ಬಂಗಾಳದಲ್ಲಿ ಮುಂದುವರೆದ TMC ನಾಯಕರ ಮೇಲೆ ಮೊಟ್ಟೆ ದಾಳಿ: ಶಾಸಕ ಕುನಾಲ್​ ಘೋಷ್​​ ಕಾರಿನ ಮೇಲೆ ಮೊಟ್ಟೆ, ಕಲ್ಲು ಎಸೆತ: BJP ವಿರುದ್ಧ ಮಮತಾ ಕಿಡಿ

ಬಂಗಾಳದಲ್ಲಿ ಮುಂದುವರೆದ TMC ನಾಯಕರ ಮೇಲೆ ಮೊಟ್ಟೆ ದಾಳಿ: ಶಾಸಕ ಕುನಾಲ್​ ಘೋಷ್​​ ಕಾರಿನ ಮೇಲೆ ಮೊಟ್ಟೆ, ಕಲ್ಲು ಎಸೆತ: BJP ವಿರುದ್ಧ ಮಮತಾ ಕಿಡಿ
Published on: 
  • ಟಿಎಂಸಿ ನಾಯಕ ಕುನಾಲ್​ ಘೋಷ್ ಇದ್ದ ಕಾರಿನ ಮೇಲೆ ದಾಳಿ

  • ಮೊಟ್ಟೆ, ಕಲ್ಲು ಎಸೆದು ದಾಳಿ ನಡೆಸಿದ ಸಾರ್ವಜನಿಕರು

  • ಬಿಜೆಪಿ ಮಾಸ್ಟರ್​ಮೈಂಡ್​ ವಿರುದ್ಧ ಕಿಡಿಕಾರಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಇಂದು (ಸೆ.26) ಸೆರಾಂಪುರದಲ್ಲಿ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ರ‍್ಯಾಲಿಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ಶಾಸಕ ಕುನಾಲ್​ ಘೋಷ್​ ಅವರ ಕಾರಿನ ಮೇಲೆ ಮೊಟ್ಟೆ ಹಾಗೂ ಕಲ್ಲಿನ ದಾಳಿಯಾಗಿದೆ. ಈ ಘಟನೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ನಾಯಕರ ವಿರುದ್ಧ ತೃಣಮೂಲ ಕಾಂಗ್ರೆಸ್​​​ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ತೃಣಮೂಲ ಕಾಂಗ್ರೆಸ್​ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರಿಗೆ ಇಂದು ರ‍್ಯಾಲಿಯಲ್ಲಿ ಪಾಲ್ಗೊಂಡು ಸಾರ್ವಜನಿಕ ಉದ್ದೇಶಿಸಿ, ಮಾತನಾಡಲು ಷರತ್ತುಬದ್ಧ ಅನುಮತಿಯನ್ನು ಕೋಲ್ಕತ್ತಾ ಕೋರ್ಟ್​ ನೀಡಿತ್ತು. ಈ ಹಿನ್ನೆಲೆ ಈ ಹೋರಾಟದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಹೂಗ್ಲಿಗೆ ತೆರಳುತ್ತಿದ್ದ ಶಾಸಕನ ಕಾರಿನ ಮೇಲೆ ಈ ದಾಳಿ ನಡೆದಿದೆ. ಇದರಿಂದಾಗಿ ಅವರು ಕೋಲ್ಕತ್ತಾಗೆ ವಾಪಸ್ ಮರಳಿದ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಮೊದಲಿಗೆ ಕುನಾಲ್​ ಘೋಷ್​ ಅವರು ತೆರಳುತ್ತಿದ್ದ ಕಾರನ್ನು ಜನರು ತಡೆದಿದ್ದಾರೆ. ನಂತರ ಒಬ್ಬರ ನಂತರ ಮೊಟ್ಟೆ ಹೊಡೆದಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಕುನಾಲ್ ಕೈಮುಗಿದಿದ್ದಾರೆ. ಇಷ್ಟಾದರೂ ಸುಮ್ಮನಿರದ ಜನ ಕ್ರಮೇಣವಾಗಿ ಮೊಟ್ಟೆಗಳನ್ನು ಎಸೆದಿದ್ದಾರೆ. ಮಹಿಳೆ ಮತ್ತು ಯುವಕನೊಬ್ಬ ಅವರ ಕಾರಿನ ಎಂಜಿನ್​​ ಭಾಗದ ಡೋರ್​ಗೆ ಬಡಿದಿದ್ದಾರೆ. ಕುನಾಲ್​ ಘೋಷ್​ ವಾಪಸ್ ಹೋಗಿ ಎಂದು ಘೋಷಣೆಗಳನ್ನು ಕೂಗಿರುವುದು ವಿಡಿಯೋದಲ್ಲಿದೆ. ಅವರ ಕಾರಿನಹಿಂಭಾಗದ ಕಿಡಕಿ ಗಾಜನ್ನು ಗುಂಪು ಪುಡಿ ಮಾಡಿದೆ ಎನ್ನಲಾಗಿದೆ.

ಕುನಾಲ್​ ಹೇಳಿದ್ದೇನು ?

