ಸಂಪಾದಕೀಯ: ದೇಶದ ಹಿತಾಸಕ್ತಿ ಮುಖ್ಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಯಾವಾಗ ಕೊನೆಗೊಳ್ಳಬಹುದು ಎಂಬುದರ ಬಗ್ಗೆ ಯಾರಿಗೂ ಖಚಿತವಾಗಿ ಅಂದಾಜು ಸಿಗುತ್ತಿಲ್ಲ. ಅಮೆರಿಕದ ಎಣಿಕೆಯಂತೆ ಯುದ್ಧದ ಗತಿ ಇಲ್ಲ ಎಂಬುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ, ಕದನವಿರಾಮ ಸಾಧ್ಯತೆ ಕುರಿತು ಮಾತುಗಳು ಕೇಳಿಬರುತ್ತಿವೆಯಾದರೂ ಅದಿನ್ನೂ ಸಾಕಾರಗೊಂಡಿಲ್ಲ. ಈ ವಿಷಯದಲ್ಲಿ ಅಮೆರಿಕ ಮತ್ತು ಇರಾನ್ ಒಮ್ಮತಕ್ಕೆ ಬರಲು ಆಗುತ್ತಿಲ್ಲ. ಹೀಗಾಗಿ ಜಾಗತಿಕವಾಗಿ ಅನೇಕ ದೇಶಗಳು ತೊಂದರೆಗೆ ಒಳಗಾಗಿವೆ. ಬಾಧಿತ ದೇಶಗಳು ತಂತಮ್ಮ ಹಿತಾಸಕ್ತಿ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕಾದುದು ಅನಿವಾರ್ಯವಾಗಿದೆ.

ಭಾರತವೂ ಇದಕ್ಕೆ ಹೊರತಲ್ಲ. ಕಚ್ಚಾ ತೈಲ ಖರೀದಿಯಲ್ಲಿ ತೈಲ ಕಂಪನಿಗಳ ಮೇಲಿನ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಗ್ಗಿಸಿದೆ. ಆದರೆ ಗ್ರಾಹಕರಿಗೆ ಇದರಿಂದ ತಕ್ಷಣಕ್ಕೆ ಪ್ರಯೋಜನವಾಗುವ ಸಾಧ್ಯತೆ ಕಡಿಮೆ. ಅಂದರೆ ಇಂಧನ ಬೆಲೆ ತಗ್ಗುವ ಸಂಭವ ಇಲ್ಲ ಎಂಬುದು ತಜ್ಞರ ಅಭಿಪ್ರಾಯ. ತೈಲ ಕಂಪನಿಗಳು ಕಚ್ಚಾ ತೈಲ ಖರೀದಿಯಲ್ಲಿ ಹಾನಿ ಅನುಭವಿಸುತ್ತಿರುವುದರಿಂದ ಅವುಗಳ ನಷ್ಟದ ಪ್ರಮಾಣ ತುಸು ತಗ್ಗುತ್ತದೆ. ‘ಕಚ್ಚಾ ತೈಲ ಬೆಲೆಯೇರಿಕೆಯಿಂದಾಗಿ ಜಗತ್ತಿನ ಬಹುತೇಕ ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿದೆ.

ಅಬಕಾರಿ ಸುಂಕ ಕಡಿತದಿಂದಾಗಿ ಸರ್ಕಾರಕ್ಕೆ ಅಪಾರ ನಷ್ಟ ಉಂಟಾಗುತ್ತದೆಯಾದರೂ, ಜನರ ಮೇಲೆ ಹೊರೆ ಬೀಳಬಾರದು ಎಂಬ ಕಾರಣಕ್ಕೆ ದರ ಹೆಚ್ಚಿಸಿಲ್ಲ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಇನ್ನೊಂದೆಡೆ, ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ಗಳ ಪೂರೈಕೆ ಪ್ರಮಾಣವನ್ನು ಸರ್ಕಾರ ಶೇ.70ಕ್ಕೆ ಹೆಚ್ಚಿಸಿದೆ. ಇದರಿಂದಾಗಿ, ಆತಿಥ್ಯ ವಲಯದ ಹೋಟೆಲ್, ರೆಸ್ಟೋರೆಂಟ್ ಮುಂತಾದವುಗಳಿಗೆ ಸ್ವಲ್ಪ ನಿರಾಳತೆ ಒದಗಲಿದೆ. ಏಕೆಂದರೆ, ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೂರೈಕೆ ಪ್ರಮಾಣವನ್ನು ಸರ್ಕಾರ ತಗ್ಗಿ್ಗತ್ತು. ಇದರಿಂದಾಗಿ, ಎಷ್ಟೋ ಹೋಟೆಲ್​ಗಳು ತಾತ್ಕಾಲಿಕವಾಗಿ ಮುಚ್ಚಿದ್ದರೆ, ಉಳಿದವುಗಳಲ್ಲಿ ಮೆನು ಕಡಿತವಾಗಿತ್ತು. ಹೋಟೆಲ್ ಮೇಲೆ ಅವಲಂಬನೆ ಹೊಂದಿರುವವರು ಸಂಕಷ್ಟಕ್ಕೀಡಾಗಿದ್ದರು. ಈ ನಡುವೆ, ದೇಶದಲ್ಲಿ ಲಾಕ್​ಡೌನ್ ವಿಧಿಸಬಹುದು ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಲಾಕ್​ಡೌನ್ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಹೀಗೆ ವದಂತಿಗಳು ಹಬ್ಬುವುದು ಸಾಮಾನ್ಯವಾಗಿದ್ದು, ಸರ್ಕಾರಗಳು ಕಾಲಕಾಲಕ್ಕೆ ಸ್ಪಷ್ಟನೆ ನೀಡಿ ಜನರಿಗೆ ವಾಸ್ತವ ಪರಿಸ್ಥಿತಿ ತಿಳಿಸಬೇಕಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಭಾರತದ ಮೇಲಿನ ಪರಿಣಾಮ-ಪರಿಹಾರೋಪಾಯ ಬಗ್ಗೆ ವರ್ಚುವಲ್ ಸಂವಾದ ನಡೆಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದ್ದು, ಕೋವಿಡ್ ಕಾಲಘಟ್ಟದಲ್ಲಿ ಅನುಸರಿಸಿದ ಸಹಕಾರ ಒಕ್ಕೂಟ ಮಾದರಿಯನ್ನು ಉದಾಹರಿಸಿದ್ದಾರೆ. ಒಟ್ಟಿನಲ್ಲಿ ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಗಳು ಮತ್ತು ಸಾರ್ವಜನಿಕರು ತಂತಮ್ಮ ಪಾಲಿನ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಿದಾಗ ಎಂಥದೇ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net