗಳಲ್ಲಿ ಬದಲಾವಣೆಗಳಾಗಲಿವೆ. ಅನೇಕ ನೈಸರ್ಗಿಕ ವಾತಾವರಣ ವಿದ್ಯಮಾನಗಳಿಂದ ಭೂಮಿಯ ಹವಾಮಾನ ರೂಪುಗೊಳ್ಳುತ್ತದೆ. ಅವುಗಳಲ್ಲಿ ಒಂದಾದ ಎಲ್ ನಿನೊ ಈ ವರ್ಷ ದಾಖಲೆ ಮಟ್ಟದ ಭೀಕರತೆಯನ್ನು ಪಡೆದು ಸಾಗರದಿಂದ ಅಸಾಧಾರಣ ಪ್ರಮಾಣದ ಬಿಸಿಗಾಳಿಯನ್ನು ಹೊರಸೂಸಿ ಬರಗಾಲ, ಪ್ರವಾಹ ಮತ್ತು ತೀವ್ರ ಚಂಡಮಾರುತಗಳನ್ನು ಸೃಷ್ಟಿಸಲಿದೆ. ಸೆಪ್ಟೆಂಬರ್ ವೇಳೆಗಾಗಲೇ ಪೆಸಿಫಿಕ್ ಸಾಗರದ ತಾಪಮಾನ 3.8 ಡಿಗ್ರಿಯಷ್ಟು ಏರಿಕೆಯಾಗಿದೆ. ಈ ಹಿಂದಿನ ಯಾವುದೇ ಎಲ್ ನಿನೊದಕ್ಕಿಂತ ಇದು ಜಾಸ್ತಿಯಾಗಿದೆ. ಹೀಗಾಗಿ ತಜ್ಞರು ಆಗಲೇ ಇದನ್ನು ‘ಸೂಪರ್ ಎಲ್ ನಿನೊ’ ಎಂದು ವರ್ಣಿಸಿದ್ದಾರೆ.

ಮಾರ್ಚ್​ನಲ್ಲಿ ಅಧಿಕ ಸಾವು

ಅಕ್ಟೋಬರ್ನಿಂದ 2027ರ ಮಾರ್ಚ್ ನಡುವೆ ಭಾರತದಲ್ಲಿ ಅತಿ ಹೆಚ್ಚು, ಅಂದರೆ ಸುಮಾರು 55,000 ಮಂದಿ ತಾಪಮಾನ ಸಂಬಂಧಿತ ಪರಿಣಾಮದಿಂದ ಮೃತಪಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಪೈಕಿ ಬಹುತೇಕ ಸಾವು ಮಾರ್ಚ್​ನಲ್ಲಿ ಸಂಭವಿಸಲಿವೆ ಎಂಬುದು ಟ್ರ್ಯಾಕರ್​ನ ಅಂದಾಜಾಗಿದೆ. ನೈಜೀರಿಯಾದಲ್ಲಿ 56,000, ಇಂಡೋನೇಷ್ಯಾದಲ್ಲಿ 29,000 ಮತ್ತು ಬ್ರೆಜಿಲ್ನಲ್ಲಿ 19,000 ಜನರ ಮರಣ ಸಂಭವಿಸಲಿದೆ.

ಪ್ರಾಣ ರಕ್ಷಣೆಗೆ ನೆರವು

ತೀವ್ರ ತಾಪಮಾನ ಏರಿಕೆ ಮುನ್ಸೂಚನೆ ಪಡೆಯಲು ಸಾಧ್ಯವಾಗಿರುವುದು ಒಂದು ದೊಡ್ಡ ಮುನ್ನಡೆಯಾಗಿದೆ. ಇದು ಎಲ್ಲಿ ಹೆಚ್ಚಿನ ಅಪಾಯ ಸಂಭವಿಸುತ್ತದೆಯೆಂದು ಗುರುತಿಸಲು ನೆರವಾಗುತ್ತದೆ. ಇದು ಜನರ ಪ್ರಾಣ ಹರಣವಾಗುವುದಕ್ಕೂ ಮುನ್ನ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಗಳಿಗೆ ಸಹಕಾರಿಯಾಗುತ್ತದೆ ಎಂದು ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್​ನ ಸಹ-ಸಂಸ್ಥಾಪಕ ಮೈಕೆಲ್ ಗ್ರೀನ್ ಹೇಳಿದ್ದಾರೆ.

ದಕ್ಷಿಣ ಗೋಳಾರ್ಧ

ಎಲ್ ನಿನೊ ತಾಪಮಾನದ ಬಿಸಿ ಹೆಚ್ಚಾಗಿ ದಕ್ಷಿಣ ಗೋಳಾರ್ಧದಲ್ಲಿ ಕೇಂದ್ರೀಕೃತವಾಗಲಿದ್ದು ಆಗ್ನೇಯ ಏಷ್ಯಾ ಪ್ರಮುಖ ಹಾಟ್ಸ್ಪಾಟ್ ಆಗಿರುತ್ತದೆ ಎಂದು ಲ್ಯಾಬ್ ಭವಿಷ್ಯ ನುಡಿದಿದೆ. ಎಲ್ ನಿನೊದಿಂದಾಗಿ ಮುಂಬೈಯಲ್ಲಿ ವಾಯು ಮಾಲಿನ್ಯ ಪರಿಸ್ಥಿತಿ ಹದಗೆಡಲಿದೆ ಎಂದು ಈ ವಾರ ಹವಾಮಾನ ವರದಿಯೊಂದು ಎಚ್ಚರಿಸಿತ್ತು.

ವಿಶ್ವಾದ್ಯಂತ 3. 73 ಲಕ್ಷ ಸಾವು?

ತಾಪಮಾನ ಸಂಬಂಧಿತ ಸಾವುಗಳು ಇನ್ನಷ್ಟು ಹೆಚ್ಚಲಿವೆ ಎಂದು ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ಎಚ್ಚರಿಕೆ ನೀಡಿದೆ. ಜಗತ್ತಿನಾದ್ಯಂತ ಮುಂದಿನ ಆರು ತಿಂಗಳಲ್ಲಿ 3,73,000ಕ್ಕೂ ಅಧಿಕ ಜನರು ಇದರ ಪ್ರಭಾವದಿಂದ ಅಸುನೀಗಲಿದ್ದಾರೆ ಎಂದು ಎಲ್ ನಿನೊ ಹೀಟ್ ಮಾರ್ಟಾಲಿಟಿ ಟ್ರಾ್ಯಕರ್ ಎಂದು ಕರೆಯಲಾಗುವ ಈ ಲ್ಯಾಬ್ ಹೇಳಿದೆ.