ಸಂಪಾದಕೀಯ | ಕಾರ್ವಿುಕರ ಹಿತ ಮುಖ್ಯ

ಸಂಪಾದಕೀಯ ಅಂಕಣ
ಸಂಪಾದಕೀಯ ಅಂಕಣ
Published on

ಬೆಂಗಳೂರು: ನ್ಯಾಯಯುತ ವೇತನ, ಸಾಮಾಜಿಕ ಸುರಕ್ಷತೆ ಮತ್ತು ಮಾನವೀಯ ಉದ್ಯೋಗ ವಾತಾವರಣಕ್ಕೆ ಆಗ್ರಹಿಸಿ ಗಿಗ್ ಕಾರ್ವಿುಕರು ಕ್ರಿಸ್ವುಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದರು. ಅವರಿಗೆ ಶುಭ ಸುದ್ದಿ ಎಂಬಂತೆ, ಗಿಗ್ ಕಾರ್ವಿುಕರಿಗೆ ಸಾಮಾಜಿಕ ಸುರಕ್ಷತೆ ಒದಗಿಸುವ ಉದ್ದೇಶದ ಕಾರ್ವಿುಕ ಸಂಹಿತೆಯ ಕರಡು ನಿಯಮಗಳನ್ನು ಕೇಂದ್ರದ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯವು ಶುಕ್ರವಾರ ಸಾರ್ವಜನಿಕ ಅವಗಾಹನೆಗೆ ಬಿಡುಗಡೆ ಮಾಡಿದೆ. 

ಗಿಗ್ ಕಾರ್ವಿುಕನೊಬ್ಬ ಫಲಾನುಭವಿಯಾಗಲು ಈ ಕರಡು ನಿಯಮದ ಕೆಲ ಪ್ರಮುಖ ಅಂಶಗಳು ಹೀಗಿವೆ...

ಏಕ ಅಗ್ರಿಗೇಟರ್ ಜತೆಗೆ ಕನಿಷ್ಠ 90 ದಿನ ಕಾರ್ಯನಿರ್ವಹಿಸಿರಬೇಕು. ಬಹು ಅಗ್ರಿಗೇಟರ್ ಬಳಿ ಕೆಲಸ ಮಾಡುತ್ತಿದ್ದರೆ ಕನಿಷ್ಠ 120 ದಿನ ಆಗಿರಬೇಕು; ಆಧಾರ್ ಮತ್ತು ಇತರ ದಾಖಲೆಗಳ ಮೂಲಕ ನೋಂದಾಯಿಸಿಕೊಳ್ಳಬೇಕು. ಗಿಗ್ ಕಾರ್ವಿುಕರಿಗೆ ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪಿಸಲಾಗುವುದು, ಇದಕ್ಕೆ ಅಗ್ರಿಗೇಟರ್ಗಳೂ ಕೊಡುಗೆ ನೀಡಬೇಕು. ಇದರ ನಿರ್ವಹಣೆಗೆ ಕೇಂದ್ರ ಸರ್ಕಾರವು ಅಧಿಕಾರಿಯನ್ನು ನೇಮಿಸುತ್ತದೆ.

ನೋಂದಾಯಿತ ಉದ್ಯೋಗಿಗಳಿಗೆ 60 ವರ್ಷ ವಯಸ್ಸಾದಾಗ ಸಾಮಾಜಿಕ ಸುರಕ್ಷತಾ ಪ್ರಯೋಜನದ ಫಲಾನುಭವಿಯಾಗಲು ಅರ್ಹರಾಗುತ್ತಾರೆ. ಒಟ್ಟಾರೆ ಯೋಜನೆಯ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಸಾಮಾಜಿಕ ಸುರಕ್ಷಾ ಮಂಡಳಿಯನ್ನು ಸ್ಥಾಪಿಸಲಿದ್ದು, ಇದರಲ್ಲಿ ರೊಟೇಶನ್ ಆಧಾರದ ಮೇಲೆ ಗಿಗ್ ಮತ್ತು ಪ್ಲಾಟ್ಫಾಮ್ರ್ ಉದ್ಯೋಗಿಗಳನ್ನು ಸಹ ನೇಮಿಸುತ್ತದೆ.

