ಸಂಪಾದಕೀಯ | ಸ್ವಾಗತಾರ್ಹ ಕ್ರಮ

welcome-move
welcome-move
Published on
ಮೂರು ದಿನಗಳ ಕಾಲ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಗುರುವಾರ ತೆರೆ ಬಿದ್ದಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಗುರುತುಗಳನ್ನು ದಾಖಲಿಸಿರುವ ಬೆಂಗಳೂರು ಈ ಶೃಂಗಸಭೆಯ ಮೂಲಕ ತನ್ನ ಶಕ್ತಿ ಮತ್ತು ಸಾಧ್ಯತೆಗಳನ್ನು ಪ್ರದರ್ಶಿಸಿತು. ಐಟಿ ಉದ್ಯಮ ವಿಸ್ತಾರಕ್ಕೆ ರಾಜ್ಯ ಹಲವು ಅವಕಾಶಗಳನ್ನು ಹೊಂದಿದೆ. ಇದನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡು ಮಾಹಿತಿ&ತಂತ್ರಜ್ಞಾನ ಉದ್ಯಮವನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಮತ್ತು ಇದಕ್ಕಾಗಿ "ನಿಪುಣ ಕರ್ನಾಟಕ' ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ.
ಸ್ಥಳಿಯ ಆರ್ಥಿಕ ಉತ್ತೇಜನ ಕಾರ್ಯಕ್ರಮವನ್ನು (ಲೀಪ್​) ಉನ್ನತಿಕರಿಸಿ ಎರಡನೇ ಹಂತದ ನಗರಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಉದ್ಯಮಗಳೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಯೋಜನೆಗಳ ಪ್ರಸ್ತಾವನೆಯೊಂದಿಗೆ ಆಶಯ ಪತ್ರಕ್ಕೆ (ಎಲ್​ಐಒ) ಆರು ಪ್ರಮುಖ ಕಂಪನಿಗಳು ಸಹಿ ಹಾಕಿವೆ. ಒಟ್ಟು 2,600 ಕೋಟಿ ರೂ. ಹೂಡಿಕೆ ಉದ್ದೇಶದ ಈ ಒಡಂಬಡಿಕೆಯಡಿ 3500 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಮೂಲಕ ಎರಡನೇ ಹಂತದ ನಗರಗಳಲ್ಲಿ ಉದ್ಯೋಗಸೃಷ್ಟಿ ಜತೆಗೆ ಆರ್ಥಿಕ ಚಟುವಟಿಕೆಗಳು ವೇಗ ಪಡೆಯಲಿವೆ.
"ಬೆಂಗಳೂರಿನ ಆಚೆಗೆ ಮಾಹಿತಿ& ತಂತ್ರಜ್ಞಾನ ಉದ್ಯಮವನ್ನು ವಿಸ್ತರಿಸಲು ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಇದರ ಭಾಗವಾಗಿಯೇ ಕೌಶಲ ತರಬೇತಿ ಮತ್ತು ಉದ್ಯೋಗ ಒದಗಿಸುವ ನಿಪುಣ, ಲೀಪ್​ ಯೋಜನೆಗೆ ಒತ್ತು ನೀಡಲಾಗಿದೆ, ಕೃತಕ ಬುದ್ಧಿಮತ್ತೆ, ಸೈಬರ್​ ಸುರಕ್ಷತೆ, ಡೇಟಾ ಸೈನ್ಸ್​ ಕ್ಷೇತ್ರಗಳಲ್ಲಿ ತರಬೇತಿ ನೀಡಿ ಹೆಚ್ಚಿನ ಉದ್ಯೋಗಸೃಷ್ಟಿ ನಿರೀಸಲಾಗಿದೆ' ಎಂದು ಮಾಹಿತಿ&ತಂತ್ರಜ್ಞಾನ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ. 450ಕ್ಕೂ ಹೆಚ್ಚು ನವೋದ್ಯಮಗಳು ಬೆಂಗಳೂರಿನ ಆಚೆಗಿನ ಮಂಗಳೂರು, ಮೈಸೂರು, ಹುಬ್ಬಳ್ಳಿ&ಧಾರವಾಡ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ.
