ಸಂಪಾದಕೀಯ: ಬೆಲೆಯೇರಿಕೆಯ ಭಾರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಕಳೆದ 10 ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಲಾಗಿದೆ. ಮೇ 15ರಿಂದ ಆರಂಭವಾದ ಈ ಬೆಲೆಯೇರಿಕೆ ಸರಣಿಯಿಂದಾಗಿ ಒಟ್ಟಾರೆ ಇಂಧನ ದರ ಲೀಟರ್​ಗೆ 7.50 ರೂಪಾಯಿಗಿಂತಲೂ ಹೆಚ್ಚು ದುಬಾರಿಯಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ -ಠಿ;110ರ ಗಡಿ ದಾಟಿದ್ದರೆ, ಡೀಸೆಲ್ ಬೆಲೆ -ಠಿ;98ರ ಆಸುಪಾಸಿನಲ್ಲಿದೆ. ಬೆಲೆಯೇರಿಕೆಯ ಭಾರದಿಂದ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ತೈಲ ಬೆಲೆಯ ಹೆಚ್ಚಳ ಹಲವು ವಲಯ ಮತ್ತು ಉದ್ಯಮಗಳನ್ನು ಪ್ರಭಾವಿಸುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚುತ್ತಲೇ ಸಾಗಿದ್ದು, ಬಡ ಮತ್ತು ಮಧ್ಯಮವರ್ಗದವರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಜಾಗತಿಕ ರಾಜಕೀಯ ಅನಿಶ್ಚಿತತೆ ಮತ್ತು ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಈ ಪರಿಸ್ಥಿತಿ ಸೃಷ್ಟಿಯಾಗಿರುವುದು ಹೌದಾದರೂ, ಇಂಥ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಬೆಲೆಯೇರಿಕೆಯ ಭಾರವನ್ನು ತಗ್ಗಿಸಲು ಅಗತ್ಯ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು.

ಇಂಧನ ಬೆಲೆ ಹೆಚ್ಚಳ ವಾಹನ ಸವಾರರಿಗೆ ಮಾತ್ರ ಸೀಮಿತವಾಗಿರದೆ, ಇಡೀ ಆರ್ಥಿಕತೆಯ ಮೇಲೆ ಸರಣಿ ಪ್ರಭಾವ ಬೀರುತ್ತದೆ. ಸರಕು ಸಾಗಣೆಯ ಲಾರಿಗಳು, ಕಂಟೈನರ್​ಗಳು ಮತ್ತು ಮಿನಿ ವ್ಯಾನ್​ಗಳು ಸಂಪೂರ್ಣವಾಗಿ ಡೀಸೆಲ್ ಮೇಲೆಯೇ ಅವಲಂಬಿತವಾಗಿವೆ. ಬೆಲೆ ಏರಿಕೆಯಿಂದಾಗಿ ಸಾರಿಗೆ ಕಾರ್ಯಾಚರಣೆ ವೆಚ್ಚ ತೀವ್ರವಾಗಿ ಹೆಚ್ಚಾಗಿದೆ. ಟ್ರಾ್ಯಕ್ಟರ್, ಟ್ಯಾಕ್ಸಿ ಮತ್ತು ಟೂರಿಸ್ಟ್ ವಾಹನಗಳ ಮಾಲೀಕರು ದರ ಹೆಚ್ಚಿಸಲಾಗದೆ, ಇತ್ತ ನಷ್ಟ ಭರಿಸಲಾಗದೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಕರ್ನಾಟಕದ ಸರ್ಕಾರಿ ಸಾರಿಗೆ ಸಂಸ್ಥೆಗಳಾದ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳಿಗೆ ಈ ಇಂಧನ ದರ ಏರಿಕೆ ದೊಡ್ಡ ಬರೆ ಎಳೆದಿದೆ. ಕಳೆದ ಹತ್ತು ದಿನಗಳ ಹೆಚ್ಚಳದಿಂದಲೇ ರಾಜ್ಯದ ಸಾರಿಗೆ ನಿಗಮಗಳಿಗೆ 40 ಕೋಟಿ ರೂಪಾಯಿಗೂ ಅಧಿಕ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಗಳಿಗೆ ಇದು ಮತ್ತಷ್ಟು ಆಘಾತ ನೀಡಿದೆ.

ಕೃಷಿಯಲ್ಲಿ ಟ್ರಾ್ಯಕ್ಟರ್, ಟಿಲ್ಲರ್ ಮತ್ತು ನೀರಾವರಿ ಪಂಪ್​ಸೆಟ್​ಗಳಿಗೆ ಡೀಸೆಲ್ ಅತ್ಯಗತ್ಯ. ಬೆಲೆ ಏರಿಕೆಯಿಂದಾಗಿ ಉಳುಮೆ ಮತ್ತು ಸಾಗಣೆ ವೆಚ್ಚ ಹೆಚ್ಚಾಗಿ, ರೈತರ ಒಟ್ಟಾರೆ ಸಾಲ ಹಾಗೂ ಉತ್ಪಾದನಾ ವೆಚ್ಚ ದುಪ್ಪಟ್ಟಾಗುತ್ತಿದೆ. ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾದಾಗ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮಾಸಿಕ ಬಜೆಟ್ ಸಂಪೂರ್ಣವಾಗಿ ಬುಡಮೇಲಾಗುತ್ತದೆ. ತರಕಾರಿ, ಹಣ್ಣು, ಹಾಲು, ದಿನಸಿ ಮತ್ತು ಧಾನ್ಯಗಳನ್ನು ಗ್ರಾಮೀಣ ಭಾಗದಿಂದ ನಗರಗಳಿಗೆ ತರಲು ಸಾರಿಗೆ ವೆಚ್ಚ ಹೆಚ್ಚಾಗುವುದರಿಂದ, ಮಾರುಕಟ್ಟೆಯಲ್ಲಿ ಇವುಗಳ ಬೆಲೆ ತಕ್ಷಣವೇ ಶೇಕಡ 10ರಿಂದ 15ರಷ್ಟು ದುಬಾರಿಯಾಗುತ್ತದೆ. ಖಾಸಗಿ ಆಟೋ ಮತ್ತು ಕ್ಯಾಬ್ ದರಗಳೂ ಹೆಚ್ಚಾಗುವುದರಿಂದ ಸಾರ್ವಜನಿಕ ಪ್ರಯಾಣವೂ ದುಬಾರಿಯಾಗುತ್ತದೆ. ಕಚ್ಚಾ ವಸ್ತುಗಳ ಸರಬರಾಜು ವೆಚ್ಚ ಹೆಚ್ಚಾಗುವುದರಿಂದ ಹೋಟೆಲ್​ಗಳಲ್ಲಿ ಊಟ, ತಿಂಡಿಗಳ ಬೆಲೆಯೂ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲ ಮಾರುಕಟ್ಟೆಯ ಏರಿಳಿತ ಮತ್ತು ತೆರಿಗೆಗಳ ಕಾರಣದಿಂದಾಗಿ ತೈಲ ಕಂಪನಿಗಳು ಮಾಡಿರುವ ಈ ಸರಣಿ ಬೆಲೆ ಏರಿಕೆಯು, ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ತಿಂಗಳ ಉಳಿತಾಯವನ್ನು ನುಂಗಿಹಾಕುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಂಕ ಕಡಿತ ಸೇರಿದಂತೆ ಅಗತ್ಯ ಕ್ರಮ ಕೈಗೊಂಡು, ಬೆಲೆಯೇರಿಕೆಯ ಭಾರವನ್ನು ತಗ್ಗಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net