_1785522490388.webp?w=480&auto=format%2Ccompress&fit=max)
_1785522490388.webp?w=480&auto=format%2Ccompress&fit=max)
ದೇಶದ ಬಂದೀಖಾನೆಗಳ ಮೇಲ್ವಿಚಾರಣೆ ಮತ್ತು ಕೈದಿಗಳ ಹಕ್ಕುಗಳ ರಕ್ಷಣೆಗಾಗಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲೂ ‘ವೀಕ್ಷಕರ ಮಂಡಳಿ’ ರಚಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಕಾರಾಗೃಹಗಳಲ್ಲಿ ನಡೆಯುವ ಜಾತಿ ಆಧಾರಿತ ತಾರತಮ್ಯ, ಅಸಮಾನತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಈ ಬಾಹ್ಯ ಮೇಲ್ವಿಚಾರಣಾ ವ್ಯವಸ್ಥೆ ಅತ್ಯಗತ್ಯ. ಸುಪ್ರೀಂ ಕೋರ್ಟ್ನ ಈ ನಿರ್ದೇಶನವು ಭಾರತದ ಕಾರಾಗೃಹ ವ್ಯವಸ್ಥೆ ಹಾಗೂ ಮಾನವ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಪ್ರಧಾನ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ವೀಕ್ಷಕರ ಮಂಡಳಿ ರಚಿಸುವುದರಿಂದ ಕಾರಾಗೃಹಗಳ ಒಳಗಿನ ಶೋಷಣೆಯನ್ನು ತಡೆದು, ಬಂದೀಖಾನೆಗಳನ್ನು ‘ಶಿಕ್ಷೆಯ ತಾಣ’ಗಳಿಂದ ’ಸುಧಾರಣಾ ಕೇಂದ್ರ’ಗಳಾಗಿ ಬದಲಾಯಿಸಲು ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ.
ಆದರೆ, ಇಲ್ಲಿ ಸರ್ಕಾರ ಕೇವಲ ಕಾಯ್ದೆ ರೂಪಿಸಿದರೆ ಸಾಲದು; ಜೈಲುಗಳ ಒಳಗಿನ ನೈಜ ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಿ, ವರದಿ ಸಲ್ಲಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಘಿ ನಿರ್ವಹಿಸಬೇಕಿದೆ. ಈವರೆಗೆ ಕೆಲವು ಜೈಲುಗಳಲ್ಲಿ ಶೌಚಗೃಹ ಸ್ವಚ್ಛತೆ ಅಥವಾ ಕಸ ಗುಡಿಸುವ ಕೆಲಸಗಳನ್ನು ನಿರ್ದಿಷ್ಟ ಕೆಳವರ್ಗದ ಕೈದಿಗಳಿಗೇ ನೀಡಲಾಗುತ್ತಿತ್ತು (ಸುಕನ್ಯಾ ಶಾಂತಾ ಪ್ರಕರಣದ ತೀರ್ಪಿನಲ್ಲಿ ಇದನ್ನು ಉಲ್ಲೇಖಿಸಲಾಗಿತ್ತು). ಹೊರಗಿನ ವೀಕ್ಷಕರ ಮಂಡಳಿಯು ಇದಕ್ಕೆ ತಡೆ ಒಡ್ಡಿ, ಕಾಯಕ ವಿಭಾಗದಲ್ಲಿ ಸಮಾನತೆ ತರಲಿದ್ದು, ಜೈಲುಗಳ ದಾಖಲೆ ಪುಸ್ತಕಗಳಲ್ಲಿ ಜಾತಿ ನಮೂದಿಸುವು ದನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸುಪ್ರೀಂ ಆದೇಶಿಸಿರುವುದು ಸ್ವಾಗತಾರ್ಹ.
