ಸಂಪಾದಕೀಯ: ಇದ್ದೂ ಇಲ್ಲದಂತಿರುವ ವಿಶ್ವಸಂಸ್ಥೆ

 Editorial
Editorial
Published on
ಜಾಗತಿಕ ವಲಯ ಯುದ್ಧದಿಂದ ನಲಗುತ್ತಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಆರಂಭವಾಗಿ 13 ದಿನಗಳು ಕಳೆದರೂ, ಸಮರ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಂತಾರಾಷ್ಟ್ರೀಯ ಸುರಕ್ಷಾ ತಜ್ಞರಂತೂ, ಈ ವರ್ಷದ ಜೂನ್​ವರೆಗೆ ಯುದ್ಧ ಮುಂದುವರಿಯುವ ಸಾಧ್ಯತೆ ಇದೆ ಎಂದಿದ್ದಾರೆ. ಹೀಗಾದರೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಆರ್ಥಿಕತೆ ನೆಲ ಕಚ್ಚುವುದು ನಿಶ್ಚಿತ. ದೇಶ-ದೇಶಗಳ ನಡುವಿನ ವಿವಾದಗಳನ್ನು ಬಗೆಹರಿಸಿ, ಶಾಂತಿ ಸ್ಥಾಪಿಸಬೇಕಾದ ವಿಶ್ವಸಂಸ್ಥೆ ಮಾತ್ರ ನಿರ್ಲಿಪ್ತವಾಗಿದ್ದು, ಅದರ ನಿಷ್ಕ್ರಿಯತೆ ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ.
ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾದ ವಿಶ್ವಸಂಸ್ಥೆ ಇದ್ದೂ ಇಲ್ಲದಂತಾಗಿದೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ಇದ್ದು, ವಿಶ್ವಸಂಸ್ಥೆ ಇನ್ನಾದರೂ ಕಾರ್ಯಪ್ರವೃತ್ತವಾಗಬೇಕು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ‘ವೀಟೋ’ ಅಧಿಕಾರ ಹೊಂದಿವೆ. ಯಾವುದೇ ಪ್ರಮುಖ ನಿರ್ಧಾರಕ್ಕೆ ಈ ಐದೂ ರಾಷ್ಟ್ರಗಳು ಒಪ್ಪಬೇಕು. ಒಂದು ವೇಳೆ ರಷ್ಯಾ ಯುದ್ಧ ಮಾಡುತ್ತಿದ್ದರೆ, ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ನಿರ್ಣಯಕ್ಕೆ ರಷ್ಯಾ ತನ್ನ ವೀಟೋ ಬಳಸಿ ತಡೆ ಒಡ್ಡುತ್ತದೆ. ಅಮೆರಿಕ ವಿಷಯದಲ್ಲಿಯೂ ಇದೇ ಸ್ಥಿತಿ. ಹೀಗಾಗಿ ಮಂಡಳಿಯು ಅಸಹಾಯಕವಾಗುತ್ತದೆ. ಅಲ್ಲದೆ, ವಿಶ್ವಸಂಸ್ಥೆಗೆ ತನ್ನದೇ ಆದ ಸ್ವಂತ ಸೈನ್ಯವಿಲ್ಲ.
ಶಾಂತಿ ಪಾಲನೆಗಾಗಿ ಅದು ಸದಸ್ಯ ರಾಷ್ಟ್ರಗಳ ಸೈನಿಕರ ಮೇಲೆ ಅವಲಂಬಿತವಾಗಿದೆ. ದೊಡ್ಡ ರಾಷ್ಟ್ರಗಳು ಸೈನ್ಯ ನೀಡಲು ನಿರಾಕರಿಸಿದರೆ ವಿಶ್ವಸಂಸ್ಥೆ ಏನೂ ಮಾಡಲು ಸಾಧ್ಯವಿಲ್ಲ ಎಂಬಂಥ ಸ್ಥಿತಿ ಇದೆ. ಇಂದಿನ ಜಗತ್ತು ಅಮೆರಿಕ ಮತ್ತು ರಷ್ಯಾ-ಚೀನಾ ಬಣಗಳಾಗಿ ವಿಭಜನೆಯಾಗಿದೆ. ಒಂದು ಬಣವು ತನಗೆ ಬೇಕಾದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಇನ್ನೊಂದು ಬಣ ಅದನ್ನು ವಿರೋಧಿಸುತ್ತದೆ. ಇಲ್ಲಿ ವಿಶ್ವಸಂಸ್ಥೆ ಮೂಕಪ್ರೇಕ್ಷಕನ ಪಾತ್ರ ವಹಿಸುತ್ತದೆ ಅಷ್ಟೇ.
