

ದೆಹಲಿ ಸೇರಿದಂತೆ ಹಲವು ಮಹಾನಗರಗಳಲ್ಲಿ ಇ-ರಿಕ್ಷಾ ಚಾಲಕರಿಗೆ ತಲೆನೋವಾಗಿದ್ದ ಹಲವು ಆಪ್ಗಳ ಪೈಕಿ ಮೂರು ಆಪ್ಗಳನ್ನು ಆಪ್ ಸ್ಟೋರ್ನಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಆದೇಶಿಸಿದೆ. ಈ ಆಪ್ಗಳು ಬಿಎಟಿ-ಬಿಎಮ್ಸ್, ಲಾಸಿಜಿ ಮತ್ತು ಇಪೋಚ್ ಲಿ-ಅಯಾನ್ ಆಗಿವೆ. ಮಾಹಿತಿ-ತಂತ್ರಜ್ಞಾನ (ಐಟಿ) ಸಚಿವಾಲಯವು ಶುಕ್ರವಾರ ಈ ಮಾಹಿತಿಯನ್ನು ನೀಡಿದೆ. ಆದಾಗ್ಯೂ, ಈ ಆಪ್ಗಳು ಪ್ಲೇ ಸ್ಟೋರ್ನಲ್ಲಿ ಇನ್ನು ಕೂಡ ಲಭ್ಯ ಇರುವುದು ಕಳವಳಕಾರಿ. ಇತ್ತೀಚೆಗೆ ದುರುಳರು ಈ ಆಪ್ಗಳ ಮೂಲಕ ಬ್ಲೂಟೂತ್ ಸಹಾಯದಿಂದ ಇ-ರಿಕ್ಷಾದ ಬ್ಯಾಟರಿಯನ್ನು ಬಂದ್ ಮಾಡಿ, ಚಲಿಸುತ್ತಿರುವ ಇ-ರಿಕ್ಷಾವನ್ನು ನಿಲ್ಲಿಸುತ್ತಿದ್ದರು. ಇದರಿಂದಾಗಿ ಚಾಲಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಈ ಘಟನೆಗಳ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇ-ರಿಕ್ಷಾಗಳ ಬ್ಯಾಟರಿ ಮ್ಯಾನೇಜ್ವೆುಂಟ್ ಸಿಸ್ಟಮ್ ಅನ್ನು ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ, ವಾಹನಗಳನ್ನು ನಡುರಸ್ತೆಯಲ್ಲೇ ನಿಲ್ಲಿಸುವ ಆತಂಕಕಾರಿ ಘಟನೆಗಳು ಹೆಚ್ಚುತ್ತಲೇ ಇವೆ. ಈ ಆಪ್ಗಳ ದುರುಪಯೋಗವು ಡಿಜಿಟಲ್ ಸುರಕ್ಷತೆಯಲ್ಲಿರುವ ದೊಡ್ಡ ಲೋಪವನ್ನು ಎತ್ತಿ ತೋರಿಸಿದೆ. ಚಲಿಸುತ್ತಿರುವ ಇ-ರಿಕ್ಷಾವನ್ನು ದಿಢೀರನೆ ಬಂದ್ ಮಾಡುವುದರಿಂದ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ. ಇದು ಚಾಲಕರು ಮತ್ತು ಪ್ರಯಾಣಿಕರ ಜೀವಕ್ಕೆ ನೇರ ಅಪಾಯವನ್ನು ತಂದೊಡ್ಡುತ್ತದೆ. ದುರುಳರು ಬ್ಯಾಟರಿಯನ್ನು ಲಾಕ್ ಮಾಡಿ, ಅದು ಮತ್ತೆ ಕಾರ್ಯಾರಂಭ ಮಾಡಲು ಚಾಲಕರಿಂದ ಹಣ ವಸೂಲಿ ಮಾಡುವ ನಿದರ್ಶನಗಳಿಗೆ ಕೊರತೆ ಇಲ್ಲ. ದಿನದ ದುಡಿಮೆಯನ್ನೇ ನಂಬಿಕೊಂಡಿರುವ ಬಡ ಇ-ರಿಕ್ಷಾ ಚಾಲಕರಿಗೆ ಇದು ಭಾರಿ ಹೊಡೆತ.
