ಕೇರಳದ ತ್ರಿಶ್ಶೂರ್‌ನಲ್ಲಿ ಭೀಕರ ರಸ್ತೆ ಅಪಘಾತ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ತಮಿಳುನಾಡಿನ 8 ವಿದ್ಯಾರ್ಥಿಗಳ ದುರಂತ ಅಂತ್ಯ! | Kerala Accident

Kerala Accident | ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ತಮಿಳುನಾಡಿನ 8 ವಿದ್ಯಾರ್ಥಿಗಳ ದುರಂತ ಅಂತ್ಯ!
Kerala Accident | ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ತಮಿಳುನಾಡಿನ 8 ವಿದ್ಯಾರ್ಥಿಗಳ ದುರಂತ ಅಂತ್ಯ!
Published on
Kerala Accident: ಕೇರಳದ ತ್ರಿಶ್ಶೂರ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಎಂಟು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 11.40ರ ವೇಳೆಗೆ ಈ ದುರಂತ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕೈಪಮಂಗಲಂನ ಪನಂಬಿಕ್ಕುನ್ನು ಬಳಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿಯಾಗಿದೆ. ಮೃತಪಟ್ಟ ಎಂಟು ಮಂದಿ ತಮಿಳುನಾಡಿನ ವಿದ್ಯಾರ್ಥಿಗಳಾಗಿದ್ದು, ಅವರು ಗುರುವಾಯೂರಿನಿಂದ ಕೊಡುಂಗಲ್ಲೂರಿನತ್ತ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ನಂತರ, ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಸಂತ್ರಸ್ತರನ್ನು ಹೊರತೆಗೆದರು. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಸಿಲುಕಿಕೊಂಡವರನ್ನು ರಕ್ಷಿಸಲು ಅಧಿಕಾರಿಗಳು ವಾಹನವನ್ನು ಕತ್ತರಿಸಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದಾಗ್ಯೂ, ಅಷ್ಟರಲ್ಲಾಗಲೇ ಅವರೆಲ್ಲರೂ ಮೃತಪಟ್ಟಿದ್ದರು. ನಂತರ, ಅವರ ಮೃತದೇಹಗಳನ್ನು ತ್ರಿಶ್ಶೂರ್ ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಮೃತರ ಗುರುತನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಇವರೆಲ್ಲರೂ ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಪಿಎಸ್‌ಎನ್‌ಎ (PSNA) ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತನಿಖೆಯ ನಂತರ ಹೆಚ್ಚಿನ ವಿವರಗಳು ಹೊರಬರಲಿವೆ ಎಂದು ಪೊಲೀಸರು ಹೇಳಿದ್ದಾರೆ.

ಖಾಸಗಿ ಬಸ್ ಅಪಘಾತ!..

ಇದೇ ರೀತಿಯ ಮತ್ತೊಂದು ಅಪಘಾತ ಕಳೆದ ತಿಂಗಳು ತ್ರಿಶ್ಶೂರ್ ಜಿಲ್ಲೆಯ ಕುನ್ನಂಕುಲಂನಲ್ಲಿ ನಡೆದಿತ್ತು. ಖಾಸಗಿ ಬಸ್ ಹಲವು ವಾಹನಗಳಿಗೆ ಡಿಕ್ಕಿಯಾದ ಈ ಘಟನೆಯಲ್ಲಿ ಒಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಗುರುವಾರ ಮಧ್ಯಾಹ್ನ ಬಸ್ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಕಾರು, ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನಗಳು ತೀವ್ರವಾಗಿ ಹಾನಿಗೊಳಗಾಗಿದ್ದವು.
ಈ ದುರಂತದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದು, ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಅತಿ ವೇಗದಲ್ಲಿದ್ದ ಬಸ್, ಕಾಂಪೌಂಡ್ ಗೋಡೆ ಮತ್ತು ಗೇಟ್‌ಗೆ ಡಿಕ್ಕಿ ಹೊಡೆದು ಒಳಗೆ ನಿಂತಿರುವ ದೃಶ್ಯಗಳು ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದವು. (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net