ಇಡೀ ಜಗತ್ತಿಗೆ ತಟ್ಟಲಿದೆ 'ಎಲ್​ ನಿನೋ' ಬಿಸಿ! ಪ್ರಥಮ ಬಾರಿಗೆ 30°C ಗಡಿದಾಟಿದ ಪೆಸಿಫಿಕ್​ ಸಮುದ್ರ ತಾಪಮಾನ | El Nino

ಪೆಸಿಫಿಕ್ ಪ್ರದೇಶದಲ್ಲಿ ಹಿಂದೆಂದೂ ಕಾಣದ ಗರಿಷ್ಠ ತಾಪಮಾನ ಮೀರಿ ದಾಖಲಾದ 30 ಡಿಗ್ರಿ ಸೆಲ್ಸಿಯಸ್​ ಇದೀಗ ಹೊಸ ದಾಖಲೆಯನ್ನು ಸೃಷ್ಟಿಸಿದೆ.
El Nino
ಇಡೀ ಜಗತ್ತಿಗೆ ತಟ್ಟಲಿದೆ 'ಎಲ್​ ನಿನೋ' ಬಿಸಿ! ಪ್ರಥಮ ಬಾರಿಗೆ 30°C ಗಡಿದಾಟಿದ ಪೆಸಿಫಿಕ್​ ಸಮುದ್ರ ತಾಪಮಾನ | El Nino
Published on: 
  • ಹೆಚ್ಚಾಯ್ತು ಎಲ್ ನಿನೋ ಎಫೆಕ್ಟ್​

  • ಪೆಸಿಫಿಕ್ ಮಹಾಸಾಗರದಲ್ಲಿ ಹಿಂದೆಂದೂ ಕಾಣದ ತಾಪಮಾನ ದಾಖಲು

  • ಸಮುದ್ರದ ಮೇಲ್ಮೈ ತಾಪಮಾನವು 30°C ಮೀರಿ ದಾಖಲು

El Nino: ಪೆಸಿಫಿಕ್ ಮಹಾಸಾಗರದಲ್ಲಿ ಪ್ರಭಾವ ಬೀರಿರುವ 'ಎಲ್ ನಿನೋ' ವಿದ್ಯಮಾನವು ಇಡೀ ಜಗತ್ತನ್ನೇ ಆತಂಕಕ್ಕೀಡುಮಾಡಿದೆ ಅನ್ನೋದಕ್ಕೆ ಇದೊಂದು ಬದಲಾವಣೆಯೇ ಜ್ವಲಂತ ಸಾಕ್ಷಿ.

ಪೆಸಿಫಿಕ್ ಪ್ರದೇಶದಲ್ಲಿ ಹಿಂದೆಂದೂ ಕಾಣದ ಗರಿಷ್ಠ ತಾಪಮಾನ ಮೀರಿ ದಾಖಲಾದ 30 ಡಿಗ್ರಿ ಸೆಲ್ಸಿಯಸ್​ ಇದೀಗ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅಕ್ಟೋಬರ್ 22ರಂದು ಪೆಸಿಫಿಕ್ ಮಹಾಸಾಗರದ ಸಮಭಾಜಕ ವಲಯದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸುಮಾರು 30 ಡಿಗ್ರಿ ಸೆಲ್ಸಿಯಸ್‌ ಮುಟ್ಟಿದೆ ಎಂದು ಯುಎಸ್ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ಸ್ಪಷ್ಟಪಡಿಸಿದೆ.

ಈ ಬೆಳವಣಿಗೆಗಳು ಎಲ್ ನಿನೋ ಇನ್ನಷ್ಟು ಪ್ರಬಲವಾಗುತ್ತಿದೆ ಎಂಬುದನ್ನು ಸೂಚಿಸುತ್ತವೆ. ಇದರಲ್ಲಿ ಉಷ್ಣವಲಯದ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿನ ಮೇಲ್ಮೈ ನೀರು, ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗುತ್ತದೆ. ಇದು ಗಾಳಿಯ ದಿಕ್ಕು ಮತ್ತು ಮೋಡಗಳ ಚಲನೆಯಲ್ಲಿ ದೊಡ್ಡ ಬದಲಾವಣೆಗಳನ್ನು ಸೃಷ್ಟಿಸುತ್ತದೆ. ಇದರಿಂದಾಗಿ, ಪ್ರಪಂಚದ ಒಣ ಪ್ರದೇಶಗಳಲ್ಲಿ ಭಾರಿ ಮಳೆಯಾಗಿ ಪ್ರವಾಹಗಳು ಉಂಟಾಗಬಹುದು. ಅದೇ ರೀತಿ, ಮಳೆ ಬೀಳಬೇಕಾದ ಪ್ರದೇಶಗಳಲ್ಲಿ ಬರಗಾಲ ಉಂಟಾಗಬಹುದು.