'ನಾನು ರ‍್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದೆ. ನನ್ನ ಕಾರನ್ನು ಅಡ್ಡ ಹಾಕಿದ ಗುಂಪೊಂದು, ಏಕಾಏಕಿ ಮೊಟ್ಟೆ ಹಾಗೂ ಕಲ್ಲು ಎಸೆದರು. ನಾನು ಹೋಗದಂತೆ ತಡೆದು, ರಸ್ತೆ ಬ್ಲಾಕ್​ ಮಾಡಿದರು. ರಕ್ಷಣೆ ಕೋರಲು ಅಲ್ಲಿ ಪೊಲೀಸರು ಇರಲಿಲ್ಲ. ಕಾರಿನ ಹಿಂಬದಿ ಗಾಜು ಪುಡಿಯಾಗಿದೆ. ಇದು ಬಿಜೆಪಿ ತಂತ್ರ,. ಬೇಕಂತಲೆ ಈ ದಾಳಿ ನಡೆಸಲು ಪ್ರೇರೇಪಿಸಿದೆ. ನಾನೀಗ ವಾಪಸ್ ಕೋಲ್ಕತ್ತಾಗೆ ತೆರಳುತ್ತಿದ್ದೇನೆ' ಎಂದು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದಿಷ್ಟು

ಸೆರಾಂ ಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರಳದಂತೆ ಬಿಜೆಪಿ ಗೂಂಡಾಗಳು ತಡೆಯುತ್ತಿದ್ದಾರೆ. ಆಫ್ರೀಕಾದಲ್ಲಿಯೂ ಇಂತಹ ಘಟನೆ ನಡೆಯೋದಿಲ್ಲ. ಆಡಳಿತ ಪಕ್ಷ ನಮ್ಮ ಪ್ರತಿಭಟನೆಯನ್ನು ತಡೆಯಲು ಯತ್ನಿಸುತ್ತಿದೆ. ನಮ್ಮ ನಾಯಕರನ್ನು ರ್ಯಾಲಿ ನಡೆಯುವ ಸ್ಥಳಕ್ಕೆ ತೆರಳಲು ಬಿಡುತ್ತಿಲ್ಲ. ನನ್ನನ್ನು ಸಹ ಗೃಹಬಂಧನದಲ್ಲಿರಿಸಿದೆ. ಹೊರ ಹೋಗಲು ಬಿಡುತ್ತಿಲ್ಲ. ಇದು ಸಾಮಾನ್ಯ ಜನರು ನಡೆಸುತ್ತಿರುವ ಹೋರಾಟವಲ್ಲ. ಬದಲಾಗಿ ಆಡಳಿತ ಸರ್ಕಾರ ಪೂರ್ವ ನಿಯೋಜಿತವಾಗಿ ನಡೆಸುತ್ತಿರುವ ದಾಳಿ ಎಂದು ಕಿಡಿಕಾರಿದರು.

ಬಿಜೆಪಿ ಸ್ಪಷ್ಟನೆ ಏನು?

ಬಿಜೆಪಿ ಶಾಸಕ ದೀಪಾಂಜನ್ ಚಕ್ರವರ್ತಿ ಮಾತನಾಡಿ, ಇದು ನಾವು ಹೋರಾಟ ಮಾಡಿ ಎಂದು ಹೇಳಿದ್ದಕ್ಕೆ ಮಾಡಿದ ಪ್ರತಿಭಟನೆಯಲ್ಲ. ಸಾರ್ವಜನಿಕರೇ ತಮ್ಮ ಇಚ್ಛೆಯಂತೆ ನಡೆಸಿದ ಪ್ರತಿಭಟನೆ ಇದಾಗಿದೆ. ನಿಮ್ಮ ಆಡಳಿತಾವಧಿ ಕಾಲದಲ್ಲಿ ಜನರು ಅನುಭವಿಸಿದ ನೋವನ್ನು ಹೊರಹಾಕಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು.

ಟಿಎಂಸಿ ನಾಯಕರ ಮೇಲೆ ಮೊಟ್ಟೆ ದಾಳಿ

ಮೇನಲ್ಲಿ ನಡೆದ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನುಭವಿಸಿತು. ಬಿಜೆಪಿ ದಶಕಗಳ ನಂತರ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಈ ತಿಂಗಳ ಆರಂಭದಲ್ಲಿ ಸಂಸದೆ ಮಹುವಾ ಮೊಯಿತ್ರಾ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ದಾಳಿ ನಡೆಸಿದ್ದರು. ದಕ್ಷಿಣ 24 ಪರಗಣ ಜಿಲ್ಲೆಗೆ ಜೂನ್​ನಲ್ಲಿ ಭೇಟಿ ಕೊಡಲು ತೆರಳುತ್ತಿದ್ದ ಅಭಿಷೇಕ್​ ಬ್ಯಾನರ್ಜಿ ಕಾರಿನ ಮೇಲೆಯೂ ಮೊಟ್ಟೆ ದಾಳಿ ನಡೆದಿತ್ತು. ಮದನ್​ ಮಿತ್ರಾ, ಕಾಜಲ್​ ಘೋಷ್​, ಬಪ್ಪಾದಿತ್ಯಾ ದಾಸ್ಗುಪ್ತಾ ಅವರ ಮೇಲೆಯೂ ಮೊಟ್ಟೆ ದಾಳಿ ನಡೆದಿತ್ತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net