ಸಂಪಾದಕೀಯ: ಅಕ್ರಮಕ್ಕೆ ತಡೆ

Editorial
Editorial
Published on
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ. ಮುಖಚರ್ಯೆಸಹಿತ ಬಯೋಮೆಟ್ರಿಕ್ ಹಾಜರಾತಿಯೂ ಇದರಲ್ಲಿ ಒಂದು. ಈ ವ್ಯವಸ್ಥೆ ಜಾರಿಗೆ ಬಂದ ಒಂದೇ ವಾರದಲ್ಲಿ ಬಹುತೇಕ ರಾಜ್ಯಗಳಲ್ಲಿ ಮಾನವ ದಿನಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಎಷ್ಟರಮಟ್ಟಿಗೆ ಎಂದರೆ, ದಿನಂಪ್ರತಿ 5ರಿಂದ 8 ಲಕ್ಷದಷ್ಟು ಇದ್ದ ಮಾನವ ದಿನಗಳು ಈಗ ಎರಡು ಲಕ್ಷ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ ಎಂದು ವರದಿಗಳು ತಿಳಿಸಿವೆ.
ಅಂದರೆ, ಈ ಯೋಜನೆಯಲ್ಲಿ ಕೂಲಿ ಕಾರ್ವಿುಕರ ಬೇನಾಮಿ ಹಾಜರಾತಿಗೆ ಅಷ್ಟರಮಟ್ಟಿಗೆ ತಡೆ ಬಿದ್ದಿದೆ ಎಂದರ್ಥ. ಸರ್ಕಾರಿ ಯೋಜನೆಗಳಲ್ಲಿ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಪಾರದರ್ಶಕತೆ ತರಲು ಸಾಧ್ಯ ಮತ್ತು ಅನಗತ್ಯ ಹಣದ ಪೋಲನ್ನು ಕೂಡ ತಡೆಯಲು ಸಹಾಯವಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನವಾಗುತ್ತದೆ. ನರೇಗಾದಲ್ಲಿ, ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಿದ್ದಂತೆ ಕೂಲಿ ಕಾರ್ವಿುಕರ ಹೆಸರು, ಆಧಾರ್ ಕಾರ್ಡ್ ನಂಬರ್ ಫೋಟೋ ಸಹಿತ ಕಾಣಿಸುತ್ತದೆ. ಕಾರ್ವಿುಕ ಸ್ಥಳದಲ್ಲಿ ಇದ್ದಾನೋ ಇಲ್ಲವೋ ಎಂಬುದು ಸ್ವಯಂಚಾಲಿತವಾಗಿ ದಾಖಲಾಗುತ್ತದೆ. 
ನರೇಗಾ ಯೋಜನೆಯಲ್ಲಿ ಬೇನಾಮಿ ಹಾಜರಾತಿ ನಡೆಯುತ್ತಿದೆಯೆಂಬ ಆರೋಪ ಬಹಳ ದಿನಗಳಿಂದ ಇತ್ತು. ಕೆಲವು ಪ್ರಕರಣಗಳಲ್ಲಿ ತನಿಖೆ ನಡೆದು ಇದು ದೃಢಪಟ್ಟಿದ್ದೂ ಇದೆ. ಆಯಾ ಪ್ರಕರಣಕ್ಕೆ ಸಂಬಂಧಿಸಿ ಕ್ರಮವಾಗಿರಬಹುದಾದರೂ, ಈ ದಂಧೆಗೆ ಪೂರ್ಣವಾಗಿ ತಡೆಹಾಕಲು ಸಾಧ್ಯವಾಗಿರಲಿಲ್ಲ. ಈಗ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಹಂತಹಂತವಾಗಿ ಜಾರಿಗೆ ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಹಾಜರಾತಿ ಕಳ್ಳಾಟ ನಡೆಸಲು ಆಗದೆಂಬುದು ಅಧಿಕಾರಿಗಳ ವಿಶ್ವಾಸ. 
ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಬದಲಿಸಿದ್ದು, ನಿಯಮಾವಳಿಗಳಲ್ಲಿ ಕೂಡ ಕೆಲ ಬದಲಾವಣೆಗಳನ್ನು ಮಾಡಿದೆ. ಈ ಕ್ರಮಕ್ಕೆ ಕರ್ನಾಟಕವೂ ಸೇರಿ ಕೆಲ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಯೋಜನೆ ಮಾರ್ಪಾಟಿನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ; ಯೋಜನೆಯಲ್ಲಿ ರಾಜ್ಯಗಳು ಭರಿಸಬೇಕಾದ ಪಾಲನ್ನು ಹೆಚ್ಚಿಸಲಾಗಿದ್ದು, ಕೇಂದ್ರದ ಪಾಲನ್ನು ಕಡಿಮೆ ಮಾಡಲಾಗಿದೆ. ಇದರಿಂದ ರಾಜ್ಯಗಳಿಗೆ ಹೊರೆಯಾಗುತ್ತದೆ. ಹಾಗೂ, ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಕೊಡಮಾಡಲಾಗಿದೆ ಎಂಬಿತ್ಯಾದಿ ಆಕ್ಷೇಪ ಈ ರಾಜ್ಯಗಳದ್ದು. ಈ ವಾದ-ವಿವಾದ ಏನೇ ಇದ್ದರೂ, ಯೋಜನೆಯಲ್ಲಿ ಅಕ್ರಮ ನಡೆಯುವುದಕ್ಕೆ ತಡೆಹಾಕಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
 ಕಂದಾಯ, ಸಾರಿಗೆ, ಗೃಹ, ಗ್ರಾಮೀಣಾಭಿವೃದ್ಧಿ, ಕೃಷಿ ಮುಂತಾದ ಸರ್ಕಾರಿ ಇಲಾಖೆಗಳಲ್ಲಿ ತಂತ್ರಜ್ಞಾನ ಅಳವಡಿಕೆ ನಡೆಯುತ್ತಿದೆ. ಇದು ನಿರಂತರ ಪ್ರಕ್ರಿಯೆ. ಸರ್ಕಾರಗಳ ಯಾವುದೇ ಯೋಜನೆಗಳ ಯಶಸ್ಸು ನಿಂತಿರುವುದು ಅವು ಅರ್ಹ ಜನರನ್ನು ಸರಿಯಾಗಿ ತಲುಪಿವೆಯೇ ಎಂಬುದರ ಮೇಲೆ. ಅದಿಲ್ಲದೆ ಹೋದರೆ, ಸರ್ಕಾರಗಳ ಬೊಕ್ಕಸಕ್ಕೆ ಹೊರೆಯಾಗುತ್ತದೆಯೇ ವಿನಾ ಯೋಜನೆಯ ಮೂಲ ಉದ್ದೇಶ ಈಡೇರದು. ಈ ನಿಟ್ಟಿನಲ್ಲಿ ತಂತ್ರಜ್ಞಾನ ನೆರವಿಗೆ ಬರಬಲ್ಲದು. ಅದರೊಟ್ಟಿಗೆ, ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಸಹ ಜನಪರ ಆಡಳಿತ ನೀಡುವ ಮನೋಭಾವ ಇರಬೇಕು. ಜನರಿಗೂ ಯೋಜನೆಯ ಮಾಹಿತಿ, ಬಳಕೆಯ ವಿವೇಚನೆ ಇರಬೇಕು. ಅಂದಾಗ ಕಣ್ಣು ಕೋರೈಸುವ ಬದಲಾವಣೆ ಸಾಧ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net