ಆರ್‌ಜಿ ಕರ್ ಕೇಸ್: ಟಿಎಮ್‌ಸಿ ಮಾಜಿ ಶಾಸಕನಿಗೆ ಚಪ್ಪಲಿ ಹಾರ, ಮೊಟ್ಟೆ ದಾಳಿ! ಪೊಲೀಸರ ವಶದಲ್ಲಿದ್ದಾಗಲೇ ಕಾದಿತ್ತು ಧರ್ಮದೇಟು! | RG Kar Case

RG Kar Case | ಟಿಎಮ್‌ಸಿ ಮಾಜಿ ಶಾಸಕನಿಗೆ ಚಪ್ಪಲಿ ಹಾರ, ಮೊಟ್ಟೆ ದಾಳಿ!
RG Kar Case | ಟಿಎಮ್‌ಸಿ ಮಾಜಿ ಶಾಸಕನಿಗೆ ಚಪ್ಪಲಿ ಹಾರ, ಮೊಟ್ಟೆ ದಾಳಿ!
Published on

2024ರ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (RG Kar Case) ಸಂತ್ರಸ್ತೆಯ ಆತುರದ ಶವಸಂಸ್ಕಾರಕ್ಕೆ ನೆರವಾದ ಆರೋಪದಡಿ ಬಂಧಿತರಾಗಿರುವ ಟಿಎಮ್‌ಸಿ ಮಾಜಿ ಶಾಸಕ ನಿರ್ಮಲ್ ಘೋಷ್, ಪೊಲೀಸರ ವಶದಲ್ಲಿದ್ದಾಗಲೇ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಆಕ್ರೋಶಗೊಂಡ ಜನರ ಗುಂಪು ಘೋಷ್​ ಮೇಲೆ ಮೊಟ್ಟೆ ಮತ್ತು ಕೆಸರನ್ನು ಎರಚಿ ದಾಳಿ ಮಾಡಿದೆ. ಈ ಘಟನೆ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದ್ದು, ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಶಾಸಕರಾದ ಘೋಷ್​​ರನ್ನು ಭದ್ರತೆಯಲ್ಲಿ ಸ್ಥಳೀಯ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ಠಾಣೆಯ ಹೊರಗೆ ಬೃಹತ್ ಜನಸ್ತೋಮ ಜಮಾಯಿಸಿತ್ತು.

ಚೋರ್​ ಚೋರ್​ ಘೋಷಣೆ!...

ಮೊಟ್ಟೆಗಳಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿದ್ದ ಘೋಷ್​ರನ್ನು ಬೆನ್ನಟ್ಟಿದ ಜನಸಮೂಹವು ಚಪ್ಪಲಿ ಮತ್ತು ಶೂಗಳ ಹಾರ ಹಾಕಿ, ಹಲ್ಲೆ ನಡೆಸಿತು. ಈ ವೇಳೆ ಪೊಲೀಸರು ಅವರನ್ನು ಕಷ್ಟಪಟ್ಟು ಪೊಲೀಸ್ ವ್ಯಾನ್ ಕಡೆಗೆ ಕರೆದೊಯ್ಯಬೇಕಾಯಿತು. ನಂತರ, ಅವರನ್ನು ಹಾಜರುಪಡಿಸುತ್ತಿದ್ದ ನ್ಯಾಯಾಲಯದ ಆವರಣದ ಹೊರಗೂ ಸಹ ಜನರು ಅವರ ವಿರುದ್ಧ ಚೋರ್, ಚೋರ್ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಇವರೊಂದಿಗೆ ಸಹ-ಆರೋಪಿಗಳಾದ ಪಾಣಿಹಾಟಿ ಪುರಸಭೆ ಕೌನ್ಸಿಲರ್ ಸೋಮನಾಥ್ ಡೇ ಮತ್ತು ಸಂತ್ರಸ್ತೆಯ ಕುಟುಂಬದ ನೆರೆಹೊರೆಯವರಾದ ಸಂಜೀವ್ ಮುಖರ್ಜಿ ಅವರಿಗೂ ಜನರಿಂದ ಇದೇ ರೀತಿಯ ಅನುಭವವಾಯಿತು.