ಕರ್ನಾಟಕದಲ್ಲಿ ಈಗಾಗಲೇ ‘ಕರ್ನಾಟಕ ಪ್ಲಾಟ್​ಫಾರ್ಮ್​ ಆಧಾರಿತ ಗಿಗ್ ಕಾರ್ವಿುಕರ ಮಸೂದೆ (ಸಾಮಾಜಿಕ ಸುರಕ್ಷತೆ ಮತ್ತು ಕಲ್ಯಾಣ), 2025’ ಅನ್ನು ಅಂಗೀಕರಿಸಿರುವುದು ಇಲ್ಲಿ ಉಲ್ಲೇಖನೀಯ. ಇದರ ಪ್ರಕಾರ, ಗಿಗ್ ಕಾರ್ವಿುಕರ ಮಂಡಳಿಯನ್ನು ರಚಿಸಿ, ಕಾರ್ವಿುಕರ ಕಲ್ಯಾಣಕ್ಕೆ ನಿಧಿಯನ್ನೂ ಸ್ಥಾಪಿಸಲಾಗುತ್ತದೆ. ಈ ಮಂಡಳಿಯಲ್ಲಿ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಹಾಗೂ ಅಗ್ರಿಗೇಟರ್ ಕಂಪನಿ-ಗಿಗ್ ಕಾರ್ವಿುಕರ ಪ್ರತಿನಿಧಿಗಳು ಇರುತ್ತಾರೆ. 

ಗಿಗ್ ಕಾರ್ವಿುಕರು ಹಾಗೂ ಅಗ್ರಿಗೇಟರ್ಗಳ ನೋಂದಣಿ ಮತ್ತು ಸಾಮಾಜಿಕ ಸುರಕ್ಷತಾ ಯೋಜನೆಗಳ ಜಾರಿಯ ಮೇಲ್ವಿಚಾರಣೆ ಮುಂತಾದ ಜವಾಬ್ದಾರಿಯನ್ನು ಈ ಮಂಡಳಿ ಹೊಂದಿರುತ್ತದೆ. ಬದಲಾದ ಕಾಲಘಟ್ಟ ಮತ್ತು ಜೀವನಶೈಲಿಯ ಹಿನ್ನೆಲೆಯಲ್ಲಿ ಭಿನ್ನ ಸೇವಾ ವಲಯಗಳು ಸೃಷ್ಟಿಯಾಗುತ್ತಿವೆ ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳೂ ಇಲ್ಲಿ ದೊರೆಯುತ್ತಿವೆ. ಹೀಗಾಗಿ ಅಂಥ ವಲಯದಲ್ಲಿ ತೊಡಗಿರುವ ಕಾರ್ವಿುಕರ ಹಿತರಕ್ಷಣೆಯತ್ತ ಸರ್ಕಾರಗಳು ಆಲೋಚಿಸಿ ಕಾರ್ಯ ಪ್ರವೃತ್ತವಾಗಬೇಕಾಗುತ್ತದೆ. 

ಈ ದಿಕ್ಕಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಡೆಯಿಂದ ಒಂದಷ್ಟು ಕೆಲಸಕಾರ್ಯಗಳಾಗುತ್ತಿರುವುದು ಗಮನಾರ್ಹ. ಯಾವುದೇ ದೇಶದಲ್ಲಿ ನಿರುದ್ಯೋಗ ಪ್ರಮಾಣ ಅಧಿಕವಾದರೆ ಅದರಿಂದ ನಾನಾ ಸಮಸ್ಯೆಗಳು ಉದ್ಭವಿಸುತ್ತವೆ. ಎಲ್ಲರಿಗೂ ಸರ್ಕಾರಿ ನೌಕರಿ ದೊರೆಯುವುದು ಅಸಾಧ್ಯ. ಖಾಸಗಿ ವಲಯದ ಅವಲಂಬನೆ ಅನಿವಾರ್ಯ. ಇದೇ ವೇಳೆ, ಇನ್ನೊಂದು ಸಂಗತಿಯತ್ತಲೂ ಗಮನಿಸಬೇಕಾದ್ದು ಅನಿವಾರ್ಯ. ವಿಶೇಷವಾಗಿ ಫುಡ್ ಡೆಲಿವರಿ ಅಗ್ರಿಗೇಟರ್ಗಳು 10 ನಿಮಿಷ, 15 ನಿಮಿಷದಲ್ಲಿ ವಿತರಣೆ ಮಾಡುವುದಾಗಿ ಘೋಷಿಸಿರುತ್ತವೆ. 

ಈ ಅವಧಿಯೊಳಗಡೆ ವಿತರಣೆ ಮಾಡುವ ಧಾವಂತದಲ್ಲಿ ಗಿಗ್ ಕಾರ್ವಿುಕರು ವೇಗದಿಂದ ವಾಹನ ಚಲಾಯಿಸುವುದರಿಂದ ಸಮಸ್ಯೆಗಳಾಗುತ್ತಿವೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳೂ ದೊಡ್ಡ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿಯೂ ಸಂಬಂಧಪಟ್ಟವರು ಗಮನಹರಿಸಬೇಕಾದ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net