ವಿಶ್ವಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಸದಸ್ಯ ರಾಷ್ಟ್ರಗಳು ನೀಡುವ ದೇಣಿಗೆಯೇ ಮೂಲ. ಹೆಚ್ಚಿನ ದೇಣಿಗೆ ನೀಡುವ ರಾಷ್ಟ್ರಗಳು, ಉದಾಹರಣೆಗೆ ಅಮೆರಿಕ, ಚೀನಾ ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರುತ್ತಿವೆ. ಆದರೆ, ದಿಟ್ಟ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ವಿಶ್ವಸಂಸ್ಥೆಗೆ ಅವಕಾಶವಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ನೇರವಾಗಿ ಯುದ್ಧನಿರತ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಿ ಕದನ ವಿರಾಮ ಘೊಷಿಸಲು ಒತ್ತಡ ಹೇರಬಹುದು. ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆಯದಿರುವುದು ವಿಷಾದಕರ.
ಯುದ್ಧ ಅಪರಾಧಗಳು ನಡೆದಿದ್ದರೆ ಅಂತರಾಷ್ಟ್ರೀಯ ನ್ಯಾಯಾಲಯದ ಮೂಲಕ ವಿಶ್ವಸಂಸ್ಥೆ ಆ ದೇಶದ ಮೇಲೆ ಕಾನೂನು ಕ್ರಮ ಜರುಗಿಸಿ ಜಾಗತಿಕವಾಗಿ ಏಕಾಂಗಿ ಮಾಡಬಹುದು. ಈ ಕರ್ತವ್ಯವನ್ನೂ ಅದು ಮರೆತಿದೆ. ಯುದ್ಧ ಮಾಡುತ್ತಿರುವ ದೇಶಕ್ಕೆ ಶಸ್ತ್ರಾಸ್ತ್ರ ಪೂರೈಕೆ ತಡೆಯುವುದು, ಆ ದೇಶದ ಆರ್ಥಿಕ ವ್ಯವಹಾರಗಳನ್ನು ಜಾಗತಿಕವಾಗಿ ಸ್ಥಗಿತಗೊಳಿಸುವುದು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ರದ್ದುಗೊಳಿಸುವಂಥ ದಿಟ್ಟ ಕ್ರಮಗಳಿಗೆ ಮುಂದಾದರೆ ಮಾತ್ರ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿದಂತಾಗುತ್ತದೆ.
ವಿಶ್ವಸಂಸ್ಥೆಯ ಚಾರ್ಟರ್​ನ ಅಧ್ಯಾಯ 7ರ ಅಡಿಯಲ್ಲಿ, ಶಾಂತಿಗೆ ಧಕ್ಕೆಯಾದಾಗ ಭದ್ರತಾ ಮಂಡಳಿಯು ಬಲಪ್ರಯೋಗಕ್ಕೆ ಆದೇಶಿಸಬಹುದು. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯನ್ನು ವಿವಾದಿತ ಪ್ರದೇಶಗಳಿಗೆ ಕಳುಹಿಸಿ ನಾಗರಿಕರ ರಕ್ಷಣೆ ಮಾಡಬೇಕು. ವಿಶ್ವಸಂಸ್ಥೆ ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಭದ್ರತಾ ಮಂಡಳಿಯ ವಿಸ್ತರಣೆ ಆಗಬೇಕು. ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಕಾಯಂ ಸದಸ್ಯತ್ವ ನೀಡುವ ಮೂಲಕ ಮಂಡಳಿ ಹೆಚ್ಚು ಸಮತೋಲನಗೊಳ್ಳಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net