ಸಾಕ್ಷ್ಯ ನಾಶ, ಕ್ರಿಮಿನಲ್ ಪಿತೂರಿ ಮತ್ತು ವ್ಯಕ್ತಿಯೋರ್ವನಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡಿಸಿದ ಆರೋಪದ ಮೇಲೆ ಘೋಷ್​ರನ್ನು ಗುರುವಾರದಂದು ಒಡಿಶಾದ ಸಂಭಲ್‌ಪುರದಿಂದ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಪಾಣಿಹಾಟಿ ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಆ ಕ್ಷೇತ್ರವನ್ನು ಪ್ರಸ್ತುತ ಮೃತ ವೈದ್ಯೆಯ ತಾಯಿ ಹಾಗೂ ಬಿಜೆಪಿ ಶಾಸಕಿ ರತ್ನಾ ದೇಬ್‌ನಾಥ್ ಪ್ರತಿನಿಧಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾದ ಎರಡು ದಿನಗಳ ನಂತರ ಘೋಷ್ ಬಂಧನವಾಗಿದೆ.

ಸೋಮವಾರ ಸಂತ್ರಸ್ತೆಯ ತಂದೆ ನೀಡಿದ ಹೊಸ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದೆ. ತಮ್ಮ ಮಗಳ ಮೃತದೇಹವನ್ನು ಅತುರಾತುರದಲ್ಲಿ ಶವಸಂಸ್ಕಾರ ಮಾಡುವಂತೆ ಬಲವಂತಪಡಿಸಿದ ಮೂವರಲ್ಲಿ ಘೋಷ್ ಕೂಡ ಒಬ್ಬರು ಎಂದು ದೂರುದಾರರು ಆರೋಪಿಸಿದ್ದಾರೆ.

ವೈದ್ಯೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸಿಎಂ ಸುವೇಂದು ಪ್ರತ್ಯಕ್ಷ

ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯನ್ನು ತಡೆಯಲು ಮತ್ತು ಆ ಮೂಲಕ ಸಾಕ್ಷ್ಯಾಧಾರಗಳನ್ನು ಮುಚ್ಚಿಹಾಕಲು ಈ ಮೂವರ ಮೇಲ್ವಿಚಾರಣೆಯಲ್ಲಿ ಅನಗತ್ಯ ಅವಸರದಲ್ಲಿ ಮಗಳ ಶವಸಂಸ್ಕಾರ ನಡೆಸಲಾಯಿತು ಎಂದು ವೈದ್ಯೆಯ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ರವಿವಾರ ಪಾಣಿಹಾಟಿಯಲ್ಲಿ ನಡೆದ ವೈದ್ಯೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಅವರು, ಶವಸಂಸ್ಕಾರದ ಕುರಿತು ಹೊಸ ತನಿಖೆ ಆರಂಭಿಸುವಂತೆ ಬ್ಯಾರಕ್‌ಪೋರ್ ಪೊಲೀಸ್ ಕಮಿಷನರ್‌ಗೆ ನಿರ್ದೇಶನ ನೀಡಿದ್ದರು.
ಬ್ಯಾರಕ್‌ಪೋರ್ ಪೊಲೀಸ್ ಕಮಿಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಈ ಹೊಸ ಪ್ರಕರಣವು ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯ ಕುರಿತು ಸಿಬಿಐ ನಡೆಸುತ್ತಿರುವ ತನಿಖೆಗಿಂತ ಭಿನ್ನವಾಗಿದ್ದು, ಕೋಲ್ಕತ್ತಾ ಪೊಲೀಸರ ವ್ಯಾಪ್ತಿಗೆ ಬರುವ ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಖರ್ದಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಹೊಸ ಎಫ್‌ಐಆರ್‌ಗಳು, ಸಾಕ್ಷ್ಯಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಕುಟುಂಬಸ್ಥರ ಒಪ್ಪಿಗೆಯಿಲ್ಲದೆ ಆತುರದಲ್ಲಿ ಶವಸಂಸ್ಕಾರ ಮಾಡಲಾಗಿದೆ ಎಂದು ಮೃತರ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ದಾಖಲಾಗಿವೆ ಎಂದು ಆ ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net