ಇನ್ನು ಮುಂದೆ, ಜೈಲು ಆಡಳಿತವು ಕೇವಲ ಪೊಲೀಸ್ ಅಥವಾ ಜೈಲು ಅಧಿಕಾರಿಗಳ ಹಿಡಿತದಲ್ಲೇ ಇರದೆ, ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿಕಟ ಪರಿಶೀಲನೆಗೆ ಒಳಪಡುತ್ತದೆ. ವೀಕ್ಷಕರ ಮಂಡಳಿಯು ಮುನ್ಸೂಚನೆ ಇಲ್ಲದೆ ಜೈಲುಗಳಿಗೆ ಭೇಟಿ ನೀಡಿ ಕೈದಿಗಳ ಸ್ಥಿತಿಗತಿ, ಆಹಾರದ ಗುಣಮಟ್ಟ ಮತ್ತು ಆರೋಗ್ಯ ಸೇವೆಗಳನ್ನು ಪರಿಶೀಲಿಸಬಹುದು. ಅಲ್ಲದೆ, ಕೈದಿಗಳು ಜೈಲು ಅಧಿಕಾರಿಗಳಿಂದ ಅನುಭವಿಸುವ ಶಾರೀರಿಕ ಅಥವಾ ಮಾನಸಿಕ ಕಿರುಕುಳ, ದೌರ್ಜನ್ಯಗಳ ಬಗ್ಗೆ ಯಾವುದೇ ಭಯವಿಲ್ಲದೆ ನೇರವಾಗಿ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ದೂರು ನೀಡಬಹುದು. ವಿಚಾರಣಾಧೀನ ಕೈದಿಗಳಿಗೆ ಸಮಯಕ್ಕೆ ಸರಿಯಾಗಿ ಉಚಿತ ಕಾನೂನು ನೆರವು ಸಿಗುತ್ತಿದೆಯೇ ಎಂಬುದನ್ನು ಮಂಡಳಿಯು ಖಾತರಿಪಡಿಸುತ್ತದೆ.
ಕಾರಾಗೃಹಗಳಲ್ಲಿನ ಅತಿಯಾದ ಜನಸಂದಣಿ, ನೈರ್ಮಲ್ಯ ಕೊರತೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಗುರುತಿಸಿ ಸರ್ಕಾರಕ್ಕೆ ಕಟ್ಟುನಿಟ್ಟಿನ ವರದಿ ಸಲ್ಲಿಸಲು ಈ ವ್ಯವಸ್ಥೆ ನೆರವಾಗುತ್ತದೆ. ವಿಶೇಷವಾಗಿ ಮಹಿಳಾ ಕೈದಿಗಳು ಅನುಭವಿಸುವ ಸಮಸ್ಯೆಗಳು ಮತ್ತು ಅವರ ಮಕ್ಕಳ ಪಾಲನೆ-ಪೋಷಣೆಯ ಮೇಲೂ ಈ ವೀಕ್ಷಕ ಮಂಡಳಿ ನಿಗಾ ವಹಿಸುತ್ತದೆ. ಒಟ್ಟಾರೆಯಾಗಿ, ಈ ಕ್ರಮವು ಸಂವಿಧಾನ ನೀಡಿರುವ ‘ಬದುಕುವ ಮತ್ತು ಗೌರವಯುತವಾಗಿ ಜೀವಿಸುವ’ ಮೂಲಭೂತ ಹಕ್ಕನ್ನು ಕೈದಿಗಳಿಗೂ ಖಾತರಿ ಪಡಿಸುತ್ತದೆ. ಸುಪ್ರೀಂ ಕೋರ್ಟ್ನ ಈ ಆದೇಶವು ಜೈಲಿನ ನಾಲ್ಕುಗೋಡೆಗಳ ನಡುವೆಯೂ ನ್ಯಾಯ, ಪಾರದರ್ಶಕತೆ ಮತ್ತು ಮಾನವೀಯತೆ ಉಳಿಯುವಂತೆ ಮಾಡುತ್ತದೆ.