ಅನಧಿಕೃತವಾಗಿ ಬ್ಯಾಟರಿ ಮ್ಯಾನೇಜ್ವೆುಂಟ್ ಸಿಸ್ಟಮ್ ಪ್ರವೇಶಿಸಿ ಪದೇಪದೆ ವೋಲ್ಟೇಜ್ ಅಥವಾ ಸೆಟ್ಟಿಂಗ್ಸ್ಗಳನ್ನು ಬದಲಾಯಿಸುವುದರಿಂದ ದುಬಾರಿ ಲಿಥಿಯಂ-ಅಯಾನ್ ಬ್ಯಾಟರಿಗಳು ಶಾಶ್ವತವಾಗಿ ಹಾಳಾಗಬಹುದು ಅಥವಾ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಇರುತ್ತದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಅಥವಾ ಸ್ಥಳೀಯವಾಗಿ ಅಗ್ಗದ ದರದಲ್ಲಿ ತಯಾರಾಗುವ ಬ್ಯಾಟರಿಗಳ ಸಾಫ್ಟ್ವೇರ್ ಸುರಕ್ಷತೆ ತೀರಾ ಕಳಪೆಯಾಗಿದೆ. ಯಾವುದೇ ಎನ್ಕ್ರಿಪ್ಶನ್ ಇಲ್ಲದ ಕಾರಣ, ಹತ್ತಿರವಿರುವ ಯಾವುದೇ ಬ್ಲೂಟೂತ್ ಸಾಧನವು ಇವುಗಳೊಂದಿಗೆ ಸುಲಭವಾಗಿ ಕನೆಕ್ಟ್ ಆಗಬಲ್ಲದು. ಆಂಡ್ರಾಯ್ಡ್ ಪ್ಲೇ ಸ್ಟೋರ್ ಅಥವಾ ಮೂರನೇ ವ್ಯಕ್ತಿಗಳ ವೆಬ್ಸೈಟ್ಗಳಲ್ಲಿ ಇವುಗಳ ಎಪಿಕೆ ಫೈಲ್ಗಳು ಸುಲಭವಾಗಿ ಸಿಗುವುದರಿಂದ ಇವುಗಳ ಹರಡುವಿಕೆ ನಿಲ್ಲುತ್ತಿಲ್ಲ.
ಈ ಸಮಸ್ಯೆಯನ್ನು ಬೇರುಸಹಿತ ಕಿತ್ತೊಗೆಯಲು ತಂತ್ರಜ್ಞಾನ ತಯಾರಕರು, ಸರ್ಕಾರ ಮತ್ತು ಚಾಲಕರು ಒಟ್ಟಾಗಿ ಕೆಲಸ ಮಾಡಬೇಕಿದೆ. ಬ್ಯಾಟರಿ ತಯಾರಕರು ಗ್ರಾಹಕರಿಗೆ ಬ್ಯಾಟರಿ ನೀಡುವಾಗಲೇ ಮೊದಲ ಬಾರಿ ಬಳಸುವಾಗ ಪಾಸ್ವರ್ಡ್ ಬದಲಾಯಿಸುವುದು ಕಡ್ಡಾಯ ಎಂಬ ತಂತ್ರಜ್ಞಾನವನ್ನು ಅಳವಡಿಸಬೇಕು. ಬ್ಲೂಟೂತ್ ಮೂಲಕ ರವಾನೆಯಾಗುವ ಸಿಗ್ನಲ್ಗಳನ್ನು ಎನ್ಕ್ರಿಪ್ಟ್ ಮಾಡಬೇಕು. ಇದರಿಂದ ಅಧಿಕೃತ ಆಪ್ ಮತ್ತು ಅಧಿಕೃತ ಫೋನ್ ಹೊರತುಪಡಿಸಿ ಬೇರೆ ಯಾವುದೇ ಸಾಧನ ಬ್ಯಾಟರಿಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
ಭಾರತದಲ್ಲಿ ಇ-ವಾಹನಗಳ ಬಳಕೆ ವೇಗವಾಗಿ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಬ್ಯಾಟರಿ ಬ್ಯಾಕಪ್ ಹೆಚ್ಚಿಸುವುದಷ್ಟೇ ಅಲ್ಲದೆ, ಅದರ ಸೈಬರ್ ಭದ್ರತೆಗೂ ಆದ್ಯತೆ ನೀಡುವಂತೆ ಸರ್ಕಾರವು ಕಠಿಣ ನಿಯಮಾವಳಿಗಳನ್ನು ಜಾರಿಗೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಕಲಿ ಮತ್ತು ಅಪಾಯಕಾರಿ ಆಪ್ಗಳನ್ನು ನಿಷೇಧಿಸಬೇಕು ಮತ್ತು ಅವು ಮತ್ತೊಂದು ರೂಪದಲ್ಲಿ ತಲೆ ಎತ್ತದಂತೆ ಜಾಗ್ರತೆ ವಹಿಸಬೇಕು.