

ಒಂದೆಡೆ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಸಮರ, ಸುಂಕ ಸಮರ ತೀವ್ರಗೊಳ್ಳುತ್ತಿರುವ ನಡುವೆ ಭಾರತ ಹಲವು ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಮಾಡಿಕೊಂಡು, ಸಹಕಾರ ವೃದ್ಧಿಸುತ್ತಿರುವುದು ಮಹತ್ವದ ಬೆಳವಣಿಗೆ. ಸೋಮವಾರ ಭಾರತ ನ್ಯೂಜಿಲೆಂಡ್ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ‘ಈ ಒಪ್ಪಂದವು ತಲೆಮಾರಿಗೆ ಒಮ್ಮೆ ಮಾತ್ರ ಸಾಧ್ಯವಾಗುವಂಥದು’ ಎಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೊಫರ್ ಲಕ್ಸರ್ ಬಣ್ಣಿಸಿದ್ದು, ಒಪ್ಪಂದದ ಮಹತ್ವವನ್ನೂ ಬಿಂಬಿಸುತ್ತದೆ. ಒಪ್ಪಂದದ ಭಾಗವಾಗಿ ಭಾರತಕ್ಕೆ ನ್ಯೂಜಿಲೆಂಡ್ನಿಂದ 1.88 ಲಕ್ಷ ಕೋಟಿ ರೂ. ನೆರ ಹೂಡಿಕೆ ಹರಿದು ಬರಲಿದೆ. ‘ಮುಕ್ತ ವ್ಯಾಪಾರ ಒಪ್ಪಂದವು ದೇಶದ ರೈತರು, ಯುವಕರು, ಮಹಿಳೆಯರು, ಎಂಎಸ್ಎಂಇ ವಲಯ, ಕುಶಲಕರ್ವಿುಗಳು, ನವೋದ್ಯಮಗಳು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನ್ಯೂಜಿಲೆಂಡ್ನಿಂದ ಹೂಡಿಕೆಯ ಭರವಸೆ ಸಿಕ್ಕಿರುವುದು ಕೃಷಿ, ಉತ್ಪಾದನೆ, ಆವಿಷ್ಕಾರ ಮತ್ತು ತಂತ್ರಜ್ಞಾನ ವಲಯಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಒಪ್ಪಂದ ಮಾತುಕತೆ 2010ರಲ್ಲಿಯೇ ಆರಂಭವಾಗಿತ್ತು. ಒಂಬತ್ತು ಸುತ್ತಿನ ಮಾತುಕತೆಗಳ ನಂತರ 2015ರಲ್ಲಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಬಳಿಕ 2025ರ ಮಾರ್ಚ್ನಲ್ಲಿ ಮರಳಿ ಮಾತುಕತೆ ಆರಂಭಿಸಿ, 2025ರ ಡಿಸೆಂಬರ್ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು. ಸರಕು, ಸೇವೆಗಳು, ಕಸ್ಟಮ್ಸ್ ನಿಯಮಗಳು, ವಿವಾದ ಪರಿಹಾರ ಸೇರಿದಂತೆ ಒಟ್ಟು 20 ಅಧ್ಯಾಯಗಳನ್ನು ಈ ಒಪ್ಪಂದ ಒಳಗೊಂಡಿದೆ. ಒಪ್ಪಂದದಲ್ಲಿ ಭಾರತವು ದೇಶೀಯ ಹೈನುಗಾರಿಕೆ ಮತ್ತು ಕೃಷಿ ವಲಯದ ಹಿತಾಸಕ್ತಿಗಳನ್ನು ಕಾಪಾಡಲು ಎಚ್ಚರಿಕೆ ವಹಿಸಿದೆ.
