ಸಂಪಾದಕೀಯ; ಕಠಿಣ ಕ್ರಮ ಅಗತ್ಯ

Editorial
Editorial
Published on
ಮಹಾರಾಷ್ಟ್ರದಲ್ಲಿ ವಿಷಪೂರಿತ ಮದ್ಯವನ್ನು ಸೇವಿಸಿದ ಪರಿಣಾಮ ಎರಡೇ ದಿನದಲ್ಲಿ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕಳ್ಳಬಟ್ಟಿ ದುರಂತ ಅತ್ಯಂತ ಆಘಾತಕಾರಿ ಮತ್ತು ದುರದೃಷ್ಟಕರ. ಭಾರತದಲ್ಲಿ ಕಾನೂನುಬಾಹಿರ ಹಾಗೂ ವಿಷಪೂರಿತ ಮದ್ಯ ಸೇವನೆಯಿಂದ ನೂರಾರು ಜೀವಗಳು ಬಲಿಯಾಗುತ್ತಿರುವ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲೂ ವರದಿಯಾಗುತ್ತಲೇ ಇವೆ. ಕಳ್ಳಬಟ್ಟಿ ದುರಂತಗಳಿಗೆ ಬಡತನವಷ್ಟೇ ಕಾರಣವಲ್ಲ, ಇದರ ಹಿಂದೆ ಆರ್ಥಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ವೈಫಲ್ಯಗಳ ಜಾಲವೇ ಇದೆ. ಕಳ್ಳಬಟ್ಟಿ ತಯಾರಕರು ಮದ್ಯದ ಅಮಲು ಹೆಚ್ಚಿಸಲು ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಮದ್ಯ ತಯಾರಿಸಲು ಮಿಥನಾಲ್ ಅಥವಾ ಕೈಗಾರಿಕಾ ಸ್ಪಿರಿಟ್ ಅನ್ನು ಬಳಸುತ್ತಾರೆ. ಮಿಥನಾಲ್ ವಿಷಕಾರಿಯಾಗಿದ್ದು, ಇದರ ಅಲ್ಪ ಪ್ರಮಾಣದ ಸೇವನೆಯೂ ಕುರುಡುತನ ಅಥವಾ ಸಾವಿಗೆ ಕಾರಣವಾಗುತ್ತದೆ. ಹಳ್ಳಿಗಳ ಮತ್ತು ಗುಡಿಸಲು ಪ್ರದೇಶಗಳ ಮೂಲೆ ಮೂಲೆಗಳಲ್ಲಿ ಕಳ್ಳಬಟ್ಟಿ ದಂಧೆ ನಡೆಯುತ್ತಿದ್ದರೂ, ಸ್ಥಳೀಯ ಆಡಳಿತಗಳು ಸೂಕ್ತ ಸಮಯದಲ್ಲಿ ದಾಳಿ ನಡೆಸದೆ ನಿರ್ಲಕ್ಷ್ಯ ವಹಿಸುವುದು ಅಥವಾ ಕೆಲವೆಡೆ ಭ್ರಷ್ಟಾಚಾರದ ಕಾರಣಕ್ಕೆ ಕಣ್ಣು ಮುಚ್ಚಿ ಕೂರುವುದು ಈ ದಂಧೆ ಬೆಳೆಯಲು ಮುಖ್ಯ ಕಾರಣವಾಗಿದೆ.
ಪ್ಲಾಸ್ಟಿಕ್ ಮತ್ತು ಬಣ್ಣದ ಕೈಗಾರಿಕೆಗಳಲ್ಲಿ ಬಳಸುವ ಮಿಥನಾಲ್ ಮುಕ್ತ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಇದರ ಸಾಗಾಟ ಮತ್ತು ಬಳಕೆಯ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಲ್ಲದಿರುವುದು ಕಳ್ಳಬಟ್ಟಿ ದಂಧೆಕೋರರಿಗೆ ವರದಾನವಾಗಿದೆ. ದೇಶಿ ಮದ್ಯ ಮತ್ತು ಕಳ್ಳಬಟ್ಟಿ ನಡುವಿನ ವ್ಯತ್ಯಾಸ ಹಾಗೂ ಕಳ್ಳಬಟ್ಟಿಯಿಂದ ಜೀವಕ್ಕೆ ಎದುರಾಗುವ ತಕ್ಷಣದ ಅಪಾಯಗಳ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಇಂದಿಗೂ ಸರಿಯಾದ ಅರಿವಿಲ್ಲ. ಇಂತಹ ದುರಂತಗಳನ್ನು ತಡೆಯಲು ಕಾನೂನಿನ ಕಟ್ಟುನಿಟ್ಟಾದ ಜಾರಿ ಮತ್ತು ಸಾಮಾಜಿಕ ಸುಧಾರಣೆಗಳು ಅತ್ಯಗತ್ಯ. ಕೈಗಾರಿಕೆಗಳಿಗೆ ಪೂರೈಕೆಯಾಗುವ ಮಿಥನಾಲ್ ಎಲ್ಲೂ ದುರುಪಯೋಗವಾಗದಂತೆ ಡಿಜಿಟಲ್ ಟ್ರ್ಯಾಕಿಂಗ್ ಮತ್ತು ಕಟ್ಟುನಿಟ್ಟಿನ ಪರವಾನಗಿ ನಿಯಮಗಳನ್ನು ಜಾರಿಗೆ ತರಬೇಕು.
ಕಳ್ಳಬಟ್ಟಿ ತಯಾರಕರು ಹಾಗೂ ಅದರ ವಿತರಕರನ್ನು ಕೇವಲ ಅಬಕಾರಿ ಕಾಯ್ದೆಯಡಿ ಬಂಧಿಸದೆ, ಕೊಲೆಗೆ ಸಮನಾದ ಅಪರಾಧವೆಂದು ಪರಿಗಣಿಸಿ ಕಠಿಣ ಜೈಲು ಶಿಕ್ಷೆ ಹಾಗೂ ಸಂಘಟಿತ ಅಪರಾಧ ತಡೆ ಕಾಯ್ದೆಯಡಿ ಕ್ರಮ ಜರುಗಿಸಬೇಕು. ಯಾವುದೇ ಒಂದು ವ್ಯಾಪ್ತಿಯಲ್ಲಿ ಕಳ್ಳಬಟ್ಟಿ ದಂಧೆ ಪತ್ತೆಯಾದರೆ ಅಥವಾ ದುರಂತ ಸಂಭವಿಸಿದರೆ, ಅಲ್ಲಿನ ಸ್ಥಳೀಯ ಪೊಲೀಸ್ ಮತ್ತು ಅಬಕಾರಿ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕು. ಈ ಹಾವಳಿ ತಡೆಯಲು ಸಾಮಾಜಿಕ ಹೊಣೆಗಾರಿಕೆಯೂ ಅಗತ್ಯವಾಗಿದೆ. ಕಳ್ಳಬಟ್ಟಿ ಹಾವಳಿ ಹೆಚ್ಚಿರುವ ಕೊಳೆಗೇರಿಗಳು ಮತ್ತು ಗ್ರಾಮೀಣ ಭಾಗಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ಜೊತೆಗೆ ವ್ಯಸನಮುಕ್ತ ಕೇಂದ್ರಗಳನ್ನು ಉಚಿತವಾಗಿ ಸ್ಥಾಪಿಸಬೇಕು. ಸಾರ್ವಜನಿಕರು ಕಳ್ಳಬಟ್ಟಿ ದಂಧೆಯ ಬಗ್ಗೆ ನಿರ್ಭಯವಾಗಿ ಮಾಹಿತಿ ನೀಡಲು ಟೋಲ್-ಫ್ರೀ ನಂಬರ್ ಮತ್ತು ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡುವ ವ್ಯವಸ್ಥೆಯನ್ನು ಜಾರಿಗೆ ತರುವುದು ಈಗಿನ ಅಗತ್ಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net