ರಾಜ್ಯದ ಬೃಹತ್​ ಕೈಗಾರಿಕಾ ವಲಯದಲ್ಲೂ ಬಂಡವಾಳ ಹೂಡಿಕೆ ಆಕರ್ಷಿಸಲು ಪೂರಕ ಕ್ರಮಗಳಾಗುತ್ತಿರುವುದು, ಹೊಸ ಕ್ಷೇತ್ರಗಳನ್ನು ಆಕರ್ಷಿಸುತ್ತಿರುವುದು ವಿಕಾಸದ ವೇಗವನ್ನು ವೃದ್ಧಿಸಲಿದೆ. ಈ ನಿಟ್ಟಿನಲ್ಲಿ ಬೃಹತ್​ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್​ ಅವರು ಭಾರತದಲ್ಲಿನ ಅಮೆರಿಕನ್​ ಕಾನ್ಸುಲ್​ ಜನರಲ್​ ಕ್ರಿಸ್​ ಹಾಡ್ಜಸ್​, ಪೋಲೆಂಡ್​ ದೇಶದ ಡಿಜಿಟಲೀಕರಣ ಖಾತೆ ಸಹಾಯಕ ಸಚಿವ ರಫಾಲ್​ ರೊಸಿನ್ಸ್ಕಿ, ಬವೇರಿಯಾದ ಪ್ರಾಂತೀಯ ಸಂಸತ್ತಿನ ಅಧ್ಯಕ್ಷೆ ಐಲ್​ ಏಗ್ನರ್​, ಅಮೆರಿಕದ ಉತಾ ಪ್ರಾಂತ್ಯದ ಸೆನೆಟ್​ ಅಧ್ಯಕ್ಷ ಜಬೇಜ್​ ಸ್ಟುವರ್ಟ್​ ಆ್ಯಡಮ್ಸ್​, ಆಸ್ಟ್ರೆಲಿಯಾದ ಕಾನ್ಸುಲ್​ ಜನರಲ್​ ಹಿಲರಿ ಮೆಕ್​&ಗೀಚಿ, ಸಿಂಗಾಪುರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಗಾನ್​ ಸಿಯೋವೋ ಹುವಾಂಗ್​ ಮುಂತಾದವರ ನೇತೃತ್ವದ ನಿಯೋಗಗಳ ಜತೆಯೂ ಇತ್ತೀಚಿನ ದಿನಗಳಲ್ಲಿ ಮಾತುಕತೆ ನಡೆಸಿ ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಪ್ರಯತ್ನ ಮಾಡಿರುವುದು ಶ್ಲಾಘನೀಯ.
ಅಲ್ಲದೆ, ಇಂಗ್ಲೆಂಡಿನ ಪ್ರಮುಖ ಕಂಪನಿಗಳಿಂದ ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸಚಿವ ಎಂ.ಬಿ.ಪಾಟೀಲ್​ ನವೆಂಬರ್​ 24ರಿಂದ 26ರವರೆಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಲಂಡನ್​ಗೆ ಭೇಟಿ ನೀಡುತ್ತಿರುವುದು ಮಹತ್ವದ ಬೆಳವಣಿಗೆ.
ಕೈಗಾರಿಕಾ ವಲಯದ ಸಮಗ್ರ ಬೆಳವಣಿಗೆ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ವಾತಾವರಣವನ್ನು ಕರ್ನಾಟಕ ಹೊಂದಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ರಾಜ್ಯದ ಆರ್ಥಿಕ ಮತ್ತು ಉದ್ಯೋಗ ಶಕ್ತಿ ಹೆಚ್ಚಿಸಲು ನೆರವಾಗಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net