

ಜಗತ್ತು ಪ್ರಸ್ತುತ ಅಭೂತಪೂರ್ವ ಹವಾಮಾನ ವೈಪರೀತ್ಯದ ಹೊಸ್ತಿಲಲ್ಲಿ ನಿಂತಿದ್ದು, ತೀವ್ರವಾದ ಎಲ್ ನಿನೋ ಪರಿಣಾಮವನ್ನು ಎದುರಿಸುತ್ತಿದೆ. ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ 3.4 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿರುವುದು ಕಳವಳದ ಸಂಗತಿ. ಹವಾಮಾನ ತಜ್ಞರು ಇದನ್ನು "ಸೂಪರ್ ಎಲ್ ನಿನೋ" ಎಂದು ಎಚ್ಚರಿಸಿದ್ದಾರೆ. ಇದರ ಪರಿಣಾಮವಾಗಿ ಭಾರತ ಸೇರಿ ವಿಶ್ವದ ಹಲವು ಭಾಗಗಳಲ್ಲಿ ವಿಪರೀತ ಸೆಕೆ, ಬರಗಾಲ ಅಥವಾ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ವಿದ್ಯಮಾನವು ವಾತಾವರಣದ ತಾಪಮಾನ ಬದಲಾವಣೆಯಷ್ಟೇ ಅಲ್ಲದೆ, ಭೂಮಿಯ ಜೀವಪರಿಸರ ಹಾಗೂ ಮಾನವ ಬದುಕಿನ ಮೇಲೆ ಬೀರುವ ಪರಿಣಾಮಗಳು ಅತ್ಯಂತ ಗಂಭೀರವಾಗಿವೆ. ಹಾಗಾಗಿ, ಜಾಗತಿಕ ಸಮುದಾಯ ಪರಿಸರ ಸಂಬಂಧಿ ಸಮಸ್ಯೆಗಳ ನಿರ್ವಹಣೆಗೆ ಪ್ರಧಾನ ಆದ್ಯತೆ ನೀಡಬೇಕಿದೆ.
ಈ ವರ್ಷದ ಡಿಸೆಂಬರ್ ವೇಳೆಗೆ ಈ ಸೂಪರ್ ಎಲ್ ನಿನೋ ತನ್ನ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ಇದರ ನೇರ ಪರಿಣಾಮವಾಗಿ ಮುಂಬರುವ ತಿಂಗಳುಗಳಲ್ಲಿ ವಿಶ್ವದ ಬಹುತೇಕ ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಗಣನೀಯವಾಗಿ ಏರಿಕೆಯಾಗಲಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮುಂಗಾರು ಮಳೆಯ ಮಾದರಿ ಏರುಪೇರಾಗಲಿದ್ದು, ಒಂದೆಡೆ ತೀವ್ರ ಬರ ಹಾಗೂ ಬಿಸಿಗಾಳಿ, ಮತ್ತೊಂದೆಡೆ ಅನಿರೀಕ್ಷಿತ ಪ್ರವಾಹದ ಭೀತಿ ಎದುರಾಗಲಿದೆ. ಕೃಷಿ ವಲಯ, ಕುಡಿಯುವ ನೀರಿನ ಲಭ್ಯತೆ ಮತ್ತು ಆಹಾರ ಭದ್ರತೆಯ ಮೇಲೆ ಇದು ಭಾರಿ ಹೊಡೆತ ನೀಡಲಿದೆ.
ಎಲ್ಲಕ್ಕಿಂತ ಆತಂಕಕಾರಿ ಸಂಗತಿಯೆಂದರೆ, ಹವಾಮಾನ ಬದಲಾವಣೆಯ ನೇರ ಮತ್ತು ಪರೋಕ್ಷ ಪರಿಣಾಮಗಳಿಂದಾಗಿ 2026ರ ಜೂನ್ನಿಂದ 2027ರ ಫೆಬ್ರವರಿಯ ನಡುವೆ ಜಾಗತಿಕವಾಗಿ 4.51 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸುವ ಮುನ್ಸೂಚನೆಯನ್ನು ಸಂಶೋಧಕರು ನೀಡಿದ್ದಾರೆ. ತೀವ್ರ ಬಿಸಿಲಿನ ತಾಪ, ಸಾಂಕ್ರಾಮಿಕ ರೋಗಗಳ ಹರಡುವಿಕೆ ಮತ್ತು ಅಪೌಷ್ಟಿಕತೆ ಇದಕ್ಕೆ ಪ್ರಮುಖ ಕಾರಣವಾಗಲಿವೆ. ಕೇವಲ ಎಚ್ಚರಿಕೆಗಳನ್ನು ನೀಡಿ ಕೈಕಟ್ಟಿ ಕುಳಿತುಕೊಳ್ಳುವ ಸಮಯ ಇದಲ್ಲ. ಜಾಗತಿಕ ಸಮುದಾಯ ಮತ್ತು ಆಯಾ ರಾಷ್ಟ್ರಗಳ ಸರ್ಕಾರಗಳು ವಿಪತ್ತು ನಿರ್ವಹಣೆಗೆ ಸಜ್ಜಾಗಬೇಕಿದೆ.
ಆಹಾರ ಮತ್ತು ನೀರಿನ ಭದ್ರತೆಗೆ ಸೂಕ್ತ ಯೋಜನೆ ರೂಪಿಸಬೇಕಿದ್ದು, ಬರಪೀಡಿತ ಪ್ರದೇಶಗಳಲ್ಲಿ ಮುಂಚಿತವಾಗಿಯೇ ಪರ್ಯಾಯ ಬೆಳೆ ಯೋಜನೆ ಹಾಗೂ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಬಿಸಿಗಾಳಿ ಮತ್ತು ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಆಸ್ಪತ್ರೆಗಳವರೆಗೆ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ತಾಪಮಾನ ಹೆಚ್ಚಳ ತಗ್ಗಿಸಲು ಜಾಗತಿಕ ಮಟ್ಟದಲ್ಲಿ ಇಂಗಾಲದ ಹೊರಸೂಸುವಿಕೆ ನಿಯಂತ್ರಣ ಒಪ್ಪಂದಗಳು ಕಾಗದದ ಮೇಲಷ್ಟೇ ಉಳಿಯದೆ ತಕ್ಷಣ ಅನುಷ್ಠಾನಕ್ಕೆ ತರುವುದು ಅವಶ್ಯವಾಗಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅಭಿವೃದ್ಧಿಯ ಮಾದರಿಯನ್ನು ಬದಲಿಸಬೇಕಿದ್ದು, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಪರಿಸರಸ್ನೇಹಿ ಜೀವನಶೈಲಿಯ ಅಳವಡಿಕೆಗೆ ಪ್ರೋತ್ಸಾಹ ನೀಡಬೇಕಿದೆ. ಪ್ರಕೃತಿ ನೀಡುತ್ತಿರುವ ಈ ಎಚ್ಚರಿಕೆಯ ಗಂಟೆಯನ್ನು ಕಡೆಗಣಿಸಿದರೆ, ಮಾನವಕುಲ ತೆರಬೇಕಾದ ಬೆಲೆ ಅಗಾಧ. ಮುಂಬರುವ ದಿನಗಳನ್ನು ಎದುರಿಸಲು ದೂರದೃಷ್ಟಿಯ ಯೋಜನೆ ಮತ್ತು ತ್ವರಿತ ಕ್ರಿಯಾಯೋಜನೆ ಅತ್ಯಗತ್ಯ.