ಇನ್ನು ಮುಂದೆ ಭಾರತದ ಜವಳಿ, ಪ್ಲಾಸ್ಟಿಕ್ ವಸ್ತುಗಳು, ಚಮೋತ್ಪನ್ನ ಹಾಗೂ ಇಂಜಿನಿಯರಿಂಗ್ ಸರಕುಗಳು ಯಾವುದೇ ಸುಂಕವಿಲ್ಲದೆ ನ್ಯೂಜಿಲೆಂಡ್ ಪ್ರವೇಶಿಸುತ್ತವೆ. ಮುಂದಿನ 15 ವರ್ಷಗಳ ಅವಧಿಯಲ್ಲಿ 20 ಶತಕೋಟಿ ಡಾಲರ್ ನೇರ ಬಂಡವಾಳ ಹೂಡಿಕೆಗೆ ಸಿದ್ಧ ಎಂದು ನ್ಯೂಜಿಲೆಂಡ್ ಹೇಳಿದ್ದು, ಈ ಮೂಲಕ ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಪ್ರಸ್ತುತ ಭಾರತವು ನ್ಯೂಜಿಲೆಂಡ್ಗೆ ಬಟ್ಟೆ, ಔಷಧ, ಟ್ರಾಕ್ಟರ್, ನೀರಾವರಿ ಉಪಕರಣ, ಕೃಷಿ ಸಲಕರಣೆ, ಯಂತ್ರೋಪಕರಣ, ವಾಹನ, ಕಬ್ಬಿಣ, ಉಕ್ಕು, ಕಾಗದ, ಎಲೆಕ್ಟ್ರಾನಿಕ್ಸ್, ಸೀಗಡಿ, ವಜ್ರ, ಬಾಸ್ಮತಿ ಅಕ್ಕಿ ಮುಂತಾದವುಗಳನ್ನು ರಫ್ತು ಮಾಡುತ್ತಿದೆ. ಅಲ್ಲಿಂದ ಭಾರತಕ್ಕೆ ಕೃಷಿ ಸರಕು, ಖನಿಜಗಳು, ಸೇಬು, ಕಿವಿಫೂ›ಟ್, ಮಾಂಸ, ಲ್ಯಾಕ್ಟೋಸ್ ಸಿರಪ್, ಮರ, ಉಣ್ಣೆ, ಸ್ಕ್ರಾ್ಯಪ್ ಲೋಹ ಮುಂತಾದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಷ್ಟ್ರಗಳ ನಡುವೆ ನಡೆಯುವ ಆರ್ಥಿಕ ಹೊಂದಾಣಿಕೆಯೇ ಎಫ್ಟಿಎ. ಇದು ರಫ್ತು ಹಾಗೂ ಹೂಡಿಕೆಯನ್ನು ಹೆಚ್ಚಿಸುವ ಕ್ರಮವಾಗಿದೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಹಲವು ಪ್ರಯೋಜನಗಳಿವೆ. ಪಾಲುದಾರ ರಾಷ್ಟ್ರಗಳ ಉತ್ಪನ್ನಗಳು ಭಾರತಕ್ಕೆ ಶೂನ್ಯ ತೆರಿಗೆಯೊಂದಿಗೆ ಪ್ರವೇಶಿಸುತ್ತವೆ. ಇದರಿಂದ ರಫ್ತು ಮಾರುಕಟ್ಟೆಯಲ್ಲಿ ವೈವಿಧ್ಯ ಮತ್ತು ವಿಸ್ತರಣೆಗೂ ಅನುಕೂಲವಾಗುತ್ತದೆ. ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತವು ಈವರೆಗೆ ಶ್ರೀಲಂಕಾ, ಭೂತಾನ್, ಥಾಯ್ಲೆಂಡ್, ಸಿಂಗಾಪುರ, ಮಲೇಷ್ಯಾ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಸಂಯುಕ್ತ ಅರಬ್ ಸಂಸ್ಥಾನ, ಮಾರಿಷಸ್ ಮತ್ತು ಆಗ್ನೇಯ ಏಷ್ಯಾದ ಆಸಿಯಸ್ನ 10 ರಾಷ್ಟ್ರಗಳು ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಐಸ್ಲೆಂಡ್, ಲಿಕ್ಟನ್ಸ್ಟೈನ್, ನಾರ್ವೆ ಮತ್ತು ಸ್ವಿಜರ್ಲೆಂಡ್ ಮತ್ತು ಇತ್ತೀಚೆಗೆ ಐರೋಪ್ಯ ಒಕ್ಕೂಟದ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ, ಚಿಲಿ, ಪೆರು ಮತ್ತು ಇಸ್ರೇಲ್ ಜತೆಗೂ ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿ ಮಾತುಕತೆ ನಡೆಯುತ್ತಿದೆ. ಆರ್ಥಿಕವಾಗಿ ಬೆಳವಣಿಗೆಯ ಹಾದಿಯಲ್ಲಿ ಕ್ರಮಿಸುತ್ತಿರುವ ಭಾರತ ವ್ಯಾಪಾರ ರಂಗದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ.