ಸಂಪಾದಕೀಯ: ಸಮರದಿಂದ ಸುಖವಿಲ್ಲ

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಸಮರ ಸಾರಿ ಮೂರು ತಿಂಗಳ ಮೇಲಾಯಿತು. ಎರಡೂ ಕಡೆ ಅಪಾರ ಹಾನಿಯುಂಟಾಗಿದ್ದು, ಸಾವುನೋವುಗಳು ಸಹ ಸಂಭವಿಸಿವೆ. ಇರಾನ್ ಅಂತೂ ತನ್ನ ಅನೇಕ ಪ್ರಮುಖ ರಾಜಕೀಯ ಹಾಗೂ ಸೇನಾ ನಾಯಕರನ್ನು ಕಳೆದುಕೊಂಡಿದೆ. ಇಷ್ಟೆಲ್ಲದರ ನಡುವೆಯೂ ಕದನ ಮುಕ್ತಾಯ ಕಂಡಿಲ್ಲ. ಯಾವಾಗ ಮುಗಿಯುತ್ತದೆ ಎಂಬುದೂ ಸ್ಪಷ್ಟವಿಲ್ಲ. ‘ಯುದ್ಧವನ್ನು ಆರಂಭಿಸುವುದು ಸುಲಭ; ಮುಗಿಸುವುದು ಕಷ್ಟ’ ಎಂಬ ಮಾತು ಸದ್ಯದ ಕೊಲ್ಲಿ ಸಮರಕ್ಕೆ ಸೂಕ್ತವಾಗಿ ಅನ್ವಯಿಸುತ್ತದೆ. ಈ ನಡುವೆಯೇ, ಯುದ್ಧವನ್ನು ಕೊನೆಗೊಳಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸುವ ಗೊತ್ತುವಳಿಯನ್ನು ಅಮೆರಿಕದ ಸಂಸತ್​ನ ಕೆಳಮನೆಯಾದ ಹೌಸ್ ಆಫ್ ರೆಪ್ರಸಂಟೇಟಿವ್ಸ್ ಅಂಗೀಕರಿಸಿರುವುದು ಗಮನಾರ್ಹ ವಿದ್ಯಮಾನ.

ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ನಾಲ್ವರು ಸದಸ್ಯರು ಕೂಡ ಈ ಗೊತ್ತುವಳಿಯನ್ನು ಬೆಂಬಲಿಸಿರುವುದು ವಿಶೇಷ. ಹಾಗಂತ ಈ ಗೊತ್ತುವಳಿ ಅಂಗೀಕರಿಸಿದಾಕ್ಷಣ ಟ್ರಂಪ್ ಯುದ್ಧ ನಿಲ್ಲಿಸುವ ನಿರ್ಣಯ ಕೈಗೊಳ್ಳಲೇಬೇಕು ಎಂಬ ನಿರ್ಬಂಧವೇನೂ ಇಲ್ಲ. ಒಂದೊಮ್ಮೆ, ಮೇಲ್ಮನೆಯಾದ ಸೆನೆಟ್ ಕೂಡ ಇಂಥದೇ ನಿರ್ಣಯಕ್ಕೆ ಅನುಮೋದನೆ ನೀಡಿದರು ಸಹ ಅಧ್ಯಕ್ಷರು ತಮಗಿರುವ ವಿಟೋ ಅಧಿಕಾರ ಚಲಾಯಿಸಿ ಈ ನಿರ್ಣಯಕ್ಕೆ ಮಹತ್ವವಿಲ್ಲದಂತೆ ಮಾಡಬಹುದು. ಇದೇನೇ ಇದ್ದರೂ, ಇಂಥದೊಂದು ಗೊತ್ತುವಳಿಯನ್ನು ಸಂಸತ್​ನ ಕೆಳಮನೆ 215-208 ಮತಗಳಿಂದ ಅಂಗೀಕರಿಸಿದೆ ಎಂಬುದು ಮಹತ್ವದ್ದು. ಸೆನೆಟ್​ನಲ್ಲಿ ರಿಪಬ್ಲಿಕನ್ ಪಕ್ಷ 53-47 ಬಹುಮತ ಹೊಂದಿರುವುದರಿಂದಾಗಿ, ಮೇಲ್ನೋಟಕ್ಕೆ ಗೊತ್ತುವಳಿಗೆ ಅಂಗೀಕಾರ ಕಷ್ಟ. ಹೀಗಿದ್ದರೂ ಕೆಳಮನೆಯಲ್ಲಿ ಆದಂತೆ, ಕೆಲವರು ಬೆಂಬಲಿಸಿದರೆ ಅಂಗೀಕಾರವಾಗಲೂಬಹುದು. ಅಧ್ಯಕ್ಷರ ವಿಟೋ ಅಧಿಕಾರವನ್ನು ಮೀರಲು ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ಬೇಕಾಗುತ್ತದೆ. ಇದೇ ರೀತಿಯ ಪ್ರಸ್ತಾವ ಕೆಲ ದಿನಗಳ ಹಿಂದೆಯೇ ಬಂದಿತ್ತು. ಆದರೆ ರಿಪಬ್ಲಿಕನ್ ಧುರೀಣರು ಅದು ಮಂಡನೆಯಾಗದದಂತೆ ನೋಡಿಕೊಂಡಿದ್ದರು. ಆದರೆ ಈಗ ಮತ್ತೆ ಮಂಡನೆಯಾಗಿರುವುದು ಟ್ರಂಪ್ ನಿಲುವಿಗೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ.

