ಸಂಪಾದಕೀಯ: ಕಠಿಣ ಕ್ರಮ ಅನಿವಾರ್ಯ

Editorial
Editorial
Published on
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಒಂದರ ಹಿಂದೊಂದು ಸರಣಿ ಬೆಳವಣಿಗೆಗಳು ಘಟಿಸುತ್ತಿವೆ. ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿರುವುದು ಕೇಂದ್ರದ ಆತಂಕವನ್ನು ತುಸು ತಗ್ಗಿಸಿದೆ. "ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ" ಎಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆಯ ಘೋಷಣೆ ಮಾಡಿದ್ದರು. ಗುರುವಾರ ತಡರಾತ್ರಿ ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶ ನೀಡಿದ ಪ್ರಧಾನಿ, ಕಠಿಣ ಕ್ರಮದ ಸುಳಿವು ನೀಡಿದ್ದರು.
ಅದರಂತೆ, ಕೇಂದ್ರ ಸಚಿವ ಸಂಪುಟವು ಶುಕ್ರವಾರ ಕೆಲವು ಪ್ರಮುಖ ನಿರ್ಣಯಗಳಿಗೆ ಅಂಗೀಕಾರ ನೀಡಿದೆ. ಸಾರ್ವತ್ರಿಕ ಪರೀಕ್ಷೆ (ಅಕ್ರಮಗಳ ತಡೆ) ಕಾಯ್ದೆ, 2024ಕ್ಕೆ ತಿದ್ದುಪಡಿ ತರಲು ಸಮ್ಮತಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮದ ಅಂಶಗಳನ್ನು ಈ ನಿರ್ಣಯ ಒಳಗೊಂಡಿದ್ದು, ಈ ಕುಕೃತ್ಯಕ್ಕೆ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಮತ್ತು 10 ಕೋಟಿ ರೂ.ವರೆಗೆ ದಂಡ ವಿಧಿಸುವ ಪ್ರಸ್ತಾವನೆ ಇದರಲ್ಲಿದೆ. ಹಾಲಿ ಕಾನೂನಿನ ಪ್ರಕಾರ, ಇಂಥ ಅಪರಾಧಿಗಳಿಗೆ 3ರಿಂದ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಈ ಕುರಿತ ಮಸೂದೆಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ.
"ಕಳೆದ 10 ವರ್ಷಗಳಲ್ಲಿ 150 ಪ್ರಶ್ನೆಪತ್ರಿಕೆ ಸೋರಿಕೆಗಳು ಆಗಿದ್ದು, ಒಂದು ಪ್ರಕರಣದಲ್ಲಿಯೂ ಶಿಕ್ಷೆಯಾಗಿಲ್ಲ" ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಕೇಂದ್ರ ಸರ್ಕಾರ ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲ್ಲವಾದ್ದರಿಂದ ಈ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೊಂದೆಡೆ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟುಹಿಡಿದಿದೆ. ಈ ಬಗ್ಗೆ ಶನಿವಾರ ಮಧ್ಯಾಹ್ನದ ಹೊತ್ತಿಗೆ ನಿಲುವು ಪ್ರಕಟಿಸುವುದಾಗಿ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. ಒಂದೊಮ್ಮೆ ಪ್ರಧಾನ್ ರಾಜೀನಾಮೆ ನೀಡದಿದ್ದರೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಸಿಜೆಪಿ ಪ್ರಮುಖರು ಹೇಳಿದ್ದಾರೆ. ಹೀಗಾಗಿ ಮುಂದಿನ ಬೆಳವಣಿಗೆಯನ್ನು ಕಾದುನೋಡಬೇಕಿದೆ.
ಅದೇ ಹೊತ್ತಿಗೆ, ದೇಶದ ಹಲವೆಡೆ ಈ ಪ್ರತಿಭಟನೆ ವಿಸ್ತರಿಸಿರುವುದರಿಂದ ಅನ್ಯದಾರಿಗೆ ಹೊರಳದಂತೆ ಕಟ್ಟೆಚ್ಚರವೂ ಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಮರುಪರೀಕ್ಷೆಯನ್ನೇನೋ ಯಶಸ್ವಿಯಾಗಿ ನಡೆಸಿತು. ಆದರೆ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಒಟ್ಟಾರೆಯಾಗಿ ಜನಮಾನಸದಲ್ಲಿ ಇದ್ದ ಭಾವನೆಗಳನ್ನು ಗ್ರಹಿಸಿ ಆಗಲೇ ಕ್ರಮಕ್ಕೆ ಮುಂದಾಗಿದ್ದರೆ ಪರಿಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ ಎಂಬುದು ಕೆಲವರ ಅನಿಸಿಕೆ. ನೀಟ್ ಮಾತ್ರವಲ್ಲ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸುವ ಯಾವುದೇ ಪರೀಕ್ಷೆಯ ಪ್ರಶ್ನೆಪತ್ರಿಕೆಗಳೂ ಸೋರಿಕೆಯಾಗಬಾರದು. ಏಕೆಂದರೆ ಲಕ್ಷಾಂತರ ಕನಸುಗಳು ಇದರ ಹಿಂದಿರುತ್ತವೆ ಮತ್ತು ಅಪಾರ ಶ್ರಮ ಇರುತ್ತದೆ. ಆಯಾ ರಾಜ್ಯಮಟ್ಟದ ಪರೀಕ್ಷೆಗಳಲ್ಲಿ ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಇರುತ್ತದೆ. ಕೆಲವರು ಆಪಾದಿಸುವಂತೆ, ಪ್ರಶ್ನೆಪತ್ರಿಕೆ ಅಕ್ರಮದಲ್ಲಿ ಕೋಚಿಂಗ್ ಕೇಂದ್ರಗಳು ಮತ್ತು ಸಂಘಟಿತ ಜಾಲದ ಪಾತ್ರ ಇರುತ್ತದೆಯೇ ಎಂಬುದರಿಂದ ಹಿಡಿದು ಸಮಗ್ರವಾಗಿ ತನಿಖೆ ನಡೆದು ವಾಸ್ತವಾಂಶ ಬಯಲಾದರೆ ಸಾರ್ವಜನಿಕರಿಗೆ ಖಚಿತ ಚಿತ್ರಣ ಸಿಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net