ಸಂಪಾದಕೀಯ | ನವೋದ್ಯಮದ ಯುಗ

editorial
editorial
Published on
ಯುವರಂಗದ ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯನ್ನು ದೇಶದ ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಸದ್ವಿನಿಯೋಗ ಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಸ್ಟಾರ್ಟಪ್ ಇಂಡಿಯಾ’ ಕಾರ್ಯಕ್ರಮ ದಶಕವನ್ನು ಪೂರೈಸಿದ್ದು, ಈ ಕ್ಷೇತ್ರದ ಬೆಳವಣಿಗೆ ಆಶಾವಾದ ಮೂಡಿಸಿದೆ. ಭಾರತದಲ್ಲಿ ನವೋದ್ಯಮಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದ್ದು, ಈ ಮೂಲಕ ಉದ್ಯೋಗಸೃಷ್ಟಿಯ ಪ್ರಮಾಣವೂ ಹೆಚ್ಚಳಗೊಂಡಿದೆ.
ಸ್ಟಾರ್ಟಪ್ ಇಂಡಿಯಾ ಯೋಜನೆಯ 10ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನವೋದ್ಯಮ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಶ್ಲಾಘಿಸಿದ್ದು, ಸ್ಟಾರ್ಟಪ್ ಹಾಗೂ ತಂತ್ರಜ್ಞಾನದಲ್ಲಿ ಭಾರತ ವಿಶ್ವಗುರುವಾಗಬೇಕು ಎಂದು ಕರೆ ನೀಡಿದ್ದಾರೆ.
2014ರಲ್ಲಿ ದೇಶದಲ್ಲಿ ಕೆಲವೇ ಕೆಲವು ಯೂನಿಕಾರ್ನ್​ಗಳು ಮತ್ತು 500 ನವೋದ್ಯಮಗಳು ಇದ್ದವು. ಪ್ರಸ್ತುತ ದೇಶದಲ್ಲಿ 125ಕ್ಕೂ ಹೆಚ್ಚು ಸಕ್ರಿಯ ಯೂನಿಕಾರ್ನ್ ಮತ್ತು 2 ಲಕ್ಷಕ್ಕೂ ಅಧಿಕ ನವೋದ್ಯಮಗಳಿದ್ದು, ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ನವೋದ್ಯಮ ಹೊಂದಿರುವ ಮೂರನೇ ರಾಷ್ಟ್ರವಾಗಿದೆ. ಯೂನಿಕಾರ್ನ್​ಗಳು ಐಪಿಒ ಆರಂಭಿಸಿ, ಉದ್ಯೋಗ ಸೃಷ್ಟಿ ಮಾಡುತ್ತಿರುವುದರ ಬಗ್ಗೆಯೂ ಪ್ರಧಾನಿ ಗಮನ ಸೆಳೆದಿದ್ದಾರೆ. ಅಲ್ಲದೆ, ಮುಂದಿನ ಹತ್ತು ವರ್ಷಗಳಲ್ಲಿ ನವೋದ್ಯಮ ಮತ್ತು ತಂತ್ರಜ್ಞಾನದಲ್ಲಿ ಭಾರತ ಜಗತ್ತನ್ನು ಮುನ್ನಡೆಸುವುದು ನಮ್ಮ ಗುರಿಯಾಗಿರಲಿ ಎಂದೂ ಕರೆ ನೀಡಿದ್ದಾರೆ.
ಮಹತ್ವದ ಸಂಗತಿಯೆಂದರೆ ಎರಡನೇ ಮತ್ತು ಮೂರನೇ ಹಂತದ ನಗರಗಳು, ಗ್ರಾಮೀಣ ಪ್ರದೇಶಗಳಲ್ಲಿನ ಯುವಜನರು ಸ್ವಂತವಾದ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ. ಶೇಕಡ 45ರಷ್ಟು ನವೋದ್ಯಮಗಳು ಒಬ್ಬ ನಿರ್ದೇಶಕಿ ಅಥವಾ ಮಹಿಳಾ ಪಾಲುದಾರರನ್ನು ಹೊಂದಿವೆ. ಉದಯೋನ್ಮುಖ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದ್ದು, 2030ರ ಏಪ್ರಿಲ್ 1ರ ಮೊದಲು ಸ್ಥಾಪನೆಯಾಗುವ ಅರ್ಹ ಸ್ಟಾರ್ಟಪ್​ಗಳು ಸತತ ಮೂರು ವರ್ಷಗಳವರೆಗೆ ತೆರಿಗೆ ಪೋ›ತ್ಸಾಹ ಪಡೆಯಲಿವೆ. ದೇಶದಲ್ಲಿ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಅಹಮದಾಬಾದ್, ಚೆನ್ನೈ ನಗರಗಳು ಹೆಚ್ಚಿನ ಸಂಖ್ಯೆಯ ನವೋದ್ಯಮಗಳನ್ನು ಹೊಂದಿವೆ.
‘ಭಾರತ ನವೋದ್ಯಮಕ್ಕೆ ಪ್ರಶಸ್ತ ತಾಣ’ ಎಂದು ಹಲವು ವರದಿಗಳು ಉಲ್ಲೇಖಿಸಿವೆ. ಮುಖ್ಯವಾಗಿ, ಯುವಕರು ನವೋದ್ಯಮಕರ್ತರಾಗಲು ಬಯಸುತ್ತಿದ್ದು ಈ ನಿಟ್ಟಿನಲ್ಲಿ ಸ್ಟಾರ್ಟಪ್​ಗಳನ್ನು ಸ್ಥಾಪಿಸುತ್ತಿದ್ದಾರೆ. ಭಾರತ ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ಇ-ಕಾಮರ್ಸ್​ಗೆ ಸಂಬಂಧಿಸಿದ ಸ್ಟಾರ್ಟಪ್​ಗಳನ್ನು ಹೊಂದಿದೆ. ಭಾರತದಲ್ಲಿ ಗ್ರಾಹಕರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಇಂಟರ್​ನೆಟ್​ನ ತಲುಪುವಿಕೆ ವ್ಯಾಪ್ತಿಯೂ ಹೆಚ್ಚಳವಾಗಿದೆ. ಈ ಎರಡು ಸಂಗತಿಗಳು ಸ್ಟಾರ್ಟಪ್ ರಂಗಕ್ಕೆ ಬಲ ತುಂಬಿವೆ. ಈ ರಂಗ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವು ಸಾಮಾಜಿಕ ಸಮಸ್ಯೆಗಳಿಗೂ ಪರಿಹಾರ ಒದಗಿಸಲು ನೆರವಾಗುತ್ತಿದೆ.
ಈ ಯಶಸ್ಸು ಯುವವರ್ಗದ ಆತ್ಮವಿಶ್ವಾಸವನ್ನು ಹೆಚ್ಚು ಮಾಡಿದೆ. ಹಾಗಾಗಿ, ಐಐಟಿ, ಐಐಎಂನಲ್ಲಿ ಉನ್ನತ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪೈಕಿ ಸಾಕಷ್ಟು ಜನರು ಎಂಎನ್​ಸಿ ಕಂಪನಿಗಳ ದೊಡ್ಡ ಸಂಬಳದ ಕೆಲಸಕ್ಕೆ ಹೋಗದೆ ಸ್ವಂತದ್ದಾದ ಸ್ಟಾರ್ಟಪ್​ಗಳನ್ನು ಆರಂಭಿಸಿ, ಗಮನ ಸೆಳೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಸ್ಟಾರ್ಟಪ್​ಗಳು ಭಾರತದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಲಿವೆ ಎಂದು ವಿಶ್ಲೇಷಿಸಲಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತ ಸೃಜನಶೀಲತೆ ಮತ್ತು ತಂತ್ರಜ್ಞಾನದ ಬಲದಿಂದ ಹೊಸ ಮೈಲಿಗಲ್ಲು ಸಾಧಿಸಲು ಇದು ಸಕಾಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net