ಸಂಪಾದಕೀಯ: ಯಾರು ಹೊಣೆ?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಉಚಿತವಾಗಿ ಸಿಗಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜೀವರಕ್ಷಕ ಔಷಧಗಳು ಗೋದಾಮುಗಳಲ್ಲೇ ಕೊಳೆತು, ಅವಧಿ ಮೀರಿ ಬೀದಿಪಾಲಾಗಿರುವ ಘಟನೆ ನಿಜಕ್ಕೂ ಶೋಚನೀಯ. ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್​ಎಂಎಸ್​ಸಿಎಲ್) ಬೇಜವಾಬ್ದಾರಿಯಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ -ಠಿ;79 ಕೋಟಿ ಮೌಲ್ಯದ 375 ಬಗೆಯ ಔಷಧಗಳು ಬಳಕೆಯಾಗದೆ ನಾಶವಾಗಿರುವುದು ಆಡಳಿತ ವ್ಯವಸ್ಥೆಯ ಅಕ್ಷಮ್ಯ ನಿರ್ಲಕ್ಷ ್ಯ್ಕೆ ಸ್ಪಷ್ಟ ನಿದರ್ಶನ. ನಿಗಮವು ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಮೌಲ್ಯದ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಆಂಟಿಬಯೋಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸೇರಿ ವಿವಿಧ ಜೀವರಕ್ಷಕ ಔಷಧಗಳನ್ನು ಖರೀದಿಸಿ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಪೂರೈಸುವ ಜವಾಬ್ದಾರಿ ಹೊತ್ತಿಕೊಂಡಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಪ್ಯಾರಾಸಿಟಮಾಲ್​ನಿಂದ ಹಿಡಿದು ತುರ್ತು ಚಿಕಿತ್ಸೆಯ ಜೀವರಕ್ಷಕ ಮಾತ್ರೆ, ಚುಚ್ಚುಮದ್ದುಗಳ ಕೊರತೆ ಸಾಮಾನ್ಯವಾಗಿದೆ. ಖಾಸಗಿ ಮೆಡಿಕಲ್ ಶಾಪ್​ಗಳಿಗೆ ಚೀಟಿ ಬರೆದುಕೊಡುವ ವೈದ್ಯರ ಅಸಹಾಯಕತೆ, ಕೈಯಲ್ಲಿ ಕಾಸಿಲ್ಲದೆ ಪರದಾಡುವ ಬಡ ರೋಗಿಗಳ ಗೋಳು ನಿತ್ಯದ ದೃಶ್ಯವಾಗಿದೆ. ಹೀಗಿರುವಾಗ, ತೆರಿಗೆದಾರರ ಸಾರ್ವಜನಿಕ ಹಣದಲ್ಲಿ ಖರೀದಿಸಿದ ಔಷಧಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗಳಿಗೆ ತಲುಪದೆ ಉಗ್ರಾಣಗಳಲ್ಲಿಯೇ ಧೂಳು ಹಿಡಿದು ನಾಶವಾಗುತ್ತಿರುವುದು ವ್ಯವಸ್ಥೆಯು ಬಡಜನರಿಗೆ ಎಸಗಿದ ಘೊರ ದ್ರೋಹವಲ್ಲದೆ ಇನ್ನೇನು?

ಅಗತ್ಯ ಮತ್ತು ಬೇಡಿಕೆಯ ಸ್ಪಷ್ಟ ಅಂದಾಜಿಲ್ಲದೆ, ಕೇವಲ ಕಮಿಷನ್ ದಂಧೆ ಅಥವಾ ಗುರಿ ಮುಟ್ಟಿಸುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಔಷಧಗಳನ್ನು ಖರೀದಿಸುವ ಪ್ರವೃತ್ತಿಯನ್ನು ಕೊನೆಗಾಣಿಸಬೇಕಿದೆ. ಉಗ್ರಾಣಗಳಿಗೆ ಬಂದ ದಾಸ್ತಾನನ್ನು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಸಮಯಕ್ಕೆ ಸರಿಯಾಗಿ ಹಂಚಿಕೆ ಮಾಡುವ ಸಮರ್ಥ ವಿತರಣಾ ವ್ಯವಸ್ಥೆ ಇಲ್ಲದಿರುವುದು ಕೂಡ ಈ ಅಪಸವ್ಯಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ನಿಗಾ ಮತ್ತು ಉತ್ತರದಾಯಿತ್ವದ ಕೊರತೆ ಸ್ಪಷ್ಟವಾಗಿ ಕಂಡುಬರುತ್ತಿದ್ದು, ಅವಧಿ ಮುಗಿಯುವ ಹಂತದಲ್ಲಿರುವ ಔಷಧಗಳನ್ನು ಮೊದಲೇ ಗುರುತಿಸಿ ಬಳಸುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿಲ್ಲ. ಕೇವಲ ಇಲಾಖಾ ಮಟ್ಟದ ತನಿಖೆಯ ನೆಪವೊಡ್ಡಿ ಕಿರಿಯ ಹಂತದ ಸಿಬ್ಬಂದಿಯನ್ನು ಬಲಿಪಶು ಮಾಡಿ ಕೈತೊಳೆದುಕೊಳ್ಳುವ ಪರಿಪಾಠ ನಿಲ್ಲಬೇಕು. ಈ ಬೃಹತ್ ನಷ್ಟ ಹಾಗೂ ಜೀವವಿರೋಧಿ ನಿರ್ಲಕ್ಷ ್ಯ್ಕೆ ಕಾರಣರಾದ ಉನ್ನತ ಅಧಿಕಾರಿಗಳು ಮತ್ತು ಖರೀದಿಯ ಹಿಂದಿನ ಪ್ರಭಾವಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇನ್ನಾದರೂ ಸರ್ಕಾರ ಎಚ್ಚೆತ್ತು ಔಷಧ ಸಂಗ್ರಹಣೆ ಹಾಗೂ ವಿತರಣೆಯನ್ನು ಸಂಪೂರ್ಣ ಗಣಕೀಕೃತ (ಡ್ಯಾಶ್​ಬೋರ್ಡ್) ವ್ಯವಸ್ಥೆಗೆ ಒಳಪಡಿಸಿ, ಪಾರದರ್ಶಕತೆ ತರಬೇಕಿದೆ. ಔಷಧಗಳು ಆಸ್ಪತ್ರೆಗಳ ಕಪಾಟಿನಿಂದ ರೋಗಿಗಳ ಕೈಗೆ ಸೇರಬೇಕೇ ಹೊರತು, ಕಸದ ಬುಟ್ಟಿಗೆ ಸೇರಬಾರದು. ಅಂತೆಯೇ ನಕಲಿ ಹಾಗೂ ಕಳಪೆ ಔಷಧಗಳನ್ನು ವಿತರಿಸುವ ಕಂಪನಿಗಳ ಕರಾಳ ಜಾಲ ವಿಸ್ತರಿಸುತ್ತಲೇ ಇರುವುದು ಆತಂಕ ಮೂಡಿಸಿದೆ. ಇವು ಜನರ ಆರೋಗ್ಯದ ಮೇಲೆ ಮಾರಿಕ ಪರಿಣಾಮ ಬೀರುತ್ತಿವೆ. ನಕಲಿ ಹಾಗೂ ಕಳಪೆ ಔಷಧಗಳು ಮತ್ತು ಇವುಗಳನ್ನು ಪೂರೈಸುವ ಕಂಪನಿಗಳ ವಿರುದ್ಧವೂ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net