

ನವದೆಹಲಿ: ದೇಶದಲ್ಲಿ ‘ಎಲ್ ನಿನೋ’ ಹವಾಮಾನ ವಿದ್ಯಮಾನದಿಂದ ಉಂಟಾಗಬಹುದಾದ ಅಪಾಯಗಳನ್ನು ಎದುರಿಸಲು ಕೇಂದ್ರ ಸರ್ಕಾರ ಅತ್ಯಂತ ಸೂಕ್ಷ್ಮವಾಗಿರುವ 197 ಜಿಲ್ಲೆಗಳನ್ನು ಗುರುತಿಸಿದ್ದು, ರಾಜ್ಯವಾರು ತುರ್ತು ಪರಿಹಾರ ಯೋಜನೆಗಳನ್ನು ಸಿದ್ಧಪಡಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ತಿಳಿಸಿದ್ದಾರೆ.
ಇದಲ್ಲದೆ ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ಸಚಿವಾಲಯ ದೇಶಾದ್ಯಂತ ‘ಖೇತ್ ಬಚಾವೋ ಅಭಿಯಾನ’ವನ್ನು ಆರಂಭಿಸಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎಲ್ ನಿನೋ ಸವಾಲು ಎದುರಿಸುವುದಕ್ಕಾಗಿ ಹವಾಮಾನದ ಸ್ಥಿತಿಗತಿ ಮೌಲ್ಯಮಾಪನ ಮಾಡಲು ವಾರಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ. ಪರಿಸ್ಥಿತಿ ಬಿಗಡಾಯಿಸಿದರೆ ತಕ್ಷಣ ಸ್ಪಂದಿಸಲು ಅಗತ್ಯವಿರುವ ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರಗಳ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಭಾರತೀಯ ಹವಾಮಾನ ಇಲಾಖೆ ಈ ಬಾರಿ ಸಾಧಾರಣಕ್ಕಿಂತ ಶೇ. 90ರಷ್ಟು ಕಡಿಮೆ ಮುಂಗಾರು ಮಳೆಯ ಮುನ್ಸೂಚನೆ ನೀಡಿರುವುದರಿಂದ ಕೃಷಿ ವಲಯದಲ್ಲಿ ಆತಂಕ ಮೂಡಿದೆ. ಜೂ. 4ರಂದು ಕೇರಳ ಪ್ರವೇಶಿಸಿರುವ ಮುಂಗಾರು ಸದ್ಯ ದೇಶದ ಶೇ. 20ರಿಂದ 30ರಷ್ಟು ಭಾಗವನ್ನು ಆವರಿಸಿದ್ದು, ಜುಲೈ 15ರ ವೇಳೆಗೆ ದೇಶಾದ್ಯಂತ ಆವರಿಸಿಕೊಳ್ಳುವ ನಿರೀಕ್ಷೆಯಿದೆ.