ಮುಂದಿನ ಫೆಬ್ರವರಿವರೆಗೆ ಎಲ್ ನಿನೋ ಪ್ರಭಾವ: ಮಳೆ ಕೊರತೆ, ಬಿಸಿಲ ಝುಳದ ಮುನ್ಸೂಚನೆ | ವಿಶ್ವ ಹವಾಮಾನ ಸಂಸ್ಥೆ ವರದಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಜಾಗತಿಕ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವ ‘ಎಲ್ ನಿನೋ’ ಪ್ರಭಾವ ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, 2027ರ ಫೆಬ್ರವರಿವರೆಗೂ ಮುಂದುವರಿಯಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಇದರ ಪರಿಣಾಮ ಭಾರತದ ಮೇಲೂ ಆಗಲಿದ್ದು, ಮಳೆ ಕೊರತೆ, ತೀವ್ರ ಬರಗಾಲ ಹಾಗೂ ವಿಪರೀತ ತಾಪಮಾನದಂತಹ ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಕಳವಳ ವ್ಯಕ್ತಪಡಿಸಿದೆ.
ಜಗತ್ತಿಗೆ ಕಾದಿದೆ ಪ್ರವಾಹ, ಬರದ ಭೀತಿ: ಸ್ಪಾ್ಯನಿಷ್ ಭಾಷೆಯಲ್ಲಿ ‘ಎಲ್ ನಿನೋ’ ಎಂದರೆ ಗಂಡು ಮಗು ಎಂದರ್ಥ. ಆದರೆ ಈ ಹವಾಮಾನ ವಿದ್ಯಮಾನವು ಜಗತ್ತಿನಾದ್ಯಂತ ಸಮುದಾಯಗಳು ಮತ್ತು ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸೆಲೆಸ್ಟ್ ಸೌಲೋ ತಿಳಿಸಿದ್ದಾರೆ. ಈಗಾಗಲೇ ನಾವು ಪ್ರವಾಹ ಮತ್ತು ಬರಗಾಲದಿಂದ ಆಗಿರುವ ವಿನಾಶವನ್ನು ನೋಡುತ್ತಿದ್ದೇವೆ. ಎಲ್ ನಿನೋ ತೀವ್ರಗೊಂಡಂತೆ ಈ ದುಷ್ಪರಿಣಾಮಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಏನಿದು ಎಲ್ ನಿನೋ?

‘ಪೆಸಿಫಿಕ್ ಮಹಾಸಾಗರದ ಉಷ್ಣಾಂಶದಲ್ಲಿನ ಏರಿಳಿತಗಳಿಂದ ಉಂಟಾಗುವ ಈ ಪ್ರಕ್ರಿಯೆಯು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ದಾಖಲೆಯ ಉಷ್ಣಾಂಶ: ಭಾರತೀಯ ಹವಾಮಾನ ಇಲಾಖೆ ಕೂಡ ಇತ್ತೀಚೆಗಷ್ಟೇ ಇದೇ ರೀತಿಯ ಮುನ್ಸೂಚನೆ ನೀಡಿದೆ. ಎಲ್ ನಿನೋ ಪರಿಣಾಮದಿಂದಾಗಿಯೇ ಕಳೆದ ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ವಾಡಿಕೆಗಿಂತ ಶೇ. 16ರಷ್ಟು ಮಳೆ ಕೊರತೆಯಾಗಿದೆ. 1901ರ ಬಳಿಕ ದೇಶ ಕಂಡ ಅತ್ಯಂತ ಉಷ್ಣಾಂಶದ ಆಗಸ್ಟ್ ತಿಂಗಳು ಇದಾಗಿದೆ ಎಂದು ಐಎಂಡಿ ತಿಳಿಸಿತ್ತು. ಸೆಪ್ಟೆಂಬರ್ ತಿಂಗಳಿನಲ್ಲೂ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗಲಿದ್ದು, ದೀರ್ಘಾವಧಿ ಸರಾಸರಿಯ ಶೇ. 91ರಷ್ಟಕ್ಕೂ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಹಿಂಗಾರು ಬೆಳೆಗಳಿಗೆ ಕಂಟಕ
ಎಲ್ ನಿನೋ ಪರಿಣಾಮದಿಂದ ಚಳಿಗಾಲದಲ್ಲೂ ಸೆಕೆ ಅನುಭವ ಆಗಲಿದೆ ಎಂದು ದೆಹಲಿ ಮೂಲದ ಹವಾಮಾನ ಅಧ್ಯಯನ ಸಂಸ್ಥೆ ಕ್ಲೈಮೇಟ್ ಟ್ರೆಂಡ್ಸ್ ವರದಿ ಹೇಳಿದೆ. ಉತ್ತರ ಭಾರತದಲ್ಲಿ ಚಳಿಗಾಲದ ಅವಧಿ ಕಡಿಮೆಯಾಗುತ್ತಿದ್ದು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲೇ ತಾಪಮಾನ ಏರಿಕೆಯಾಗುವುದು ಸಾಮಾನ್ಯವಾಗುತ್ತಿದೆ. ಗೋಧಿ ಇನ್ನಿತರ ಹಿಂಗಾರು ಬೆಳೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ. ಬೆಳೆ ಕಾಳು ಕಟ್ಟುವ ಹಂತದಲ್ಲೇ ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಇಳುವರಿ ಕುಸಿಯುವ ಭೀತಿ ಎದುರಾಗಿದೆ ಎಂದು ವರದಿ ಎಚ್ಚರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net