_1772647027953.webp?w=480&auto=format%2Ccompress&fit=max)
_1772647027953.webp?w=480&auto=format%2Ccompress&fit=max)
ಇಂದಿನ ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ತಂತ್ರಜ್ಞಾನದ ಅತಿಯಾದ ಬಳಕೆ, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಉಂಟುಮಾಡುತ್ತಿರುವ ಸ್ಕ್ರೀನ್ ವ್ಯಸನ ಈಗ ಜಾಗತಿಕ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸ್ಕ್ರೀನ್ ಸಮಯವನ್ನು ನಿಯಂತ್ರಿಸಲು ಅನೇಕ ರಾಷ್ಟ್ರಗಳು ಕಠಿಣ ಕಾನೂನುಗಳನ್ನು ಜಾರಿಗೆ ತರಲು ಮುಂದಾಗುತ್ತಿವೆ.
ಆಸ್ಟ್ರೇಲಿಯಾದಂತಹ ದೇಶಗಳು ಹದಿಹರೆಯದವರಿಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ವಯಸ್ಸಿನ ಮಿತಿಯನ್ನು ಹೇರಲು ಹೊರಟಿರುವುದು ಇದಕ್ಕೆ ಒಂದು ಉದಾಹರಣೆ. ಭಾರತದಲ್ಲೂ ಇಂತಹ ನಿಯಂತ್ರಣಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಕೇವಲ ಕಾನೂನು ಅಥವಾ ನಿಷೇಧದ ಮೂಲಕ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ವಾಸ್ತವವೇನೆಂದರೆ, ಕಾನೂನಿಗೆ ತನ್ನದೇ ಆದ ಮಿತಿಗಳಿವೆ. ತಂತ್ರಜ್ಞಾನವು ಇಂದು ಕೇವಲ ಮನೋರಂಜನೆಯ ಸಾಧನವಾಗಿ ಉಳಿದಿಲ್ಲ; ಅದು ಶಿಕ್ಷಣ, ಸಂವಹನ ಮತ್ತು ಜ್ಞಾನಾರ್ಜನೆಯ ಪ್ರಮುಖ ಮೂಲವಾಗಿದೆ.
ಕೋವಿಡ್ ನಂತರದ ದಿನಗಳಲ್ಲಿ ಶಿಕ್ಷಣವು ಡಿಜಿಟಲ್ ರೂಪಕ್ಕೆ ತೆರೆದುಕೊಂಡಿದ್ದು, ಮಕ್ಕಳನ್ನು ಸಂಪೂರ್ಣವಾಗಿ ಸ್ಕ್ರೀನ್ನಿಂದ ದೂರವಿಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಕಟ್ಟುನಿಟ್ಟಿನ ನಿಷೇಧವು ಮಕ್ಕಳಲ್ಲಿ ಕುತೂಹಲ ಹೆಚ್ಚಿಸಿ, ಅವರು ಕದ್ದುಮುಚ್ಚಿ ತಂತ್ರಜ್ಞಾನ ಬಳಸುವಂತೆ ಪ್ರೇರೇಪಿಸ ಬಹುದು ಅಥವಾ ಅವರಲ್ಲಿ ಬಂಡಾಯದ ಮನೋಭಾವ ಬೆಳೆಸಬಹುದು. ಇದು ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧ ಹದಗೆಡಿಸುವ ಸಾಧ್ಯತೆಯೂ ಇರುತ್ತದೆ. ತಂತ್ರಜ್ಞಾನದ ಅತಿಯಾದ ಬಳಕೆ ಮಕ್ಕಳ ಮಾನಸಿಕ ಆರೋಗ್ಯ, ಏಕಾಗ್ರತೆ ಮತ್ತು ದೈಹಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಜ. ಆದರೆ, ಇದಕ್ಕೆ ಪರಿಹಾರ ನಿಷೇಧದಲ್ಲಲ್ಲ, ಬದಲಾಗಿ ‘ಡಿಜಿಟಲ್ ಸಾಕ್ಷರತೆ’ಯಲ್ಲಿದೆ. ಮಕ್ಕಳಿಗೆ ಅಂತರ್ಜಾಲದ ಸುರಕ್ಷಿತ ಬಳಕೆ ಮತ್ತು ಸ್ವಯಂ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಇಲ್ಲಿ ಪೋಷಕರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಸರ್ಕಾರಗಳು ಕಾನೂನುಗಳನ್ನು ರೂಪಿಸಬಹುದು, ಆದರೆ ಮನೆಯೊಳಗಿನ ವಾತಾವರಣವನ್ನು ಸರಿಪಡಿಸುವುದು ಪೋಷಕರ ಜವಾಬ್ದಾರಿ. ಮಕ್ಕಳಿಗೆ ಸ್ಕ್ರೀನ್ ಸಮಯ ಕಡಿಮೆ ಮಾಡಿ ಎಂದು ಹೇಳುವ ಮೊದಲು, ಪೋಷಕರು ತಾವೇ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮಾದರಿಯಾಗಬೇಕು.
ಮನೆಯಲ್ಲಿ ಮೊಬೈಲ್ ಮುಕ್ತ ಸಮಯ ಮತ್ತು ಸ್ಥಳಗಳನ್ನು ನಿರ್ಧರಿಸುವುದು, ಮಕ್ಕಳನ್ನು ದೈಹಿಕ ಕ್ರೀಡೆ ಹಾಗೂ ಓದಿನತ್ತ ಆಕರ್ಷಿಸುವುದು ಪೋಷಕರ ಆದ್ಯತೆಯಾಗಬೇಕು. ಸ್ಕ್ರೀನ್ ಸಮಯದ ನಿಯಂತ್ರಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಇದು ಶಿಕ್ಷಣ ಸಂಸ್ಥೆಗಳು, ತಂತ್ರಜ್ಞಾನ ಕಂಪನಿಗಳು, ಮುಖ್ಯವಾಗಿ ಪೋಷಕರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ. ತಂತ್ರಜ್ಞಾನವನ್ನು ಶಾಪ ಎಂದು ಭಾವಿಸದೆ, ಅದನ್ನು ಮಿತವಾಗಿ ಮತ್ತು ಜಾಣ್ಮೆಯಿಂದ ಬಳಸುವ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಕಾನೂನುಗಳು ಕೇವಲ ಮಾರ್ಗದರ್ಶಿಯಾಗಿರಬೇಕೇ ಹೊರತು, ವೈಯಕ್ತಿಕ ಸ್ವಾತಂತ್ರ್ಯಕ್ಕೆ, ಜ್ಞಾನದ ಹಾದಿಗೆ ಅಡ್ಡಿಯಾಗಬಾರದು. ಡಿಜಿಟಲ್ ಯುಗದಲ್ಲಿ ಸ್ವಯಂ ಶಿಸ್ತೇ ಎಲ್ಲಕ್ಕಿಂತ ದೊಡ್ಡ ಕಾನೂನು.