ಚಳಿಗಾಲದ ಚಳಿಯು ಕಣ್ಮರೆ

ಇದು ಜಾಗತಿಕ ಹವಾಮಾನ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಬಲ್ಲದು. ವಿಶ್ವ ಹವಾಮಾನ ಸಂಸ್ಥೆಯ (WMO) ಪ್ರಕಾರ, 2026ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಉಷ್ಣವಲಯದ ಪೆಸಿಫಿಕ್‌ನ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ತಾಪಮಾನವು ದಾಖಲೆಯ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ಡಿಸೆಂಬರ್ ವೇಳೆಗೆ ಎಲ್ ನಿನೋ ತನ್ನ ತೀವ್ರತೆಯನ್ನು ತಲುಪುವ ನಿರೀಕ್ಷೆಗಳಿವೆ ಎಂದು ವರದಿಯಾಗಿದೆ.

'ನಿನೋ 3.4' (Nino 3.4) ಎಂದು ಕರೆಯಲ್ಪಡುವ ಪ್ರದೇಶದಲ್ಲಿ, ಸಮುದ್ರದ ಮೇಲ್ಮೈ ತಾಪಮಾನವು ಜೂನ್‌ನಲ್ಲಿ ಸಾಮಾನ್ಯಕ್ಕಿಂತ 1.6°C ಹೆಚ್ಚಾಗಿದ್ದರೆ, ಆಗಸ್ಟ್‌ನಲ್ಲಿ 2.5°C ಹೆಚ್ಚಾಗಿತ್ತು ಎಂದು ಡಬ್ಲ್ಲೂಎಂಓ ತಿಳಿಸಿದೆ. ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಈ ವ್ಯತ್ಯಾಸವು 3.7°C ತಲುಪುವ ನಿರೀಕ್ಷೆಯಿದೆ. ಇದು ನವೆಂಬರ್ 2015 ಮತ್ತು ಜನವರಿ 2016ರ ನಡುವೆ ದಾಖಲಾಗಿದ್ದ 2.6°C ನ ಹಿಂದಿನ ದಾಖಲೆಯನ್ನು ಮೀರಿಸುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಲಾಗಿದೆ.

ಭಾರತಕ್ಕೂ ತಟ್ಟಲಿದೆ ಎಫೆಕ್ಟ್​

ಎಲ್ ನಿನೋದಿಂದ ಬಾಧಿತವಾಗುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ವಿಶೇಷವಾಗಿ, ಇಲ್ಲಿ ಮಳೆಯ ಪ್ರಮಾಣ ಕುಂಠಿತಗೊಳ್ಳುವುದು ಮತ್ತು ತಾಪಮಾನ ಹೆಚ್ಚಾಗುವುದು ಕಂಡುಬರಲಿದೆ. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಕಾರ, 2026ರ ನೈಋತ್ಯ ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ.13ರಷ್ಟು ಕಡಿಮೆ ಮಳೆಯಾಗಿದೆ. ಅದೇ ಸಮಯದಲ್ಲಿ, ಮುಂಬರುವ ತಿಂಗಳುಗಳಲ್ಲಿ ದಕ್ಷಿಣ ಏಷ್ಯಾದ ಅನೇಕ ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿ ದಾಖಲಾಗುವ ಸಾಧ್ಯತೆಯಿದೆ. ಅಲ್ಲಿಗೆ, ಚಳಿಗಾಲದಲ್ಲಿ ತಂಪು ವಾತಾವರಣ ಇರುವುದು ಬಹುತೇಕ ಅನುಮಾನವೇ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net