ಸಂಸತ್ ಮಾತ್ರವಲ್ಲ, ಅಮೆರಿಕದ ಜನತೆ ಕೂಡ ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇಲ್ಲದ ಉಸಾಬರಿಗೆ ಕೈಹಾಕಿದ್ದೇಕೆ ಎಂದು ಟ್ರಂಪ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದೂ ಇದೆ. ಜನರು ಆಕ್ರೋಶಿತರಾಗುವುದಕ್ಕೆ ಕಾರಣವೂ ಇದೆ. ಈವರೆಗಿನ ಯುದ್ಧದಲ್ಲಿ ಅಮೆರಿಕದ ಅನೇಕ ಸೈನಿಕರು ಮೃತರಾಗಿದ್ದು, ಯುದ್ಧ ವಿಮಾನಗಳು ಸೇರಿ ಅಪಾರ ಪ್ರಮಾಣ ಸಮರ ಸಾಧನಗಳನ್ನು ಸಹ ಆ ದೇಶ ಕಳೆದುಕೊಂಡಿದೆ. ಕೋಟ್ಯಂತರ ಡಾಲರ್ ನಷ್ಟವಾಗಿದೆ. ಕದನ ವಿರಾಮದ ಮಾತುಗಳು ಕೇಳಿಬರುತ್ತಿವೆಯಾದರೂ, ಅದು ತಾತ್ಕಾಲಿಕವಾಗಿದೆ. ಯುದ್ಧದ ಕಿಡಿಗಳು ಹಾರುತ್ತಲೇ ಇವೆ. ಮಧ್ಯಪ್ರಾಚ್ಯವು ತೈಲ ಮತ್ತಿತರ ವಸ್ತುಗಳ ಪೂರೈಕೆಯ ಮುಖ್ಯ ಕೊಂಡಿಯಾಗಿರುವುದರಿಂದಾಗಿ, ಯುದ್ಧದ ದುಷ್ಪರಿಣಾಮಗಳು ವಿಶ್ವದ ಅನೇಕ ದೇಶಗಳನ್ನು ಬಾಧಿಸತೊಡಗಿ ಹಲವು ದಿನಗಳಾಗಿವೆ; ವಿವಿಧ ವಸ್ತುಗಳ ಬೆಲೆ ಏರಿಕೆ ಆಗಿದೆ. ಕಚ್ಚಾವಸ್ತುಗಳ ಪೂರೈಕೆ ಇಲ್ಲದೆ ಉತ್ಪಾದನೆ ಕುಸಿದಿದೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಆಗಿದೆ. ಹೀಗಾಗಿ ಕೊಲ್ಲಿ ಕದನ ಆದಷ್ಟು ಬೇಗ ಅಂತ್ಯವಾಗಬೇಕಿದೆ. ಜಗತ್ತಿನ ಕ್ಷೇಮದ ದೃಷ್ಟಿಯಿಂದ, ಅಮೆರಿಕ ಮಾತ್ರವಲ್ಲ, ಸಮರದಲ್ಲಿ ತೊಡಗಿರುವ ಎಲ್ಲ ದೇಶಗಳು ಈ ಅಂಶವನ್ನು ಪರಿಗಣಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net